ಪೈಪ್ ಲೈನ್ ಸ್ಥಳಾಂತರಿಸದೆ ರಸ್ತೆಗೆ ಕಾಂಕ್ರೀಟೀಕರಣ ಮಾಡಿದ್ದನ್ನು ಖಂಡಿಸಿ ನಾಗರಿಕ ಸಮಿತಿಯಿಂದ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಹಳೆಯ ಮಾರ್ಗದಡಿಯಲ್ಲಿ ಹರಿದಿರುವ ನೀರಿನ ಪೈಪ್ ಲೈನ್, ಒಳಚರಂಡಿ ಹಾಗೂ ವಿದ್ಯುತ್ ಮತ್ತು ದೂರವಾಣಿ ಕೇಬಲುಗಳನ್ನು ಬೇರೆಡೆಗೆ ಸ್ಥಳಾಂತರಿಸದೆ ಸೈಂಟ್ ಆಗ್ನೇಸ್ ಕಾಲೇಜಿನ ಬಳಿ ಮುಂದುವರಿಸಲಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರ ಪಾಲಿಕೆ (ಮನಪಾ) ನಾಗರಿಕ ಕ್ರಿಯಾ ಸಮಿತಿ ಬೆಂದೂರಿನಲ್ಲಿ ಪ್ರತಿಭಟನೆ ನಡೆಸಿತು.

ದೂರವಾಣಿ ಹಾಗೂ ವಿದ್ಯುತ್ ಪೂರೈಕೆ ಕೇಬಲ್ಲುಗಳು, ನೀರು ಪೂರೈಕೆ ಪೈಪ್ ಲೈನುಗಳು ಹಾಗೂ ಒಳಚರಂಡಿ ಮಾರ್ಗಗಳನ್ನು ಬೇರಡೆಗೆ ಸ್ಥಳಾಂತರಿಸದೆ ಇಲ್ಲಿ ಮನಪಾ ಇಂಜಿನಿಯರುಗಳು ಕಾಂಕ್ರೀಟು ರಸ್ತೆ ಕಾಮಗಾರಿ ಆರಂಭಿಸಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಸಮಿತಿ ದೂರಿದೆ.

ಕೇಬಲ್ಲುಗಳು ಮತ್ತು ಕೊಳವೆಗಳು ಇರುವಲ್ಲಿ, ಅವುಗಳನ್ನು ಬೇರೆಡೆಗೆ ತೆರವುಗೊಳಿಸದೆ ಕಾಂಕ್ರೀಟು ಹಾಕಿದಲ್ಲಿ, ಭವಿಷ್ಯದಲ್ಲಿ ಸಂವಹನ ಜಾಲ ಕೈಕೊಡಲಿದೆ ಎಂದು ಕಾರ್ಯಕರ್ತ, ಸಮಿತಿ ಸದಸ್ಯ ಜೆರಾಲ್ಡ್ ಟವರ್ಸ್ ಎಚ್ಚರಿಸಿದ್ದಾರೆ.

ಯುಟಿಲಿಟಿ ಲೈನುಗಳನ್ನು ಬೇರೆಡೆಗೆ ಸ್ಥಳಾಂತರಿಸಿದ ಬಳಿಕವೇ ಮನಪಾ ಆಡಳಿತ ಈ ರಸ್ತೆ ಕಾಂಕ್ರೀಟೀಕರಣಗೊಳಿಸಬೇಕು. ಇಲ್ಲವಾದಲ್ಲಿ ಈ ಭಾಗದ ನಾಗರಿಕರು ಮೂಲಭೂತ ಸೇವೆಗಳಿಗಾಗಿ ಕಠಿಣ ಸ್ಥಿತಿ ಎದುರಿಸಬೇಕಾಗುತ್ತದೆ ಎಂದವರು ಆಗ್ರಹಿಸಿದ್ದಾರೆ. ನಾಗರಿಕರ ಪ್ರತಿಭಟನೆಗೆ `ಆಮ್ ಆದ್ಮಿ ಪಾರ್ಟಿ’ (ಆಪ್) ಬೆಂಬಲ ವ್ಯಕ್ತಪಡಿಸಿದೆ. “ಒಂದು ವೇಳೆ ಯುಟಿಲಿಟಿ ಲೈನುಗಳನ್ನು ಬೇರೆಡೆಗೆ ಸ್ಥಳಾಂತರಿಸದೆ ಇಲ್ಲಿ ರಸ್ತೆ ಕಾಂಕ್ರೀಟು ಕಾಮಗಾರಿ ನಡೆಸಿದಲ್ಲಿ ಮಂಗಳೂರು ನಗರ ಪಾಲಿಕೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು” ಎಂದು ಟವರ್ಸ್ ಎಚ್ಚರಿಸಿದ್ದಾರೆ.