ಹೆಂಡತಿಯಿಂದ ನನ್ನ ಜೀವನವೇ ಬರ್ಬಾದ್

ಪ್ರ : ನಮ್ಮದು ಚಿಕ್ಕ ಕುಟುಂಬವಾಗಿತ್ತು. ನಾನು ಮತ್ತು ನನಗಿಂತ ಎಂಟು ವರ್ಷ ಚಿಕ್ಕ ತಮ್ಮ ಅಪ್ಪ, ಅಮ್ಮನ ಜೊತೆ ಸಂತೋಷದಿಂದ ಇದ್ದೆವು. ಆದರೆ ಐದು ವರ್ಷಗಳ ಹಿಂದೆ ಅಪ್ಪ, ಅಮ್ಮ ತೀರ್ಥಯಾತ್ರೆಗೆ ಹೋದವರು ಅಪಘಾತದಲ್ಲಿ ಇಹಲೋಕವನ್ನೇ ತ್ಯಜಿಸಿದರು. ನನಗಾಗ ಕೆಲಸ ಸಿಕ್ಕಿತ್ತಷ್ಟೇ. ತಮ್ಮ ಹೈಸ್ಕೂಲಿನಲ್ಲಿದ್ದ. ಅಪ್ಪ ಕಟ್ಟಿಸಿದ ಮನೆಯೊಂದು ಇದ್ದಿದ್ದರಿಂದ ನಾನೂ ತಮ್ಮ ಹೇಗೋ ಜೀವನ ಕಳೆಯುತ್ತಿದ್ದೆವು. ಎರಡು ವರ್ಷದ ಹಿಂದೆ ನಮ್ಮ ಚಿಕ್ಕಪ್ಪ ನನಗೊಂದು ಹುಡುಗಿ ನೋಡಿ ಮದುವೆ ಮಾಡಿದರು. ನನಗೆ ಅಷ್ಟು ಬೇಗ ಮದುವೆಯಾಗಲು ಮನಸ್ಸಿಲ್ಲದಿದ್ದರೂ ಹುಡುಗಿ ನಮ್ಮ ಚಿಕ್ಕಮ್ಮನ ಕಡೆಯವಳಾದ್ದರಿಂದ ಅವರ ಒತ್ತಾಯಕ್ಕೆ ಕಟ್ಟುಬಿದ್ದು ವಿವಾಹಬಂಧನಕ್ಕೆ ಒಳಗಾದೆ. ಆದರೆ ಅವಳು ಈ ರೀತಿ ನನ್ನ ಕೊರಳಿಗೆ ಉರುಳಾಗುತ್ತಾಳೆ ಅಂತ ಭಾವಿಸಿರಲಿಲ್ಲ. ಅವಳದು ಕೆಟ್ಟ ಬಾಯಿ. ಇಡೀ ಹೊತ್ತೂ ನನ್ನನ್ನು ಮತ್ತು ನನ್ನ ತಮ್ಮನನ್ನು ಜರೆಯುತ್ತಾ ಇರುತ್ತಾಳೆ. ನನ್ನ ಮೇಲೆ ಬರೀ ಸಂಶಯ. ಕಲೀಗ್ಸ್ ಜೊತೆ ಮಾತಾಡಿದರೂ ಅನುಮಾನ. ನನಗೆ ಇಲ್ಲದ ಸಂಬಂಧ ಕಲ್ಪಿಸಿಕೊಂಡು ರಂಪಾಟ ಮಾಡುತ್ತಾಳೆ. ಮಗುವಾದರೆ ಸರಿಯಾಗುತ್ತಾಳೇನೋ ಅಂದುಕೊಂಡರೆ ಅದಕ್ಕೂ ಅವಳು ತಯಾರಿಲ್ಲ. ತಮ್ಮನನ್ನು ಕಂಡರಂತೂ ಉರಿದುಬೀಳುತ್ತಾಳೆ. ಅವನನ್ನು ಮನೆಯಿಂದ ಹೊರಕಳಿಸುವಂತೆ ನನಗೆ ಒತ್ತಡ ಹೇರುತ್ತಿದ್ದಾಳೆ. ಅವನದಿನ್ನೂ ಡಿಗ್ರಿ ಮುಗಿದಿಲ್ಲ. ಈಗ ಹೇಗೆ ಅವನನ್ನು ದೂರ ಮಾಡಲಿ? ಹಾಗೆ ಮಾಡಿದರೆ ಸತ್ತ ನನ್ನ ಅಪ್ಪ, ಅಮ್ಮನ ಆತ್ಮಕ್ಕೆ ಶಾಂತಿ ಸಿಗುವುದೇ? ಒಟ್ಟೂ ನನ್ನ ಜೀವನವೇ ಮೂರಾಬಟ್ಟೆಯಾಗಿದೆ. ದಾರಿ ತೋರಿಸುವಿರಾ?

: ಅವಳು ನಿಮ್ಮ ನೆಮ್ಮದಿಯನ್ನು ಹಾಳುಮಾಡಲೇ ನಿಮ್ಮ ಹೆಂಡತಿಯಾಗಿ ಬಂದಿರಬೇಕು. ತಂದೆ, ತಾಯಿಯನ್ನು ಕಳೆದುಕೊಂಡು ಬರಿದಾಗಿದ್ದ ನಿಮ್ಮ ಮನ-ಮನೆಗೆ ಅವಳು ಪ್ರೀತಿಯ ಸಿಂಚನವಾಗಿ ಬರಬೇಕಿತ್ತೇ ವಿನಃ ಈ ರೀತಿ ಹೆಮ್ಮಾರಿಯಾಗಿ ಅಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಹೆತ್ತವರನ್ನು ಕಳೆದುಕೊಂಡು ಅನಾಥನಾಗಿದ್ದ ನಿಮ್ಮ ತಮ್ಮನಿಗೆ ನಿಮ್ಮ ಆಸರೆಯೂ ಇಲ್ಲದಿದ್ದರೆ ಅವನ ಬಾಳಿಗೆ ಬೆಳಕಾಗುವವರು ಯಾರು? ಅತ್ತಿಗೆಯಾಗಿ ಬಂದವಳು ತಾಯಿಯ ಪ್ರೀತಿ ನೀಡುವ ಬದಲು ಈ ರೀತಿ ಮನೆಯಿಂದಲೇ ಹೊರಕಳಿಸುವ ಕೃತ್ಯಕ್ಕೆ ಇಳಿಯುತ್ತಾಳೆಯೆಂದರೆ ಅವಳು ನಿಜಕ್ಕೂ ಹೆಣ್ಣಲ್ಲ. ಅವಳ ಗುಣ ನಿಮ್ಮ ಚಿಕ್ಕಮ್ಮನಿಗಾದರೂ ಗೊತ್ತಿರಬಹುದು. ಹಾಗಿದ್ದೂ ಒತ್ತಡ ಹೇರಿ ನಿಮ್ಮ ಕೊರಳಿಗೆ ಅವಳನ್ನು ಕಟ್ಟಿದರು ಅಂದರೆ ಅವರಿಗೂ ನಿಮ್ಮ ಬಗ್ಗೆ ನಿಜವಾದ ವಾತ್ಸಲ್ಯ ಇಲ್ಲವೆಂದಾಯಿತು. ಯಾವುದಕ್ಕೂ ನಿಮ್ಮ ಚಿಕ್ಕಮ್ಮ, ಚಿಕ್ಕಪ್ಪನ ಹತ್ತಿರ ಮಾತಾಡಿ ಎಲ್ಲಾ ವಿಷಯ ಸಂಕೋಚವಿಲ್ಲದೇ ತಿಳಿಸಿ. ಇದೇ ರೀತಿ ಅವಳು ಮುಂದುವರಿದರೆ ಅವಳ ಜೊತೆ ಬಾಳುವುದೇ ಕಷ್ಟವಾಗಬಹುದು ಅಂತಲೂ ತಿಳಿಸಿ ಅವರು ಅವಳಿಗೆ ಬುದ್ಧಿ ಹೇಳುವಂತೆ ಮಾಡಿ. ಮತ್ತೂ ಸುಧಾರಣೆ ಕಾಣದಿದ್ದರೆ ನೀವು ಕಠಿಣ ನಿರ್ಧಾರ ತೆಗೆದುಕೊಳ್ಳುವುದೇ ಒಳ್ಳೆಯದು. ನಿಮ್ಮನ್ನು ಮತ್ತು ನಿಮ್ಮ ಒಬ್ಬನೇ ತಮ್ಮನನ್ನೂ ಪ್ರೀತಿಯಿಂದ ಕಾಣಲಾರದವಳು ನಿಮ್ಮ ಜೊತೆ ಇದ್ದರೆಷ್ಟು, ಬಿಟ್ಟರೆಷ್ಟು? ಅವಳು ನಿಮ್ಮ ಬಾಳಿಂದ ದೂರವಾದರೇ ನಿಮಗೆ ನೆಮ್ಮದಿ ಸಿಗಬಹುದು.