`ಕ್ಷಣ ಮಾತ್ರದಲ್ಲಿ ನನ್ನ ಜೀವನದ ಗತಿಯೇ ಬದಲಾಗಿ ಹೋಗಿತ್ತು’

“ಭಾರತ ಹೊರತು ಪಡಿಸಿ ವಿಶ್ವದ ಬೇರ್ಯಾವ ದೇಶದಲ್ಲೂ ಹೆದ್ದಾರಿ ಪಕ್ಕದ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿಯಿಲ್ಲ.”

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಅಕ್ಕಪಕ್ಕದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕೆಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿಗೆ ಕಾರಣರಾದ ವ್ಯಕ್ತಿ ಹರ್ಮನ್ ಸಿಂಗ್ ಸಿಂಧು. 1996ರಲ್ಲಿ ಅವರು ಕೆನಡಾಗೆ ಹೋಗಲು ತಯಾರಿ ನಡೆಸುತ್ತಿದ್ದಾಗ ಹಿಮಾಚಲ ಪ್ರದೇಶದಲ್ಲಿ ಅವರ ಕಾರು ಕಣಿವೆಗೆ ಬಿದ್ದ ಪರಿಣಾಮ ಬೆನ್ನ ಮೂಳೆಗೆ ಗಾಯಗಳುಂಟಾಗಿ ಅಂದಿನಿಂದ ಅವರು ಗಾಲಿ ಕುರ್ಚಿಯಲ್ಲಿಯೇ ಅತ್ತ್ತಿತ್ತ ಹೋಗುವಂತಾಗಿದೆ. ಈ ಘಟನೆಯ ನಂತರ ಅವರು ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿಗಳ ವಿರುದ್ದ ಕೋರ್ಟಿನ ಮೊರೆ ಹೋಗಿದ್ದರು. ಅವರೊಂದಿಗಿನ ಸಂದರ್ಶನದ ಆಯ್ದ ಭಾಗಗಳು.


  • ಕುಡಿದು ವಾಹನ ಚಲಾಯಿಸುವುದರ ವಿರುದ್ಧ ನೀವು ನ್ಯಾಯಾಲಯದ ಮೆಟ್ಟಿಲು ಹತ್ತಲು ಕಾರಣವೇನು ?

ಮದ್ಯ ಸೇವಿಸಿ ವಾಹನ ಚಲಾಯಿಸುವುದೇ ಹೆಚ್ಚಿನ ರಸ್ತೆ ಅಪಘಾತಗಳಿಗೆ ಕಾರಣವಾಗಿದೆ. ಮೇಲಾಗಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಮದ್ಯ ಸುಲಭವಾಗಿ ದೊರಕುತ್ತದೆ. ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಪ್ರತಿ ಎರಡು ಕಿಲೋಮೀಟರಿಗೆ ಕನಿಷ್ಠ ಒಂದೆರಡು ಮದ್ಯದಂಗಡಿಗಳು ಗೋಚರಿಸುತ್ತವೆ. ಇಷ್ಟು ಸುಲಭವಾಗಿ ಮದ್ಯ ದೊರೆಯುವುದೆಂದಾದಲ್ಲಿ  ಮದ್ಯ ಸೇವಿಸಿ ವಾಹನ ಚಲಾಯಿಸುವುದನ್ನು ನಿಯಂತ್ರಿಸಲಾಗುವುದಿಲ್ಲ. ನಾವು ಈ ಪ್ರಕರಣವನ್ನು 2012ರಿಂದ ಹೋರಾಡುತ್ತಿದ್ದು ಕೊನೆಗೂ ನಮ್ಮ ಪರವಾಗಿ ತೀರ್ಪು ಬಂದಿದೆ.


  • ಕುಡಿದು ವಾಹನ ಚಲಾಯಿಸುವುದರಿಂದ ಭಾರತದಲ್ಲಿ ಎಷ್ಟು ಅಪಘಾತಗಳಾಗುತ್ತಿವೆ ?

ಭಾರತದಲ್ಲಿ 2015ರಲ್ಲಿ 1.47 ಲಕ್ಷ ಜನ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದರೆ ಇವುಗಳಲ್ಲಿ ಸುಮಾರು ಶೇ 40ರಷ್ಟು ಅಪಘಾತಗಳು ಕುಡಿದು ವಾಹನ ಚಲಾಯಿಸುವುದರಿಂದ ಸಂಭವಿಸಿರುತ್ತವೆ. ವಿಶ್ವದಲ್ಲಿಯೇ ಭಾರತದಲ್ಲಿ ಇಂತಹ ಅತ್ಯಧಿಕ ಅಪಘಾತಗಳು ಸಂಭವಿಸಿವೆ.


  • ಮದ್ಯದಂಗಡಿಗಳನ್ನು ಮುಚ್ಚಿಸಿದರೆ ಸಮಸ್ಯೆ ಪರಿಹಾರವಾಗುವುದೆಂದು ನಿಮಗನಿಸುv್ತ z Éಯೇ ?

ಮದ್ಯ ಸೇವಿಸಿ ವಾಹನ ಚಲಾಯಿಸುವುದಕ್ಕೆ ಮೂರು ಕಾರಣಗಳಿವೆ. ಮೊದಲನೆಯದಾಗಿ – ಮದ್ಯದ ಲಭ್ಯತೆ, ಎರಡನೆಯದಾಗಿ ಅರಿವಿನ ಕೊರತೆ ಹಾಗೂ ಮೂರನೆಯದಾಗಿ ಕಾನೂನಿನ ಜಾರಿಯಲ್ಲಿ ಲೋಪ.  ಮದ್ಯವು ಹೆದ್ದಾರಿ ಪಕ್ಕಗಳಲ್ಲಿ ಇಷ್ಟೊಂದು ಸುಲಭವಾಗಿ ದೊರೆಯುವಾಗ  ಕುಡಿದು ವಾಹನ ಚಲಾಯಿಸುವುದರ ಗಂಭೀರ ಪರಿಣಾಮದ ಅರಿವು ಮೂಡಿಸುವುದರಿಂದ ಅಥವಾ ಕಠಿಣ ನಿಯಮ ಜಾರಿಗೊಳಿಸುವುದರಿಂದ ಪ್ರಯೋಜನವಿಲ್ಲ. ಅಪಾಯಕಾರಿ ಪರ್ವತ ಪ್ರದೇಶಗಳ ರಸ್ತೆಗಳ ಸಮೀಪವೂ ಹಿಮಾಚಲ ಪ್ರದೇಶದಲ್ಲಿ ಮದ್ಯದಂಗಡಿಗಳಿವೆ. ಹೀಗಿರುವಾಗ ಚಾಲಕರಿಗೆ ಮದ್ಯ ಖರೀದಿಸುವ  ತವಕ ಹೆಚ್ಚಾಗುತ್ತದೆ.


  • ಸುಪ್ರೀಂ ಕೋರ್ಟಿನ ಇತ್ತೀಚಿಗಿನ ಆದೇಶದ ನಂತರ ಜನರು ಕುಡಿದು ವಾಹನ ಚಲಾಯಿಸಲಿಕ್ಕಿಲ್ಲವೆಂದು ನೀವಂದುಕೊಳ್ಳುತ್ತೀರಾ ?

ಸ್ವಲ್ಪವಾದರೂ ವ್ಯತ್ಯಾಸವನ್ನು ನಾವು ಕಂಡೇ ಕಾಣುತ್ತೇವೆ.  ಉದಾ : ನಾನು ಮುಂಬೈಯಿಂದ ಗೋವಾಗೆ ರಸ್ತೆ ಮಾರ್ಗದಲ್ಲಿ ಪ್ರಯಾಣಿಸುವಾಗ ಮದ್ಯ ಖರೀದಿಸಬೇಕೆಂದೆನಿಸಿದರೂ ಮದ್ಯದಂಗಡಿಗಳಿಲ್ಲದೇ ಇರುವಾಗ ನನಗೆ ಏನೂ ಮಾಡಲು ಅಸಾಧ್ಯ. ಮೇಲಾಗಿ ಭಾರತ ಹೊರತು ಪಡಿಸಿ ವಿಶ್ವದ ಬೇರ್ಯಾವ ದೇಶದಲ್ಲೂ ಹೆದ್ದಾರಿ ಪಕ್ಕದ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿಯಿಲ್ಲ.


  • ನೀವು ಈ ವಿಚಾರದ ಮೇಲೆ ಸುಪ್ರೀಂ ಕೋರ್ಟಿನ ಕದ ತಟ್ಟಲು ಕಾರಣವೇನು ?

ಇಪ್ಪತ್ತು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದಲ್ಲಿ ನಡೆದ ರಸ್ತೆ  ಅಪಘಾತವೊಂದರಲ್ಲಿ ಬೆನ್ನು ಮೂಳೆಗೆ ಪೆಟ್ಟಾಗಿ ಅಂದಿನಿಂದ ನನಗೆ ಗಾಲಿಕುರ್ಚಿಯಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲವಾಗಿದೆ. ಕ್ಷಣ ಮಾತ್ರದಲ್ಲಿ ನನ್ನ ಜೀವನದ ಗತಿಯೇ ಬದಲಾಗಿ ಹೋಗಿತ್ತು. ಕಾರಿನಲ್ಲಿ ನಾಲ್ಕು ಮಂದಿಯಿದ್ದರು. ನಾನು ಹಿಂದಿನ ಸೀಟಿನಲ್ಲಿದ್ದೆ. ಒಂದು ವಾರದ ನಂತರ ನಾನು ಕೆನಡಾಗೆ ಹೋಗುವವನಿದ್ದೆ. ಆದರೆ ಅದು ಸಾಧ್ಯವಾಗಲೇ ಇಲ್ಲ.  ಅಂದಿನಿಂದ ನಾನು ರಸ್ತೆ ಸುರಕ್ಷತೆ ವಿಚಾರದಲ್ಲಿ ಹೋರಾಡುತ್ತಿದ್ದೇನೆ. ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೆ ಒಬ್ಬ ವ್ಯಕ್ತಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಾನೆ. ಕಠಿಣ ಕಾನೂನುಗಳಿಂದ ಇಂತಹ ಸಾವುಗಳನ್ನು ತಡೆಯಬಹುದಾಗಿದೆ.


  • ಬಿಹಾರದಲ್ಲಿ ಮದ್ಯ ನಿಷೇಧ ಒಂದು ಉತ್ತಮ ಕ್ರಮವೇ ?

ಇಲ್ಲ. ನಾನದನ್ನು ಬೆಂಬಲಿಸುವುದಿಲ್ಲ. ಅದು ಬೇರೆ ವಿಚಾರ. ಜನರ ಜೀವಕ್ಕೆ ಅಪಾಯವಾಗುವಂತಹ ಸ್ಥಳಗಳಲ್ಲಿ ಮದ್ಯ ಮಾರಾಟ ನಿಯಂತ್ರಿಸಬೇಕೆಂಬುದೇ ನನ್ನ ಇಚ್ಛೆ.


  • ಜನರು ಮದ್ಯ ಸೇವಿಸಿ ವಾಹನಗಳನ್ನು ಏಕೆ ಚಲಾಯಿಸುತ್ತಾರೆಂದು ನೀವು ತಿಳಿಯಲು ಯತ್ನಿಸಿದ್ದೀರಾ ?

ಅದು ಕೇವಲ ಮಜಾಕ್ಕಾಗಿ. ಕೆಲವರಿಗೆ ಹಾಗೆ ಮಾಡುವುದರಿಂದ ಒಂದು ಥ್ರಿಲ್ ಅನುಭವವಾಗುತ್ತದೆ. ಒಮ್ಮೆ ಹಾಗೆ ಮಾಡಿದಾಗ ಯಾವುದೇ ಅಪಘಾತವಾಗದೇ ಇದ್ದರೆ ಮತ್ತೆ ಯಾವುದೇ ಅಪಘಾತವಾಗದು ಎಂದು ಅವರು ತಿಳಿಯುತ್ತಾರೆ.


  • ಬೇರೆ ಯಾವುದಾದರೂ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ನೀವು ದಾಖಲಿಸಿದ್ದೀರಾ ?

ನಮ್ಮ ದೇಶದಲ್ಲಿ ನಿರ್ಮಿಸಲಾಗುವ ಕಳಪೆ ಗುಣಮಟ್ಟದ ರಸ್ತೆಗಳ ಬಗ್ಗೆಯೂ ನಾನು ಇನ್ನೊಂದು ದಾವೆ ದಾಖಲಿಸಿದ್ದೇನೆ. ಇಂತಹ ರಸ್ತೆಗಳಿಂದಲೂ ಅನೇಕ ಅಪಘಾತಗಳಾಗುತ್ತವೆ.