`ಹೆಂಡತಿಗೆ ಅವಳನ್ನು ಕಂಡರೆ ಆಗುತ್ತಿಲ್ಲ’

ಪ್ರ : ಎರಡು ವರ್ಷದ ಹಿಂದೆ ನಾನು ಈ ಊರಿಗೆ ಹೊಸತಾಗಿ ಕೆಲಸಕ್ಕೆ ಬಂದು ಸೇರಿದಾಗ ನನಗ್ಯಾರ ಪರಿಚಯವೂ ಅಷ್ಟಾಗಿ ಇರಲಿಲ್ಲ. ಇಲ್ಲಿಗೆ ಬಂದ ಕೆಲವು ದಿನಗಳ ನಂತರ ಒಮ್ಮೆ ಅಕಸ್ಮಾತ್ತಾಗಿ ನಮ್ಮ ಕಾಲೇಜಿನಲ್ಲಿಯೇ ಓದಿದ ನನಗಿಂತ ಎರಡು ವರ್ಷ ದೊಡ್ಡವನೊಬ್ಬನು ದಾರಿಯಲ್ಲಿ ಸಿಕ್ಕಿ ತನ್ನ ಮನೆಗೆ ಕರೆದುಕೊಂಡು ಹೋದ. ಅಂದು ಅಲ್ಲಿಯೇ ಊಟ ಮುಗಿಸಿದೆ. ಪ್ರತೀ ಶನಿವಾರ ಅವರ ಮನೆಗೆ ಊಟಕ್ಕೆ ಹೋಗಿ ಲೇಟಾಗಿ ಮನೆಗೆ ಬರುವುದು ರುಟೀನ್ ಆಯಿತು. ಅವನ ಹೆಂಡತಿ ತುಂಬಾ ಸ್ನೇಹಜೀವಿ. ಒಂದು ವಾರ ನಾನು ಅಲ್ಲಿಗೆ ಹೋಗದಿದ್ದರೂ ಫೋನ್ ಮಾಡಿ ಕರೆಯುತ್ತಿದ್ದಳು. ನಿಜ ಹೇಳಬೇಕೆಂದರೆ ನನಗೆ ನನ್ನ ಸ್ನೇಹಿತನಿಗಿಂತ ಅವನ ಹೆಂಡತಿಯೇ ಹತ್ತಿರವಾದಳು. ಒಮ್ಮೊಮ್ಮೆ ಮಧ್ಯಾಹ್ನ ಆಫೀಸಿನಲ್ಲಿ ಹೆಚ್ಚು ಕೆಲಸವಿಲ್ಲದಿದ್ದರೆ ಆಗಲೂ ಫೋನ್ ಮಾಡಿ ಅಲ್ಲಿಗೇ ಊಟಕ್ಕೆ ಹೋಗುತ್ತಿದ್ದೆ. ನನಗಿಷ್ಟವಾದ ಬೆಂಡೆಕಾಯಿ ಸಾಂಬಾರು, ಬದನೇಕಾಯಿ ಬಜ್ಜಿ ಮಾಡಿ ಅವಳು ನನಗೋಸ್ಕರ ಕಾಯುತ್ತಿದ್ದಳು. ಅವಳಲ್ಲಿರುವ ಜೀವನೋತ್ಸಾಹ ನನಗೆ ತುಂಬಾ ಇಷ್ಟವಾಗುತ್ತಿತ್ತು. ಕ್ರಿಕೆಟ್ಟಿನಿಂದ ಹಿಡಿದು ಒಬಾಮಾವರೆಗೆ ಎಲ್ಲಾ ವಿಷಯ ಮಾತಾಡುತ್ತಿದ್ದೆವು. ನನ್ನ ಸ್ನೇಹಿತನೂ ವಿಶಾಲ ಮನೋಭಾವದವನಾದ ಕಾರಣ ಅವನ ಹೆಂಡತಿಯ ಜೊತೆಗಿನ ನನ್ನ ಸಲುಗೆಯನ್ನು ತಪ್ಪಾಗಿ ಭಾವಿಸುತ್ತಿರಲಿಲ್ಲ. ಅವಳು ನನ್ನ ಫೇಸ್‍ಬುಕ್ಕಿನ ಫ್ರೆಂಡ್ ಕೂಡಾ. ಅವಳ ಜೊತೆಗೆ ಆಗಾಗ ಚಾಟ್ ಮಾಡುತ್ತಿರುತ್ತೇನೆ. ಹಾಗಂತ ನಮ್ಮ ಸ್ನೇಹ ಎಂದೂ ಲಿಮಿಟ್ ಮೀರಿರಲಿಲ್ಲ. ಎರಡು ತಿಂಗಳ ಹಿಂದೆ ನನಗೂ ಮದುವೆಯಾಗಿ ಹೆಂಡತಿಯನ್ನು ಕರೆದುಕೊಂಡು ಬಂದಿದ್ದೇನೆ. ಅವಳನ್ನು ಮೊದಲು ನಾನು ಕರೆದುಕೊಂಡು ಹೋಗಿದ್ದು ನನ್ನ ಆ ಸ್ನೇಹಿತನ ಮನೆಗೇ. ಅಲ್ಲಿ ಗಂಡ ಹೆಂಡತಿ ಇಬ್ಬರೂ ನನ್ನ ಹೆಂಡತಿಯನ್ನು ಚೆನ್ನಾಗಿಯೇ ಆದರಿಸಿದರು. ಆದರೆ ನನ್ನ ಹೆಂಡತಿಗೆ ನನ್ನ ಸ್ನೇಹಿತನ ಹೆಂಡತಿ ಇಷ್ಟವೇ ಆಗಲಿಲ್ಲ. ಅವಳದು ಆರ್ಟಿಫಿಶಿಯಲ್ ಮಾತು ಮತ್ತು ನಗು ಅನ್ನುತ್ತಾಳೆ. ಒಂದೆರಡು ಸಲ ಮಾತ್ರ ನನ್ನ ಒತ್ತಾಯಕ್ಕೆ ಇವಳು ಅವರ ಮನೆಗೆ ಬಂದಿದ್ದಾಳೆ. ನಮ್ಮ ಮನೆಗೆ ಅವರನ್ನು ಕರೆಯೋಣ ಅಂದರೂ ಅದಕ್ಕೆ ಒಪ್ಪುತ್ತಿಲ್ಲ. ಅವಳ ಜೊತೆಗೆ ನಾನು ಸ್ನೇಹ ಇಟ್ಟುಕೊಳ್ಳುವುದೂ ಇವಳಿಗೆ ಇಷ್ಟವಿಲ್ಲ. ಅದೂ ಅಲ್ಲದೆ ನಮ್ಮ ಸ್ನೇಹದ ಬಗ್ಗೆ ಚೀಪಾಗಿ ಮಾತಾಡುತ್ತಾಳೆ. ಎರಡು ವರ್ಷದ ನನ್ನ ಒಡನಾಟವನ್ನು ಕೂಡಲೇ ನಿಲ್ಲಿಸು ಅಂದರೆ ಹೇಗೆ? ನನ್ನ ನೆಂಟರಿಗಿಂತ ಅವರು ನನಗೆ ಆತ್ಮೀಯರು. ಹೇಗೆ ಅದನ್ನು ಇವಳಿಗೆ ಅರ್ಥ ಮಾಡಿಸಲಿ?

ಉ : ಒಳ್ಳೆಯ ಸ್ನೇಹಿತರು ಸಿಗುವುದು ಬಹಳ ಕಷ್ಟ. ಅಂತವರನ್ನು ಅಷ್ಟು ಬೇಗ ಕಳೆದುಕೊಳ್ಳುವುದೂ ತಪ್ಪು. ಸಂಬಂಧಿಕರ ಜೊತೆಯೂ ಇಲ್ಲದ ಒಂದು ರೀತಿಯ ಆತ್ಮೀಯತೆ ಮತ್ತು ಮುಕ್ತತೆ ಸ್ನೇಹಿತರ ಜೊತೆಗಿರುತ್ತದೆ. ಅಲ್ಲಿ ಮತ್ಸರ ಇರುವುದು ಕಡಿಮೆ. ನಿಮ್ಮ ಹೆಂಡತಿಗೆ ಮೊದಲ ನೋಟದಲ್ಲಿ ಆಕೆ ಇಷ್ಟವಾಗದೇ ಇರಬಹುದು. ಆದರೆ ನಿಮ್ಮ ಆ ಸ್ನೇಹಿತೆಯ ಒಳ್ಳೆಯತನದ ಪರಿಚಯ ನಿಮ್ಮ ಹೆಂಡತಿಗಾದರೆ ಅವಳೂ ಆಕೆಯ ಜೊತೆ ಆತ್ಮೀಯತೆ ತೋರಬಹುದು. ಆದರೆ  ಒಂದು ವಿಷಯ ನೀವು ನೆನಪಿಟ್ಟುಕೊಳ್ಳಲೇಬೇಕು. ಹೆಂಗಸರಿಗೆ ಅಸುರಕ್ಷತೆಯ ಭಾವನೆ ಕಾಡುವುದು ಬಹಳ ಬೇಗ. ಒಂದು ವೇಳೆ ನಿಮ್ಮ ಹೆಂಡತಿಗಿಂತ ಆಕೆ ರೂಪ, ಲಾವಣ್ಯ, ಬುದ್ಧಿಮತ್ತೆ, ಮಾತುಗಾರಿಕೆ ಎಲ್ಲದರಲ್ಲೂ ಮುಂದಿದ್ದರಂತೂನೀವೆಲ್ಲಿ ಅವಳ ಆಕರ್ಷಣೆಗೆ ಒಳಗಾಗಿಬಿಟ್ಟರೆ ಅನ್ನುವ ಭಯವೂ ಆಕೆ ಆ ರೀತಿ ವರ್ತಿಸುವಂತೆ ಮಾಡುತ್ತದೆ. ಮೊದಲು ನಿಮಗೆ ಸ್ನೇಹಿತನ ಹೆಂಡತಿಯ ಮೇಲೆ ಸಹೋದರಿಯ ರೀತಿಯ ಸಲುಗೆ ಮಾತ್ರ ಇರುವುದಾಗಿಯೂ ಅವಳು ನಿಮ್ಮ ಹಿತೈಷಿಯಷ್ಟೇ ಅನ್ನುವ ವಿಷಯವನ್ನು ಹೆಂಡತಿಗೆ ಮನದಟ್ಟು ಮಾಡಿಸಿ. ಸ್ನೇಹಿತ ಮತ್ತು ಅವನ ಹೆಂಡತಿಯ ನಡುವೆ ಒಳ್ಳೆಯ ದಾಂಪತ್ಯವಿರುವುದಾಗಿಯೂ ಅವಳು ಯಾವ ಕಾರಣಕ್ಕೂ ನಿಮ್ಮ ನಡುವೆ ಬರುವುದಿಲ್ಲವೆಂತಲೂ ಅವಳಿಗೆ ಸ್ಪಷ್ಟಪಡಿಸಿ. ನಿಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಎಂದೂ ಹೆಂಡತಿಯನ್ನು ಸ್ನೇಹಿತೆಯ ಜೊತೆ ಹೋಲಿಸುವ ಅಥವಾ ಹೆಂಡತಿಯೆದುರು ಅವಳನ್ನು ಹೊಗಳುವ ಕೆಲಸ ಮಾತ್ರ ಮಾಡಬೇಡಿ. ಹೆಚ್ಚಿನ ಮಹಿಳೆಯರು ಅದನ್ನು ಇಷ್ಟಪಡುವುದಿಲ್ಲ. ಬದಲಾಗಿ ನಿಮ್ಮ ಹೆಂಡತಿಯನ್ನೇ ಅವರೆದುರು ತಾರೀಫ್ ಮಾಡುತ್ತಿರಿ. ನಿಮ್ಮ ದೃಷ್ಟಿಯಲ್ಲಿ ಎಲ್ಲಕ್ಕಿಂತ ಹೆಂಡತಿಯೇ ನಿಮಗೆ ಮುಖ್ಯ ಅನ್ನುವುದನ್ನು ನಿಮ್ಮ ಮಾತು ಮತ್ತು ಕೃತಿಯಲ್ಲಿ ತೋರಿಸಿ. ನಿಮಗೂ ಮದುವೆಯಾಗಿರುವುದರಿಂದ ನೀವೀಗ ನಿಮ್ಮ ಹೆಚ್ಚಿನ ಸಮಯ ಹೆಂಡತಿಗೆ ಕೊಡಬೇಕಾಗಿದ್ದೂ ನ್ಯಾಯವೇ. ನಿಧಾನಕ್ಕೆ ನಿಮ್ಮ ಜಾಣತನ ಉಪಯೋಗಿಸಿ ನಿಮ್ಮ ಹೆಂಡತಿಗೆ ಅವರ ಜೊತೆ ಆತ್ಮೀಯತೆ ಬೆಳೆಯುವಂತೆ ನೋಡಿಕೊಳ್ಳಿ. ಹಾಗಾದರೆ ನಿಮ್ಮೆರಡೂ ಕುಟುಂಬ ಒಳ್ಳೆಯ ಸ್ನೇಹದಿಂದಿರಬಹುದು.