ಗರ್ಲ್ಫ್ರೆಂಡ್ ಯಾಕೆ ಈ ರೀತಿ ಮಾಡಿರಬಹುದು?

ಈಗ ನಿಮ್ಮನ್ನೇ ನೆಚ್ಚಿಕೊಂಡಿದ್ದರೆ ನಿಮ್ಮ ಸೇವೆ ಮಾಡುವುದು ಬಿಟ್ಟು ಬೇರೇನೂ ತನಗೆ ಲಾಭವಿಲ್ಲ ಅಂತ ಚೆನ್ನಾಗಿ ಗೊತ್ತು ಆ ಬಿನ್ನಾಣಗಿತ್ತಿಗೆ.

ಪ್ರ : ಅವಳನ್ನು ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಮೂರು ವರ್ಷಗಳ ಹಿಂದೆ ಅವಳು ನನ್ನ ನೋಡಿ ನಕ್ಕ ಆ ಮಾದಕ ನಗು ಆಕೆಯನ್ನು ಹುಚ್ಚರಂತೆ ಪ್ರೀತಿಸುವಂತೆ ಮಾಡಿತು. ಅವಳಿಗಾಗಿ ನಾನು ಇಡೀ ದಿನ ಅವಳ ಮನೆಯ ಮುಂದೆ ನಾಯಿಯಂತೆ ಕಾಯುತ್ತಿದ್ದೆ. ಅವಳನ್ನು ಖುಶಿಪಡಿಸಲು ಅಮ್ಮ, ಅಪ್ಪನ ಹತ್ತಿರ ಜಗಳವಾಡಿ ಬೈಕ್ ತೆಗೆದುಕೊಂಡೆ. ಮನೆಯವರ ಹತ್ತಿರ, ಮದುವೆಯಾದ ಅಕ್ಕನ ಹತ್ತಿರವೂ ಸುಳ್ಳು ಹೇಳಿ ಹಣ ಪೀಕಿಸಿ ಅವಳಿಗೆ ಐಸ್‍ಕ್ರೀಂ ಕೊಡಿಸುತ್ತಿದ್ದೆ, ಸಿನಿಮಾಗೆ ಕರೆದುಕೊಂಡು ಹೋಗುತ್ತಿದ್ದೆ. ಅವಳು ಒಯ್ಯಾರದಿಂದ ಕೇಳಿದ ಯಾವ ವಸ್ತುವನ್ನು ತಂದುಕೊಡಲೂ ನಾನು ಹಿಂದೆಮುಂದೆ ನೋಡುತ್ತಿರಲಿಲ್ಲ. ಸ್ನೇಹಿತರ ಗೇಲಿಗೂ ಬೆಲೆಕೊಡದೇ ಅವಳ ಹಿಂದೆ ಓಡುತ್ತಿದ್ದೆ. ಅಷ್ಟೊಂದು ಪ್ರೀತಿಸುತ್ತಿದ್ದ ಆ ಹುಡುಗಿ ಈಗ ನನ್ನ ಫೋನ್ ಸಹ ರಿಸೀವ್ ಮಾಡುತ್ತಿಲ್ಲ. ಅದಕ್ಕೆಲ್ಲ ಕಾರಣವಾಗಿದ್ದು ನನ್ನ ಈ ಮುರಿದ ಕಾಲು. ಅಂದು ಅವಳನ್ನು ಮನೆಯ ಹತ್ತಿರ ಬಿಟ್ಟು ಅವಳ ಗುಂಗಿನಲ್ಲೇ ವಾಪಾಸು ಬರುತ್ತಿದ್ದ ನನಗೆ ಲಾರಿ ಎದುರಿಗೆ ಬಂದದ್ದೇ ಗೊತ್ತಾಗಲಿಲ್ಲ. ಎಚ್ಚರವಾದಾಗ ನಾನು ಆಸ್ಪತ್ರೆಯಲ್ಲಿದ್ದೆ. ನನ್ನ ಎರಡೂ ಕಾಲುಗಳಿಗೆ ಬಲವಾದ ಏಟು ಬಿದ್ದು ಈಗ ನಡೆಯಲೇ ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದೇನೆ. ಕಾಲಿಗೆ ರಾಡ್ ಹಾಕಿದ್ದು ಇನ್ನಾರು ತಿಂಗಳು ಬೇಕಂತೆ ನನಗೆ ಗುಣವಾಗಲು. ಈ ಸಮಯದಲ್ಲಿ ಅವಳು ತುಂಬಾ ನೆನಪಾಗುತ್ತಿದ್ದಾಳೆ. ಒಮ್ಮೆ ಮಾತ್ರ ಆಸ್ಪತ್ರೆಗೆ ಬಂದವಳು ಮತ್ತೆ ಬಂದೇ ಇಲ್ಲ, ಮಾತೂ ಆಡಿಲ್ಲ. ಮೊನ್ನೆ ನನ್ನ ಗೆಳೆಯ ಬಂದಾಗ ಅವಳನ್ನು ನೋಡುವ ಆಸೆ ವ್ಯಕ್ತಪಡಿಸಿದೆ. ಆದರೆ ಅದಕ್ಕವನು `ಅವಳನ್ನು ಮರೆಯುವುದೇ ಒಳ್ಳೆಯದು. ಅವಳು ಈಗ ಬೇರೊಬ್ಬನ ಜೊತೆ ಸುತ್ತುತ್ತಿದ್ದಾಳೆ’ ಅಂತಂದ. ಅವನು ನನ್ನ ಬಾಲ್ಯಗೆಳೆಯನಾದರೂ ನನಗೆ ಅವನ ಮಾತು ನಂಬುವುದೇ ಕಷ್ಟವಾಗುತ್ತಿದೆ. ಅವಳಿಗಾಗಿ ನನ್ನ ಹೃದಯ ಚೀರುತ್ತಿದೆ. ಅವಳಿಲ್ಲದೇ ನಾನು ಹೇಗಿರಲಿ? ಯಾಕವಳು ಈ ರೀತಿ ಮಾಡಿರಬಹುದು?

: ನಮಗೆ ನಿಜವಾದ ಹಿತವರು ಯಾರು ಅಂತ ಗೊತ್ತಾಗುವುದೇ ಕಷ್ಟದಲ್ಲಿರುವಾಗ. ನೀವು ಇಷ್ಟು ದಿನ ಅವಳು ಕೇಳಿದ್ದು ಕೊಡುವ ಕಾಮಧೇನು ಆಗಿದ್ದೀರಿ. ಬೈಕಿನಲ್ಲಿ ಜಾಲಿಯಾಗಿ ಸುತ್ತಾಡುತ್ತಾ ಬಿಟ್ಟಿ ಸಿನಿಮಾ ನೋಡಲು, ದಿನಕ್ಕೊಂದು ಹೊಟೇಲಿನಲ್ಲಿ ಮೆಲ್ಲಲು ನೀವೊಬ್ಬ ಪೇದ್ರು ಸಿಕ್ಕಿದ್ರಿ ಅವಳಿಗೆ. ಚೆನ್ನಾಗಿ ನಿಮಗೆ ಬೆಣ್ಣೆ ಹಚ್ಚಿ ತನಗೆ ಬೇಕಾದ್ದು ಪಡೆದುಕೊಂಡಳು. ಈಗ ನಿಮ್ಮನ್ನೇ ನೆಚ್ಚಿಕೊಂಡಿದ್ದರೆ ನಿಮ್ಮ ಸೇವೆ ಮಾಡುವುದು ಬಿಟ್ಟು ಬೇರೇನೂ ತನಗೆ ಲಾಭವಿಲ್ಲ ಅಂತ ಚೆನ್ನಾಗಿ ಗೊತ್ತು ಆ ಬಿನ್ನಾಣಗಿತ್ತಿಗೆ. ಅದಕ್ಕೇ ಬೇರೊಬ್ಬ ಮಿಕನಿಗೆ ಬಲೆ ಬೀಸಿದ್ದಾಳೆ. ನೀವೂ ಅವಳ ಅಸಲೀಯತ್ತು ಅರಿಯದೇ ಅವಳ ತಾಳಕ್ಕೆ ಸರಿಯಾಗಿ ಕುಣಿದಿರಿ ಇಷ್ಟು ದಿನ. ಇನ್ನು ನಿಮ್ಮನ್ನು ಕುಣಿಸುವುದು ಕಷ್ಟ ಅಂತ ಗೊತ್ತಾಗಿ ನಿಮ್ಮಿಂದ ದೂರವಿರುವುದೇ ತನಗೆ ಅನುಕೂಲ ಅಂತ ಅವಳು ಭಾವಿಸಿದ್ದಾಳೆ. ಆದರೆ ನಿಮಗೆ ಅವಳ ಈ ವರ್ತನೆ ನೋವು ತಂದರೂ ಒಂದು ರೀತಿಯಲ್ಲಿ ನೋಡಿದರೆ ಈ ಘಟನೆಯಾಗಿದ್ದು ಒಳ್ಳೆಯದೇ ಆಯಿತು. ಜೀವನಪೂರ್ತಿ ಅಂತಹ ಸ್ವಾರ್ಥಿ ಹುಡುಗಿಯ ಜೊತೆ ಬಾಳುವುದು ತಪ್ಪಿತು. ಅಂತವರು ಎಂದಿದ್ದರೂ ನಡುನೀರಿನಲ್ಲಿ ಕೈಬಿಡುವವರೇ. ನಿಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಲೂ ಸಕಾಲವಿದು. ಇನು ಸ್ವಲ್ಪ ದಿನಗಳಲ್ಲೇ ನೀವು ಹುಶಾರಾಗುತ್ತೀರಿ. ಈ ಘಟನೆ ನಿಮಗೆ ಪುನರ್ಜನ್ಮ ಕೊಟ್ಟಿತು ಅಂತ ತಿಳಿದು ಮುಂದೆ ಹೆಜ್ಜೆ ಇಡುವಾಗ ಸರಿಯಾಗಿ ಯೋಚಿಸಿಯೇ ಮುಂದುವರಿಯಿರಿ.