ತಂಗಿ ನಾಲಾಯಕ್ ಹುಡುಗನನ್ನು ಪ್ರೀತಿಸುತ್ತಿದ್ದಾಳೆ

ಅವಳಿಗೆ ನೀವೇ ವಿಲನ್ ಆಗಿ ಕಾಣುತ್ತಿದ್ದೀರಿ. ಆದರೆ ನೀವು ತಂಗಿಗೆ ನಿಷ್ಠುರವಾದರೂ ಸರಿ ಆಕೆಯನ್ನು ಆ ಬಲೆಯಿಂದ ಬಿಡಿಸಿ ಹೊರತರಲು ನಿಮ್ಮ ಕೈಲಾದ ಪ್ರಯತ್ನ ಮಾಡಲೇಬೇಕು.

ಪ್ರ : ನನಗೀಗ 24 ವರ್ಷ. ಕೆಲಸದಲ್ಲಿದ್ದೇನೆ. ತಂಗಿಗೆ ಈಗ 20. ಎರಡನೇ ವರ್ಷದ ಡಿಗ್ರಿ ಮುಗಿಸಿದ್ದಾಳೆ.. ನಮ್ಮ ಊರಿರುವುದು ಹಳ್ಳಿಯಲ್ಲಾದ್ದರಿಂದ ನಾನು ಮತ್ತು ತಂಗಿ ಇಲ್ಲಿಯೇ ಬಾಡಿಗೆ ಮನೆಯಲ್ಲಿದ್ದೇವೆ. ಕೆಲವು ತಿಂಗಳ ಹಿಂದೆ ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಒಂದು ವಾರ ರಜೆಯಲ್ಲಿದ್ದೆ. ನಮ್ಮ ಬಾಸ್ ಅರ್ಜೆಂಟ್ ಕೆಲಸದ ನಿಮಿತ್ತ ನನ್ನ ಕೈಕೆಳಗೆ ಕೆಲಸ ಮಾಡುವವನೊಬ್ಬನನ್ನು ನಮ್ಮ ಮನೆಗೆ ಕಳಿಸಿದ್ದರು. ಆ ದಿನ ನನ್ನ ತಂಗಿಯೂ ಮನೆಯಲ್ಲಿಯೇ ಇದ್ದಳು. ಹಾಗೇ ಅವರಿಬ್ಬರ ಪರಿಚಯವನ್ನೂ ಮಾಡಿಸಿದೆ. ಅಂದಿನಿಂದ ನನ್ನ ಈ ಕಲೀಗ್ ನನಗೆ ತುಂಬಾ ಹತ್ತಿರವಾದ. ಕೆಲವೊಮ್ಮೆ ಮನೆಗೂ ನನ್ನ ಜೊತೆ ಬರುತ್ತಿದ್ದ. ನನಗೆ ಗೊತ್ತಿಲ್ಲದ ಹಾಗೆ ನನ್ನ ತಂಗಿಯ ಕಾಲೇಜಿನ ಹತ್ತಿರವೂ ಹೋಗಿ ಅವಳನ್ನು ಭೇಟಿ ಮಾಡುತ್ತಿದ್ದ ವಿಷಯ ನನಗೆ ಆಮೇಲೆ ಗೊತ್ತಾಯಿತು. ನನ್ನ ತಂಗಿ ಈಗ ಅವನನ್ನು ಇಷ್ಟಪಡುತ್ತಿದ್ದಾಳೆ. ಆದರೆ ಅವನ ಕ್ಯಾರೆಕ್ಟರೇ ಸರಿ ಇಲ್ಲ. ಕೆಲವಾರು ಹುಡುಗಿಯರಿಗೆ ಹೀಗೇ ಪ್ರೀತಿಯ ನಾಟಕವಾಡಿ ಮೋಸ ಮಾಡಿದ್ದಾನೆ. ಅವನ ಅಸಲೀ ಗುಣ ಗೊತ್ತಾಗಿ ನಾನು ಅವನಿಂದ ದೂರವಾಗುವ ಹೊತ್ತಿಗೆ ನನ್ನ ತಂಗಿ ಅವನನ್ನು ಪ್ರೀತಿಸಲು ಶುರು ಮಾಡಿಯಾಗಿತ್ತು. ಈಗ ಅವನ ಕಲ್ಯಾಣ ಗುಣ ತಂಗಿಗೆ ಹೇಳಿದರೂ ಅವಳು ಅವನಿಂದ ದೂರವಾಗಲು ತಯಾರಿಲ್ಲ. ನನಗೇ ಉಲ್ಟಾ ಹೊಡೆಯುತ್ತಿದ್ದಾಳೆ. ಅವನನ್ನೇ ಮದುವೆಯಾಗುತ್ತೇನೆ ಅಂತ ಹಠ ಹಿಡಿಯುತ್ತಿದ್ದಾಳೆ. ನನ್ನಿಂದಾಗಿಯೇ ಆ ಹುಡುಗನ ಪರಿಚಯವಾಗಿ ಈಗ ತಂಗಿ ಬಾಳು ಹಾಳಾಗುತ್ತಿರುವುದನ್ನು ನೋಡಿಯೂ ಏನೂ ಮಾಡಲಾಗುತ್ತಿಲ್ಲ. ಸಲಹೆ ಕೊಡಿ ಪ್ಲೀಸ್.

: ಆ ಹುಡುಗ ನಿಜಕ್ಕೂ ಹೆಣ್ಣುಬಾಕ ಅಂತ ನಿಮಗೆ ಖಾತ್ರಿಯಿದ್ದರೆ ಹೇಗಾದರೂ ನಿಮ್ಮ ತಂಗಿಯನ್ನು ಆತನಿಂದ ಬಚಾಯಿಸಲು ಪ್ರಯತ್ನಿಸಲೇಬೇಕು. ಪ್ರೀತಿ ಕುರುಡು ಮಾತ್ರವಲ್ಲ ಕಿವುಡೂ ಆದ್ದರಿಂದ ಅದರ ಅಮಲಿನಲ್ಲಿದ್ದ ನಿಮ್ಮ ತಂಗಿ ನಿಮ್ಮ ಯಾವ ಹಿತೋಪದೇಶವನ್ನೂ ಈಗ ಕೇಳುವ ಸ್ಥಿತಿಯಲ್ಲಿಲ್ಲ. ಅವಳಿಗೆ ನೀವೇ ವಿಲನ್ ಆಗಿ ಕಾಣುತ್ತಿದ್ದೀರಿ. ಆದರೆ ನೀವು ಆಕೆಗೆ ನಿಷ್ಠುರವಾದರೂ ಸರಿ ಅವಳನ್ನು ಆ ಬಲೆಯಿಂದ ಬಿಡಿಸಿ ಹೊರತರಲು ನಿಮ್ಮ ಕೈಲಾದ ಪ್ರಯತ್ನ ಮಾಡಲೇಬೇಕು. ತಂಗಿಗೆ ಅವನ ಅಸಲೀಗುಣವನ್ನು ವಿವರವಾಗಿ ಹೇಳಿ. ಆ ಹುಡುಗನ ಜೊತೆ ಸಂಬಂಧ ಮುಂದುವರಿಸಿದರೆ ಅವ ನಡುನೀರಿನಲ್ಲಿ ಕೈಬಿಡುತ್ತಾನೆ ಅಂತಲೂ ಎಚ್ಚರಿಸಿ. ಆತನ ಹಿಂದೆ ಹೋದರೆ ಅವಳು ಎಲ್ಲಾ ಸಂಬಂಧ ಕಡಿದುಕೊಳ್ಳಬೇಕಾಗುತ್ತದೆ ಅಂತಲೂ ಹೆದರಿಸಿ. ನಿಮ್ಮ ಅಪ್ಪ, ಅಮ್ಮನಿಗೂ ವಿಷಯ ತಿಳಿಸಿ. ಅವರೂ ಅವನಿಂದ ದೂರವಿರುವಂತೆ ಒತ್ತಡ ಹೇರಲಿ. ನಿಮ್ಮ ತಂಗಿಗೆ ಇನ್ನೂ ಅವನ ಬಗ್ಗೆ ನಂಬಿಕೆ ಹಾಗೇ ಇದ್ದರೆ ಅವನಿಂದ ಮೋಸ ಹೋದ ಹುಡುಗಿಯರನ್ನು ಹೇಗಾದರೂ ಪತ್ತೆ ಮಾಡಿ ಅವರು ನಿಮ್ಮ ತಂಗಿಗೆ ಆ ಹುಡುಗನ ನಿಜಬಣ್ಣ ಅನಾವರಣಗೊಳಿಸಿವಂತೆ ಮಾಡಿ. ಇಷ್ಟೆಲ್ಲ ಎಚ್ಚರಿಕೆಯ ನಂತರವೂ ತಂಗಿ ಆ ಹುಡುಗÀನ ಹಿಂದೆಯೇ ಹೋದರೆ ಅದು ಅವಳ ಹಣೆಬರಹ ಅಂತ ಬಿಟ್ಟುಬಿಡಬೇಕಷ್ಟೇ.