ಮದುವೆಯಾಗುವಾಗ ಹೆಂಡತಿ ಕನ್ಯೆಯಾಗಿರಲಿಲ್ಲವಂತೆ

ಪ್ರ : ನಮ್ಮ ಮದುವೆಯಾಗಿ ಹತ್ತು ವರ್ಷವಾಯಿತು. ಎಂಟು ವರ್ಷದ ಒಬ್ಬಳು ಮಗಳಿದ್ದಾಳೆ. ನನ್ನ ಹೆಂಡತಿ ತುಂಬಾ ಮುಗ್ಧ ಸ್ವಭಾವದವಳು. ಹಳ್ಳಿಯ ಹುಡುಗಿ. ಬೆಳ್ಳಗಿದ್ದದ್ದೆಲ್ಲ ಹಾಲು ಅಂತ ನಂಬುತ್ತಾಳೆ. ಮದುವೆಯಾದ ಹೊಸದರಲ್ಲಿ ಈ ಸಿಟಿಗೆ ಅವಳನ್ನು ಕರೆದುಕೊಂಡು ಬಂದಾಗ ಅವಳನ್ನು ಒಬ್ಬಳೇ ಎಲ್ಲೂ ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಅವಳ ಮುಗ್ಧತನದ ಲಾಭ ಯಾರಾದರೂ ಪಡೆದರೆ ಅಂತ ಭಯವಾಗುತ್ತಿತ್ತು. ಈಗ ಅವಳು ಹುಶಾರಾಗಿದ್ದಾಳೆ. ಮಗಳನ್ನು ಕರೆದುಕೊಂಡು ಹೋಗಿ ಶಾಪಿಂಗ್ ಎಲ್ಲವನ್ನೂ ತಾನೇ ಮಾಡಿಕೊಂಡು ಬರುತ್ತಾಳೆ. ನನ್ನ ಮತ್ತು ಮಗಳ ಬಗ್ಗೆ ಅತೀವ ಕಾಳಜಿ ವಹಿಸುತ್ತಾಳೆ. ಅಂತಹ ಹೆಂಡತಿ ನನಗೆ ಸಿಕ್ಕಿದ್ದು ಪುಣ್ಯ ಅಂತಲೇ ಭಾವಿಸಿದ್ದೆ. ಆದರೆ ಅವಳು ಇತ್ತೀಚೆಗೆ ಸ್ವಲ್ಪ ಮೂಡಿಯಾಗಿರುತ್ತಿದ್ದಳು. ಏನೋ ಆಲೋಚನೆ ಮಾಡುತ್ತಾ ಕುಳಿತುಕೊಳ್ಳುತ್ತಿದ್ದಳು. ಮಗಳ ಮೇಲೆ ಅತೀ ಪೊಸೆಸಿವ್‍ನೆಸ್ ತೋರಿಸುತ್ತಿದ್ದಾಳೆ. ಅವಳು ಸ್ನೇಹಿತರ ಜೊತೆ ಮುಕ್ತವಾಗಿ ಬೆರೆಯಲೂ ಬಿಡುವುದಿಲ್ಲ. ಹತ್ತು ನಿಮಿಷ ತಡವಾಗಿ ಬಂದರೂ ಆತಂಕ ಪಡುತ್ತಾಳೆ. ನನಗೇ ಒಮ್ಮೊಮ್ಮೆ ಯಾಕೆ ಹೀಗೆ ಹದಿನೆಂಟನೇ ಶತಮಾನದವರ ರೀತಿ ಇವಳು ವರ್ತಿಸುತ್ತಿದ್ದಾಳೆ ಅಂತ ಬೇಸರ ಮೂಡುತ್ತಿತ್ತು. ಅವಳ ಈ ಅತಿರೇಕದ ವರ್ತನೆ ಸಹಿಸಲಾಗದೇ ಒಮ್ಮೆ ಒತ್ತಾಯಿಸಿ ಕೇಳಿದಾಗ ಅವಳ ಬಾಲ್ಯದ ಒಂದು ಕಹಿ ಸತ್ಯ ಹೊರಬಿತ್ತು. ಅವಳು ಎರಡು ಅಥವಾ ಮೂರನೇ ಕ್ಲಾಸಿನಲ್ಲಿರುವಾಗ ಅವರ ಪಕ್ಕದ ಮನೆಯವನೊಬ್ಬ ಯಾರೂ ಇಲ್ಲದ ಸಮಯದಲ್ಲಿ ಅವಳ ಮೇಲೆ ಅತ್ಯಾಚಾರವೆಸಗಿದ್ದನಂತೆ. ಯಾರಿಗೂ ಹೇಳಬೇಡ ಅಂತ ಐಸ್‍ಕ್ರೀಂ ಕೊಡಿಸಿದ್ದನಂತೆ. ಅವಳಿಗೆ ತನ್ನ ಮೇಲೆ ನಡೆದಿದ್ದು ಅತ್ಯಾಚಾರ ಅಂತ ಗೊತ್ತಾಗಿದ್ದೇ ಅವಳು ಕಾಲೇಜಿಗೆ ಹೋಗಲು ಪ್ರಾರಂಭಿಸಿದ ನಂತರವೇ ಅಂತೆ. ನನಗೆ ಒಂದು ಸಲ ಶಾಕ್ ಆಯಿತು. ಇಷ್ಟು ದಿನ ನನ್ನ ಹೆಂಡತಿಯಷ್ಟು ಪವಿತ್ರಳು ಬೇರೆ ಯಾರೂ ಇರಲಿಕ್ಕಿಲ್ಲ ಅಂತ ಭಾವಿಸಿದ್ದ ನನಗೀಗ ಶಾಕ್ ಆಗಿದೆ. ಅವಳು ಮದುವೆಯಾಗುವಾಗ ಕನ್ಯೆಯಾಗಿರಲಿಲ್ಲ ಅನ್ನುವ ವಿಷಯವೇ ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿದೆ. ಏನು ಮಾಡಲಿ?

: ಈಗ ನೀವು ಮಾಡಬೇಕಾಗಿದ್ದು ನಿಮ್ಮ ಹೆಂಡತಿಯ ಜೀವನದಲ್ಲಿ ನಡೆದ ಕಹಿಘಟನೆಯಿಂದ ಆಕೆಯ ಮನಸ್ಸಿನ ಮೇಲಾಗಿದ್ದ ಗಾಯವನ್ನು ಮರೆಸುವ ಕೆಲಸ. ಅದನ್ನು ಬಿಟ್ಟು ಆಕೆ ಚಿಕ್ಕವಳಿದ್ದಾಗ ಯಾವುದೋ ರಾಕ್ಷಸ ಅವಳ ಮೇಲೆರಗಿದ್ದ ಅಂತ ನೀವು ಆಲೋಚಿಸುತ್ತಾ ಕೂರುವುದು ಎಷ್ಟು ಸರಿ? ಆಕೆಗಾಗ ಬಹುಶಃ ನಿಮ್ಮ ಮಗಳ ವಯಸ್ಸಿರಬಹುದು. ಏನೂ ಅರಿಯದ ಹುಡುಗಿಯನ್ನು ತಮ್ಮ ಕಾಮದಾಹಕ್ಕೆ ಬಳಸಿಕೊಳ್ಳುತ್ತಾರಲ್ಲ, ಅಂತವರು ಮನುಷ್ಯರೇ ಅಲ್ಲ. ಅವಳದಲ್ಲದ ತಪ್ಪಿಗೆ ಅವಳೀಗ ಖಿನ್ನಳಾಗುವಂತಾಗಿದೆ. ಅದಕ್ಕಾಗಿಯೇ ಮಗಳ ಸುರಕ್ಷತೆಯೆ ಬಗ್ಗೆ ಆಕೆಗಷ್ಟು ಕಾಳಜಿ. ಎಲ್ಲಾದರೂ ತನ್ನ ಮಗಳ ಮೇಲೂ ಆಗಬಾರದ್ದು ಆದರೆ ಅಂತ ಅವಳು ಭಯಪಡುತ್ತಿದ್ದಾಳೆ. ಮೊದಲು ನೀವು ನಿಮ್ಮಾಕೆಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಅವಳು ಹೇಳದಿದ್ದರೆ ಯಾವಾಗಲೋ ನಡೆದ ಘಟನೆ ನಿಮಗೆ ಗೊತ್ತೂ ಆಗುತ್ತಿರಲಿಲ್ಲ. ಅವಳ ಪ್ರಾಮಾಣಿಕತೆ ಬಗ್ಗೆ ಖುಶಿ ಪಡಿ. ಅವಳ ಪಾವಿತ್ರ್ಯತೆ ಬಗ್ಗೆ ಯೋಚಿಸಿ ನೀವೀಗ ಸಣ್ಣತನ ತೋರಿಸದಿರಿ.  ನೀವೇ ಹೇಳುವಂತೆ ಅವಳು ನಿಮ್ಮನ್ನು ಮತ್ತು ಮಗಳನ್ನು ಚೆನ್ನಾಗಿ ನೊಡಿಕೊಳ್ಳುತ್ತಿದ್ದಾಳೆ. ಕಾಯಾ, ವಾಚಾ ಮನಸಾ ನಿಮ್ಮನ್ನೇ ನಂಬಿದ್ದಾಳೆ. ನೀವೂ ಅವಳ ಬಾಲ್ಯದಲ್ಲಿ ನಡೆದ ದುರ್ಘಟನೆ ಬಗ್ಗೆ ಅವಳನ್ನೇ ದೋಷಿಯಾಗಿ ನೋಡಿದರೆ ಮತ್ತಷ್ಟು ಅವಳು ಜರ್ಜರಿತಳಾಗಬಹುದು. ಅದು ನಿಮ್ಮ ದಾಂಪತ್ಯ, ಮತ್ತು ಮಗಳ ಭವಿಷ್ಯದ ಮೇಲೂ ದುಷ್ಪರಿಣಾಮ ಬೀರಬಹುದು. ಈಗ ಆಕೆ ಮಗಳ ಬಗ್ಗೆ ಕಾಳಜಿ ವಹಿಸುವುದು ಸರಿಯಾದರೂ ಅತೀ ಆತಂಕ ಪಡದಂತೆ ಅವಳಿಗೆ ನೀವೇ ಧೈರ್ಯ ತುಂಬಬೇಕು.