ಕ್ರಿಸ್ಮಸ್ ನಿಷೇಧಿಸಿ, ಆ ದಿನ ತನ್ನ ಅಜ್ಜಿಯ ಆರಾಧಿಸಲು ಆದೇಶಿಸಿದ ಉ ಕೊರಿಯ ಸರ್ವಾಧಿಕಾರಿ

ಸಿಯೋಲ್ : ವಿಚಿತ್ರ ಬೆಳವಣಿಗೆಯೊಂದರಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜುಂಗ್-ಉನ್ ಈ ಬಾರಿ ಕ್ರಿಸ್ಮಸ್ ಆಚರಣೆ ನಿಷೇಧಿಸಿ ಅದಕ್ಕೆ ಬದಲಾಗಿ ಆ ದಿನದಂದು ತನ್ನ ತೀರಿ ಹೋದ ಅಜ್ಜಿಯನ್ನು ಪೂಜಿಸುವಂತೆ ಆದೇಶಿಸಿದ್ದಾರೆ.

ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದರಂತೆ, ಕ್ರಿಸ್ಮಸ್ ತನ್ನ ಅಜ್ಜಿ ಕಿಮ್ ಜಾಂಗ್-ಸುಕ್ ಅವರ ಕುರಿತಾದ ಆಚರಣೆಗೆ ಮೀಸಲು ಎಂದು ಕಿಮ್ ಜುಂಗ್ ಘೋಷಿಸಿಕೊಂಡಿದ್ದಾರೆ. ಕ್ರಿಸ್ಮಸ್ ಹಬ್ಬದ ವಿಚಾರದಲ್ಲಿ ದ್ವೇಷದ ಭಾವನೆಯನ್ನು ಕಿಮ್ ಅವರು ಹೊಂದಿರುವುದು ಇದೇ ಮೊದಲಲ್ಲ. ಕಳೆದ  ಹಲವು ವರ್ಷಗಳಿಂದ ಕ್ರೈಸ್ತರ ಮೇಲೆ ದಬ್ಬಾಳಿಕೆ ನಡೆಸುವ ದೇಶಗಳಲ್ಲಿ ಉತ್ತರ ಕೊರಿಯಾ ಇತರ ದೇಶಗಳಿಗಿಂತ ಬಹಳಷ್ಟು ಮುಂದಿದೆಯೆಂದು ಮಾನವ ಹಕ್ಕುಗಳ ಸಂಘಟನೆ `ಓಪನ್ ಡೋರ್ಸ್ ಯು ಎಸ್ ಎ’ ಹೇಳಿಕೊಂಡಿದೆ.

“ಈ ದೇಶದಲ್ಲಿ ಬೈಬಲ್ ಹೊಂದಿರುವವರಿಗೆ  ಮರಣದಂಡನೆಯಾಗಬಹುದು. ಶೇ 25ರಷ್ಟು ಕ್ರೈಸ್ತ ಜನಸಂಖ್ಯೆ ಪೋಲಂಡ್ ದೇಶದ ಆಸಚ್ವಿಟ್ಝ್ ನಲ್ಲಿರುವಂತೆ ಜೈಲು ಶಿಬಿರಗಳಲ್ಲಿ ವಾಸಿಸುತ್ತಿದೆ. ತಮ್ಮ ಮಕ್ಕಳು ತಮ್ಮ ಧರ್ಮವನ್ನು ನೆರೆಹೊರೆಯವರು, ಶಿಕ್ಷಕರು ಹಾಗೂ ಸರಕಾರಿ ಅಧಿಕಾರಿಗಳ ಮುಂದೆ ಹೇಳಿಕೊಳ್ಳಬಹುದೆಂಬ ಭಯದಿಂದ ಹಲವಾರು ಕ್ರೈಸ್ತ ಹೆತ್ತವರು ತಮ್ಮ ಧರ್ಮವನ್ನು ತಮ್ಮ ಮಕ್ಕಳಿಂದ ಮುಚ್ಚಿಡುತ್ತಾರೆ” ಎಂದು ಓಪನ್ ಡೋರ್ಸ್ ಹೇಳಿದೆ.