`ನನ್ನ ಅಧಿಕಾರ ಮೊಟಕುಗೊಳಿಸಿಲ್ಲ’

ಟಿಕೆಟ್ ಹಂಚಿಕೆ ಜವಾಬ್ದಾರಿಯನ್ನು ಕೇಂದ್ರ ನಾಯಕತ್ವವೇ ವಹಿಸಿಕೊಳ್ಳುವಂತೆ ನಾನೇ ಹೇಳಿದ್ದೆ, ಎನ್ನುತ್ತಿದ್ದಾರೆ ಯಡ್ಯೂರಪ್ಪ.

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪೂರ್ವತಯಾರಿಯಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಯೂರಪ್ಪ ಈಗಾಗಲೇ ರಾಜ್ಯದ ಎರಡು ಸುತ್ತಿನ ಪ್ರವಾಸ ಮುಗಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣವಿದೆ ಹಾಗೂ ಮತದಾರರು ಕಾಂಗ್ರೆಸ್ ಸರಕಾರವನ್ನು ಕೆಳಗಿಳಿಸಲು ಹಾತೊರೆಯುತ್ತಿದ್ದಾರೆ ಎಂಬುದು ಅವರ ನಂಬಿಕೆ. ಅವರೊಂದಿಗಿನ ಸಂದರ್ಶನದ ಆಯ್ದ ಭಾಗಗಳು.

 • ಅಮಿತ್ ಶಾ ಅವರ ರಾಜ್ಯ ಭೇಟಿಯ ನಂತರ ಬಿಜೆಪಿ ಯಾವ ರೀತಿಯಲ್ಲಿ ಚುನಾವಣೆಗೆ ಸನ್ನದ್ಧವಾಗುತ್ತಿದೆ ? ಅಮಿತ್ ಶಾ ಅವರು ನೀಡಿದ ಆದೇಶಗಳನ್ನು ಪಾಳಿಸಲು  ಕ್ರಮ ಕೈಗೊಳ್ಳಾಗಿದೆಯೇ ?

ಉತ್ತರ ಪ್ರದೇಶ ಮಾದರಿಯಲ್ಲಿ ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಿ ಬೂತ್ ಸಮಿತಿಗಳನ್ನು ಬಲಪಡಿಸುವಂತೆ ಅವರು  ಹೇಳಿದ್ದರು. ರಾಜ್ಯದಲ್ಲಿ 55,000 ಬೂತುಗಳಿದ್ದರೆ ನಾವೀಗಾಗಲೇ 50,000 ಬೂತ್ ಸಮಿತಿಗಳನ್ನು ರಚಿಸಿ ಪ್ರತಿಯೊಂದು ಸಮಿತಿಗೆ ಒಂಬತ್ತು ಸದಸ್ಯರನ್ನು ನೇಮಿಸಿದ್ದೇವೆ. ಪಕ್ಷದ ವಿವಿಧ ಮೋರ್ಚಾಗಳ ಬಲವರ್ಧನೆಗೊಳಿಸುವಂತೆಯೂ ಅವರು ಹೇಳಿದ್ದಾರೆ. ಪರಿವರ್ತನಾ ರ್ಯಾಲಿ ನಡೆಸುವ ಸಲಹೆಯೂ ಶಾ ಅವರಿಂದ ಬಂದಿದೆ. ಬೆಂಗಳೂರಿನಲ್ಲಿ ನವೆಂಬರ್ 2ರಂದು ದೊಡ್ಡ ರ್ಯಾಲಿ ನಡೆಯಲಿದ್ದರೆ, ಹುಬ್ಬಳ್ಳಿಯಲ್ಲಿ ಡಿಸೆಂಬರಿನಲ್ಲಿ ನಡೆಯಲಿದೆ.

 • ಮುಂದಿನ ಚುನಾವಣೆಗೆ ಮತದಾರರರನ್ನು ಓಲೈಸಲು ಬಿಜೆಪಿಯು ಸಿದ್ದರಾಮಯ್ಯ ಸರಕಾರದ ದೌರ್ಬಲ್ಯಗಳನ್ನೇ ಬಳಸಿಕೊಳ್ಳಲಿದೆಯೇ ಇಲ್ಲವೇ ಪಕ್ಷಕ್ಕೆ ಯಾವುದಾದರೂ ನಿರ್ದಿಷ್ಟ ಅಜೆಂಡಾ ಇದೆಯೇ ?

ನಾವು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಹಾಗೂ ಸಿದ್ದರಾಮಯ್ಯ ಸರಕಾರದ ವೈಫಲ್ಯಗಳನ್ನು ಜನರ ಮುಂದಿಡಲಿದ್ದೇವೆ. ಜನವರಿ 2018ರಲ್ಲಿ ನಮ್ಮ  ಕಾರ್ಯಯೋಜನೆಯನ್ನು ನಾವು ಬಹಿರಂಗಪಡಿಸಲಿದ್ದೇವೆ. ಈಗಲೇ ಅದರ ಬಗ್ಗೆ ಮಾಹಿತಿ ನೀಡಿದರೆ ಈ ವ್ಯಕ್ತಿ (ಸಿದ್ದರಾಮಯ್ಯ) ಅದನ್ನು ಹೈಜಾಕ್ ಮಾಡಬಹುದು.  ರೈತರ ಹಾಗೂ ಹಿಂದುತ್ವದ ವಿಚಾರಗಳಿಗೆ ಪಕ್ಷ ಒತ್ತು ನೀಡುವುದು.

 • ರಾಜ್ಯದಲ್ಲಿ ಬಿಜೆಪಿ ಆಡಳಿತದ ಸಂದರ್ಭದ ಭ್ರಷ್ಟಾಚಾರ ಪ್ರಕರಣಗಳನ್ನು ಜನರಿನ್ನೂ ಮರೆತಿಲ್ಲ. ಕಾಂಗ್ರೆಸ್ ಈ ವಿಚಾರ ಖಂಡಿತಾ ಎತ್ತುವ ಸಾಧ್ಯತೆಯಿದೆ.

ನಾನೊಬ್ಬ ಆರೋಪಿಯಲ್ಲ, ಆದರೆ ಸುಳ್ಳು ಪ್ರಕರಣವೊಂದರಲ್ಲಿ ನನಗೆ ಜಾಮೀನು ನಿರಾಕರಿಸಿ ನನ್ನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿತ್ತು.  ಆಗಿನ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಮತ್ತಿತರರು ನನ್ನನ್ನು ಸಿಕ್ಕಿಸಿ ಹಾಕಿದ್ದರು. ಇದರಿಂದಾಗಿ ನಾನು ಕೆಲವು ವಾರ ನ್ಯಾಯಾಂಗ ಬಂಧನದಲ್ಲಿರಬೇಕಾಯಿತು. ಈಗ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕೂಡ ಜಾಮೀನಿನ ಮೇಲಿದ್ದಾರೆ.

 • ಆಡಳಿತ ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪಿಸಲಾದ ಭ್ರಷ್ಟಾಚಾರ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣಿಸಲು ರಾಜ್ಯದಲ್ಲಿ ವಿಪಕ್ಷವಾಗಿರುವ ಬಿಜೆಪಿ ವಿಫಲವಾಗಿಲ್ಲವೇ ?

ಇದೊಂದು ಹಠಮಾರಿ ಸರಕಾರ. ನಾವು ಹಲವಾರು ವಿಚಾರಗಳನ್ನೆತ್ತಿದ್ದರೂ ಅವರು ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಲ್ಲ. ನಾನು ರೈತರ ರ್ಯಾಲಿ ಸಂಘಟಿಸುವುದಾಗಿ ಬೆದರಿಸಿದ್ದರಿಂದ ರೂ 50,000ದ ತನಕದ ರೈತರ ಸಾಲವನ್ನು ಮನ್ನಾಗೊಳಿಸಲಾಯಿತು. ಇದಕ್ಕೆ ರೂ 8000 ಕೋಟಿ ತೆಗೆದಿರಿಸಲಾಗಿದೆ ಎಂದು ಸರಕಾರ ಹೇಳುತ್ತಿದ್ದರೂ  ಒಂದೇ ಒಂದು ಪೈಸೆ ಸಹಕಾರಿ ಸೊಸೈಟಿಗಳಿಗೆ ಹೋಗಿಲ್ಲ.

 • ಎಸಿಬಿ ಹಾಗೂ ಸಿಐಡಿ ನಿಮ್ಮ ಬೆನ್ನ  ಹಿಂದೆ ಬಿದ್ದಂತಿದೆ.  ಬಿಜೆಪಿಗಿಂತ ಹೆಚ್ಚಾಗಿ ನಿಮ್ಮ ಮೇಲೆ ಸರಕಾರಕ್ಕೆ ಹೆಚ್ಚಿನ ಭಯವಿದೆಯೇ ?

ಹೌದು. ಸರಕಾರಕ್ಕೆ ನನ್ನ ಬಗ್ಗೆಯೇ ಹೆಚ್ಚಿನ ಭಯವಿದೆ. ನನ್ನ ಕೈ ಕಟ್ಟಿ ಹಾಕಿದರೆ ಮುಖ್ಯಮಂತ್ರಿಗೆ ಏನು ಬೇಕಾದರೂ ಮಾಡಬಹುದೆನ್ನುವ ಭಾವನೆಯಿದೆ. ಪಕ್ಷವು ಎರಡು ವರ್ಷಗಳ ಹಿಂದೆಯೇ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿರುವುದು ಸಿದ್ದರಾಮಯ್ಯಗೆ ಪಥ್ಯವಾಗಿಲ್ಲ.

 • ಬಿಜೆಪಿಗೆ 2018ರ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕೆಂಬ ಗುರಿ ನೀಡಲಾಗಿದೆ. 2013ರ ಚುನಾವಣೆಯಲ್ಲಿ ಎಲ್ಲಾ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪರದಾಡಿರುವಾಗ ಈಗ  ಈ ಗುರಿ ಮುಟ್ಟಬಹುದೇ ?

ನಾವು ಯಾವುದೇ ಪಕ್ಷದೊಡನೆ ಮೈತ್ರಿ ಸಾಧಿಸುವುದಿಲ್ಲ. ಈಗಾಗಲೇ  ಜಯ ಸಿಗುವ ಸಾಧ್ಯತೆಯಿರುವ 150 ಕ್ಷೇತ್ರಗಳನ್ನು `ಎ’ ಕೆಟಗರಿ ಕ್ಷೇತ್ರಗಳೆಂದು ಗುರುತಿಸಿದ್ದೇವೆ. ನಾವು ಜಯಕ್ಕಾಗಿ ಸ್ವಲ್ಪ ಹೆಚ್ಚು ಶ್ರಮ ವಹಿಸಬೇಕಾದ  45 ಬಿ ಕೆಟಗರಿ ಕ್ಷೇತ್ರಗಳನ್ನೂ ಗುರುತಿಸಿದ್ದೇವೆ.

 • ರಾಜ್ಯದಲ್ಲಿ ಅಷ್ಟೊಂದು ಕಾಂಗ್ರೆಸ್  ವಿರೋಧಿ ಅಲೆ ಕಾಣಿಸುತ್ತಿಲ್ಲ. ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುವಂತೆ ಮತದಾರರನ್ನು ಹೇಗೆ ಮನವರಿಕೆ ಮಾಡುತ್ತೀರಿ ?

ಇಲ್ಲಿ ಸರಕಾರ ವಿರೋಧಿ ಅಲೆ ಎಷ್ಟಿದೆಯೆಂದು ನಿಮಗೆ ಊಹಿಸಲು ಅಸಾಧ್ಯ. ಜನಸಾಮಾನ್ಯರಿಗೆ ಸಂಕಷ್ಟವಿದೆ. ರೈತರೂ ಕಷ್ಟ ಅನುಭವಿಸುತ್ತಿದ್ದಾರೆ. ಕೇವಲ ಅಗ್ಗದ ಪ್ರಚಾರಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ ಸರಕಾರವನ್ನು ಕೆಳಗಿಳಿಸಲು ಜನರು ಹಾತೊರೆಯುತ್ತಿದ್ದಾರೆ.

 • ನಿಮ್ಮ ಪಕ್ಷದ ಹೈಕಮಾಂಡು ನಿಮ್ಮ ರೆಕ್ಕೆಗಳನ್ನು ಕಟ್ಟಿ ಹಾಕಿದೆಯೆಂದು ಹೇಳಲಾಗುತ್ತಿದೆ. ಇದು ನಿಜವೇ ?

ನನ್ನ ಅಧಿಕಾರವನ್ನು ಮೊಟಕುಗೊಳಿಸಲಾಗಿಲ್ಲ. ಅವರು ನನಗೆ ಹೆಚ್ಚು ಅಧಿಕಾರ ನೀಡಿದ್ದಾರೆ. ಟಿಕೆಟ್ ಹಂಚಿಕೆ ಜವಾಬ್ದಾರಿಯನ್ನು ಕೇಂದ್ರ ನಾಯಕತ್ವ ವಹಿಸಬೇಕೆಂದು ನಾನೇ ಸಲಹೆ ನೀಡಿದ್ದೆ.

 • ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರನ್ನು ಕರ್ನಾಟಕ ರಾಜಕೀಯದಿಂದ ದೂರವಿರಿಸುವಂತೆ ನೀವು ಕೇಳಿಕೊಂಢಿದ್ದರೂ ಅವರಿಗೆ ಈಗ ಸಂಘಟನೆಯ ಜವಾಬ್ದಾರಿ ವಹಿಸಲಾಗಿದೆಯಲ್ಲ ?

ಅವರಿಗೆ ಅಪಾರ ಅನುಭವವಿದೆ. ಹಿಂದೆ ಕೆಲವೊಂದು ಭಿನ್ನಾಭಿಪ್ರಾಯಗಳಿದ್ದವು ನಿಜ. ಆದರೆ ಈಗ ಅವರಿಗೆ ಕೇರಳದಲ್ಲಿ ಯಾವುದೇ ಕೆಲಸ ಇಲ್ಲದೇ ಇರುವುದರಿಂದ  ನಾನು ಮತ್ತು ಶಾ ಅವರಿಗೆ ಕರ್ನಾಟಕದ ಬಗ್ಗೆ ಹೆಚ್ಚು ಗಮನ ನೀಡುವಂತೆ ಕೇಳಿಕೊಂಡಿದ್ದೆವು.

 • ಉತ್ತರ ಕರ್ನಾಟಕದಿಂದ ಸ್ಪರ್ಧಿಸಲು ನಿಮಗೆ ಹಿಂಜರಿಕೆಯಿದೆಯೇ ?

ಬಾಗಲಕೋಟೆ ಹಾಗೂ ವಿಜಯಪುರದ ಬಿಜೆಪಿ ನಾಯಕರು ನನ್ನಲ್ಲಿ ತೆರ್ದಾಲ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೇಳಿಕೊಂಡಿದ್ದರು. ಆದರೆ ನಾನು 2014ರ ಲೋಕಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದ ಅತ್ಯಂತ ಹೆಚ್ಚು ಅಂತರದಿಂದ ಗೆದ್ದಿರುವುದರಿಂದ ನಾನು ಅಲ್ಲಿಂದಲೇ ವಿಧಾನಸಭಾ ಚುನಾವಣೆಯನ್ನು ಸ್ಪರ್ಧಿಸಬೇಕೆಂದು ಮತದಾರರು ಹೇಳುತ್ತಿದ್ದಾರೆ. ಆದುದರಿಂದ ಇಲ್ಲಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಹಾಗೂ ಈ ಬಗ್ಗೆ ಹೈಕಮಾಂಡಿಗೆ ಮನವರಿಕೆ ಮಾಡಿಕೊಡುತ್ತೇನೆ.

 • ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ಬೇಡಿಕೆ ಕುರಿತಾಗಿ ನೀವೇಕೆ ಮೌನ ವಹಿಸಿದ್ದೀರಿ ?

ಈ ವಿಚಾರದಲ್ಲಿ ಮೌನದಿಂದಿರಲು ಪಕ್ಷ ನಿರ್ಧರಿಸಿದೆ. ಪಕ್ಷ ಪ್ರತಿಕ್ರಿಯಿಸಿದರೆ ಅದಕ್ಕೆ ಹಾನಿಯಾಗಬಹುದೆಂದು ಈ ಕ್ರಮ. ಕಾಂಗ್ರೆಸ್ ಪಕ್ಷ ನಮ್ಮನ್ನು ಕೆರಳಿಸಿದರೂ ನಾವು ಮೌನದಿಂದಿದ್ದೇವೆ.