ನಂತೂರು ವೃತ್ತಕ್ಕೆ ಸಿಗ್ನಲ್ ಲೈಟ್ ಅಳವಡಿಕೆ

ನಂತೂರು ವೃತ್ತದ ಬಳಿ ಸಿಗ್ನಲ್ ಲೈಟುಗಳ ಅಳವಡಿಕೆ ಕಾರ್ಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅಪಘಾತಗಳ ವೃತ್ತ ಎಂದೇ ಕುಖ್ಯಾತಿಗೆ ಒಳಗಾಗಿದ್ದ ಮಂಗಳೂರಿನ ಪ್ರಮುಖ ವೃತ್ತವಾಗಿರುವ ನಂತೂರು ವೃತ್ತಕ್ಕೆ ಇದೀಗ ಸಿಗ್ನಲ್ ಲೈಟುಗಳನ್ನು ಅಳವಡಿಸುವ ಕಾರ್ಯ ನಡೆದಿದೆ.

ಹಲವು ಸಮಯಗಳಿಂದ ಸಾರ್ವಜನಿಕರು ಇಲ್ಲಿ ಸಿಗ್ನಲ್ ಲೈಟ್, ಸೂಚನಾ ಫಲಕಗಳನ್ನು ಅಳವಡಿಸಬೇಕೆಂಬ ಬೇಡಿಕೆಯನ್ನು ಇರಿಸಿದ್ದರು. ಅತ್ತ ಪಂಪ್ವೆಲ್ ಕಡೆ, ಮೂಡುಬಿದಿರೆ-ಕೈಕಂಬ, ನಂತೂರಿನಿಂದ ಉಡುಪಿ ಮತ್ತು ಕದ್ರಿ ಕಡೆಗೆ ಸಾಗುವ ಪ್ರಮುಖ ನಾಲ್ಕು ರಸ್ತೆಗಳನ್ನು ಒಟ್ಟು ಸೇರಿಸುವ ಈ ವೃತ್ತದಲ್ಲಿ ಹಲವು ಬಸ್ಸುಗಳು, ಲಾರಿಗಳು ಅಪಘಾತಕ್ಕೀಡಾಗಿವೆ. ಅಲ್ಲದೆ ಇಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ನಾಲ್ಕೈದು ಮಂದಿ ಸಂಚಾರಿ ಪೊಲೀಸರು ಇದ್ದರೂ ಕೂಡಾ ಇಲ್ಲಿ ಪ್ರತಿನಿತ್ಯ ಎಂಬಂತೆ ಟ್ರಾಫಿಕ್ ಸಮಸ್ಯೆ ಬಿಗಡಾಯಿಸುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಕೊನೆಗೂ ಇಲ್ಲಿ ಸಿಗ್ನಲ್ ಲೈಟುಗಳನ್ನು ಅಳವಡಿಸಲಾಗುತ್ತಿದ್ದು, ಇನ್ಮುಂದೆ ರಸ್ತೆ ಅಪಘಾತಗಳಿಗೆ ಬ್ರೇಕ್ ಬೀಳಲಿದೆ ಎಂದು ಹೇಳಲಾಗಿದೆ.