ರಸ್ತೆ ಕಾಮಗಾರಿಗೆ ಕೇಂದ್ರ ಅನುದಾನ ಕ್ರೆಡಿಟ್ ಗಿಟ್ಟಿಸಲು ನಳಿನ್, ರೈ ಪೈಪೋಟಿ ಬ್ಯಾನರು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಕೇಂದ್ರ ಸರಕಾರದ ರಸ್ತೆ ನಿಧಿಯಿಂದ ಈಗಾಗಲೇ ಬಿ ಸಿ ರೋಡು ಜಂಕ್ಷನ್ನಿನಿಂದ ಗೂಡಿನಬಳಿ, ಪಾಣೆಮಂಗಳೂರು, ನಂದಾವರ ಮಾರ್ಗವಾಗಿ ಮಾರ್ನಬೈಲ್ ಜಂಕ್ಷನ್ನಿನವರೆಗೆ ರಸ್ತೆ ಅಭಿವೃದ್ದಿಗಾಗಿ 3.5 ಕೋಟಿ ರೂಪಾಯಿ ಅನುದಾನ ಮಂಜೂರುಗೊಂಡಿದೆ. ಈ ಬಗ್ಗೆ ಅಲ್ಲಲ್ಲಿ ಬ್ಯಾನರುಗಳು, ಫ್ಲೆಕ್ಸ್‍ಗಳು, ಕಟೌಟ್‍ಗಳು ರಾರಾಜಿಸುತ್ತಿವೆ.

ರಾಜ್ಯ ಸರಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೇಂದ್ರಕ್ಕೆ ಸಲ್ಲಿಸುವ ಸೆಸ್ ಹಣವನ್ನೇ ರಸ್ತೆ ಅಭಿವೃದ್ದಿ ನಿಧಿಯಾಗಿ ಕೇಂದ್ರ ಸರಕಾರ ಮತ್ತೆ ರಾಜ್ಯಗಳಿಗೆ ಹಂಚುವ ಈ ನಿಧಿ ಬಂಟ್ವಾಳಕ್ಕೆ 3.5 ಕೋಟಿ ರೂಪಾಯಿ ರಾಜ್ಯ ಲೋಕೋಪಯೋಗಿ ಇಲಾಖೆ ಮೂಲಕ ಬಿಡುಗಡೆಗೊಂಡಿದೆ. ಇದು ಕೇಂದ್ರದ ರಸ್ತೆ ಅಭಿವೃದ್ದಿ ನಿಧಿಯಾಗಿರುವುದರಿಂದ ಇದನ್ನು ನಾನೇ ಬಿಡುಗಡೆಗೊಳಿಸಲು ಪ್ರಯತ್ನ ಪಟ್ಟಿದ್ದೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೊಂಡರೆ, ಕ್ಷೇತ್ರದ ಶಾಸಕನಾಗಿ ನಾನೇ ಮಾಡಿಕೊಂಡ ವಿಶೇಷ ಮನವಿ ಮೇರೆಗೆ ಕೇಂದ್ರ ರಸ್ತೆ ನಿಧಿ ನನ್ನ ಕ್ಷೇತ್ರಕ್ಕೆ ಬಿಡುಗಡೆಗೊಂಡಿದೆ ಎಂದು ಸಚಿವ ಬಿ ರಮಾನಾಥ ರೈ ಅವರೂ ಹೇಳಿಕೊಳ್ಳುತ್ತಿದ್ದಾರೆ.

ರಸ್ತೆ ಅಭಿವೃದ್ದಿಗೆ ಕೇಂದ್ರದಿಂದ ಬಂದ ಹಣದ ಹಿನ್ನಲೆ ಪ್ರಯತ್ನ ತಮ್ಮದು ಎಂದು ಸಾರುವ ಪೈಪೋಟಿ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳ ನಾಯಕರು-ಕಾರ್ಯಕರ್ತರಿಂದ ನಡೆಯುತ್ತಲೇ ಇದೆ.