`ನಂತೂರು ವೃತ್ತ’ ನಿತ್ಯ ಟ್ರಾಫಿಕ್ ಜಾಮ್ ಜೊತೆಗೆ ಹೊಂಡಗಳ ಖೆಡ್ಡಾ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರವನ್ನು ಸೇರುವ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ವೃತ್ತ ನಂತೂರು ಜಂಕ್ಷನ್. ಈಗಾಗಲೇ ಇಲ್ಲಿ ಹಲವಾರು ಅಪಘಾತಗಳ ಸರಮಾಲೆ ನಡೆದು ಮರಣಮೃದಂಗ ಬಾರಿಸಿದ ರಸ್ತೆಯಾಗಿ ಪರಿವರ್ತನೆಯಾಗಿದ್ದರೂ ಸಂಬಂಧಿತರು ಇಲ್ಲಿ ರಸ್ತೆ ದುರಸ್ತಿ ಪಡಿಸಲು ನಿರ್ಲಕ್ಷ್ಯ ವಹಿಸುತ್ತಲೇ ಬಂದಿದ್ದಾರೆ. ಮೂರು ರಾಷ್ಟ್ರೀಯ ಹೆದ್ದಾರಿಗಳ ಸಂಗಮ ಸ್ಥಳವಾಗಿರುವ ನಂತೂರಿನಲ್ಲಿ ಹೊಂಡಗಳೇ ತುಂಬಿದ್ದು, ಇನ್ನೂ ಉಪಯೋಗಕ್ಕೆ ಬಾರದ ಸಿಗ್ನಲ್ ಅವ್ಯವಸ್ಥೆ, ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಅಪಘಾತವಲಯವಾಗಿ ಪರಿವರ್ತನೆಯಾಗಿದೆ.

ಕೆಲವು ಸಮಯಗಳ ಹಿಂದೆ ಇಲ್ಲಿ ಅಪಘಾತವೊಂದು ಸಂಭವಿಸಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಮೀಕ್ಷೆ ನಡೆಸಿ ರಸ್ತೆ ಅಗಲೀಕರಣಗೊಳಿಸಿರುವುದು ಬಿಟ್ಟರೆ ಇನ್ನೇನೂ ಕ್ರಮ ಕೈಗೊಂಡಿಲ್ಲ. ಇಲ್ಲಿ ಸಿಗ್ನಲ್ ಲೈಟುಗಳನ್ನು ಅಳವಡಿಸಿ ತಿಂಗಳುಗಳೇ ಪೂರ್ಣಗೊಂಡಿದ್ದರೂ ದೀಪ ಉರಿಯುತ್ತಿಲ್ಲ. ಟ್ರಾಫಿಕ್ ಪೊಲೀಸರು ಇದ್ದರೂ ಒಂದಿಬ್ಬರು ಪೊಲೀಸರಿಂದ ಇಲ್ಲಿ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ. ಭಾನುವಾರ ಒಂದಿ ಬ್ಬರು ಪೊಲೀಸರು ಇರುತ್ತಾರಾದರೂ ಸಂಚಾರ ದಟ್ಟಣೆ, ಅಡ್ಡಾದಿಡ್ಡಿ ಚಾಲನೆ ಇಲ್ಲಿ ಕಂಡು ಬರುತ್ತಿದೆ.

ನಂತೂರು ಜಂಕ್ಷನ್ ಬಳಿ ರಸ್ತೆ ತೀರಾ ಕೆಟ್ಟು ದೊಡ್ಡ ಹೊಂಡಗಳೇ ಬಿದ್ದಿದ್ದವು. ಸಾಕಷ್ಟು ದ್ವಿಚಕ್ರ ವಾಹನಗಳು ಹಾಗೂ ಲಘು ನಾಲ್ಕು ಚಕ್ರದ ವಾಹನಗಳು ಗುಂಡಿಗೆ ಇಳಿದು ಹಲವು ಬಾರಿ ಆಳವನ್ನೂ ನೋಡಿವೆ. ಸಾರ್ವಜನಿಕರು ದೂರು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೂ ಬಹಳ ಬಾರಿ ಸುದ್ದಿ ಮಾಡಿವೆ. ಕೊನೆಗೂ ಪಾಲಿಕೆ ಇಲ್ಲಿನ ಹೊಂಡಗುಂಡಿಗಳಿಗೆ ಜಲ್ಲಿಕಲ್ಲು ಪುಡಿಗಳನ್ನು ತಂದು ಪ್ಯಾಚ್ ವರ್ಕ್ ಮಾಡಿದೆ. ಆದರೆ ಘನ ವಾಹನಗಳು ಇದರ ಮೇಲೆ ಸಾಗುತ್ತಿದ್ದಂತೆ ಜಲ್ಲಿ ಹುಡಿ ಹಾರಿ ಸಾರ್ವಜನಿಕರಿಗೆ ಧೂಳಿನ ಸಿಂಚನ ಜೊತೆಗೆ ಕಣ್ಣಿಗೂ ಹಾನಿ ಮಾಡುತ್ತಿದೆ. ರಸ್ತೆ ಗುಂಡಿ ಮತ್ತೆ ಆಳವಾಗಿದೆ.

ಬಸ್, ಲಾರಿಯಂತಹ ಘನವಾಹನಗಳು ಜಲ್ಲಿ ಮೇಲೆ ಹಾದು ಹೋಗುತ್ತಿದ್ದಂತೆ ಟಯರಿನಡಿಗೆ ಸಿಲುಕಿದ ಜಲ್ಲಿ ಕಲ್ಲುಗಳು ದೂರಕ್ಕೆ ಸಿಡಿದು ಪಾದಚಾರಿಗಳಿಗೋ, ದ್ವಿಚಕ್ರ ವಾಹನ ಸವಾರರಿಗೋ ಬಡಿಯುತ್ತಿದೆ. ಹೀಗಾಗಿ ಇಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ನಗರ ಪಾಲಿಕೆಯಲ್ಲಿನ 60 ವಾರ್ಡುಗಳಿಗೆ ಸಾಕಷ್ಟು ಎಂಜಿನಿಯರುಗಳು ಇದ್ದರೂ ಇಂತಹ ಕಾಮಗಾರಿಗಳನ್ನು ಮಾಡಲು ಅವರು ಮುಂದಾದಂತೆ ಕಂಡು ಬರುತ್ತಿಲ್ಲ. ಹೊಂಡ ಬಿದ್ದ ರಸ್ತೆಗಳನ್ನು ತುರ್ತಾಗಿ ಸರಿಪಡಿಸುವ ಹೊಣೆಗಾರಿಕೆ ಕೆಲಸವನ್ನು ಪಾಲಿಕೆ ನಿರ್ವಹಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.