ನಾಯ್ಡು ದೇಶದ ಅತಿ ಶ್ರೀಮಂತ ಸೀಎಂ, ಮಾಣಿಕ್ ಅತ್ಯಂತ ಬಡ ಮುಖ್ಯಮಂತ್ರಿ

ಶೇ 35ರಷ್ಟು ಸೀಎಂಗಳ ವಿರುದ್ಧ ಕ್ರಿಮಿನಲ್ ಪ್ರಕರಣ

ಎಡಿಆರ್ ವರದಿ

ನವದೆಹಲಿ :  ದೇಶದ ವಿವಿಧ ರಾಜ್ಯಗಳ 25 ಮಂದಿ ಮುಖ್ಯಮಂತ್ರಿಗಳು (ಶೇ 81) ಕೋಟ್ಯಾಧಿಪತಿಗಳಾಗಿದ್ದು, ಅವರ ಪೈಕಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದರೆ, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅತ್ಯಂತ ಬಡ ಮುಖ್ಯಮಂತ್ರಿಯಾಗಿದ್ದಾರೆಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾಮ್ರ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ಸಂಸ್ಥೆಗಳು ಬಿಡುಗಡೆಗೊಳಿಸಿದ ವರದಿಯೊಂದು ತಿಳಿಸಿದೆ. ಮುಖ್ಯಮಂತ್ರಿಗಳ ಸ್ವಪ್ರಮಾಣಿತ ಆಸ್ತಿ ಘೋಷಣಾ ಪತ್ರಗಳನ್ನಾಧರಿಸಿ ಈ ವರದಿ ತಯಾರಿಸಲಾಗಿದೆ.

ಈ ವರದಿಯ ಪ್ರಕಾರ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿರುವ ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಅವರ ಒಟ್ಟು ಘೋಷಿತ ಸಂಪತ್ತು ರೂ 177 ಕೋಟಿಗೂ ಅಧಿಕವಾಗಿದೆ. ಅವರ ನಂತರದ ಎರಡನೇ ಸ್ಥಾನ ರೂ 129 ಕೋಟಿಗೂ ಅಧಿಕ ಘೋಷಿತ ಸಂಪತ್ತಿನೊಂದಿಗೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಅವರಿಗೆ ಹೋಗಿದೆ. ಮೂರನೇ ಸ್ಥಾನದಲ್ಲಿ ರೂ 48 ಕೋಟಿಗೂ ಅಧಿಕ ಘೋಷಿತ ಸಂಪತ್ತು ಹೊಂದಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಇದ್ದಾರೆ.

ಅತ್ಯಂತ ಕಡಿಮೆ ಘೋಷಿತ ಸಂಪತ್ತು ಹೊಂದಿರುವ ಮುಖ್ಯಮಂತ್ರಿ ತ್ರಿಪುರಾದ ಮಾಣಿಕ್ ಸರ್ಕಾರ್ ಆಗಿದ್ದು ಅವರ ಒಟ್ಟು ಸಂಪತ್ತಿನ ಮೌಲ್ಯ ರೂ 27 ಲಕ್ಷ ಆಗಿದೆ. ಇವರ ನಂತರದ ಸ್ಥಾನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ರೂ 30 ಲಕ್ಷ) ಹಾಗೂ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ (ರೂ 56 ಲಕ್ಷ) ಅವರಿಗೆ ಹೋಗಿದೆ.

ಶೈಕ್ಷಣಿಕ ಅರ್ಹತೆ

ದೇಶದ ವಿವಿಧ ರಾಜ್ಯಗಳ 31 ಮುಖ್ಯಮಂತ್ರಿಗಳ ಪೈಕಿ ಶೇ 10ರಷ್ಟು ಮಂದಿ 12ನೇ ತರಗತಿ ತೇರ್ಗಡೆಯಾದವರಾಗಿದ್ದರೆ, ಶೇ 39 ಮಂದಿ ಪದವೀಧರರು, ಶೇ 32 ಮಂದಿ ಪದವೀಧರ ವೃತ್ತಿಪರರು, ಶೇ 16 ಮಂದಿ ಸ್ನಾತ್ತಕೋತ್ತರ ಪದವೀಧರರು ಹಾಗೂ ಶೇ 3ರಷ್ಟು ಮಂದಿ ಡಾಕ್ಟರೇಟ್ ಪದವಿ ಹೊಂದಿದವರಾಗಿದ್ದಾರೆ.

ಕ್ರಿಮಿನಲ್ ಪ್ರಕರಣಗಳು

ದೇಶದ ಮುಖ್ಯಮಂತ್ರಿಗಳ ಪೈಕಿ ಶೇ 35ರಷ್ಟು ಮಂದಿ, ಅಂದರೆ ಒಟ್ಟು 31 ಮುಖ್ಯಮಂತ್ರಿಗಳ ಪೈಕಿ 11 ಮಂದಿಯ  ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಕೊಲೆ, ಕೊಲೆಯತ್ನ, ವಂಚನೆ, ಬೆದರಿಕೆ ಮುಂತಾದ ಪ್ರಕರಣಗಳು ಇವರ ಮೇಲಿವೆ ಎಂದು ವರದಿ ತಿಳಿಸಿದೆ.

 

LEAVE A REPLY