ಗಂಡ ನನ್ನನ್ನು ನಡೆಸಿಕೊಳ್ಳುವ ರೀತಿ ಸರಿಯಿಲ್ಲ

ಪ್ರ : ಗಂಡ ನನಗಿಂತ ಹದಿಮೂರು ವರ್ಷ ದೊಡ್ಡವರು. ಮದುವೆಯಾಗಿ ಈಗ ಒಂದು ವರ್ಷವಾಯಿತು. ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಆದರೂ ನಮ್ಮ ಮಧ್ಯೆ ಯಾವುದೂ ಸರಿಯಿಲ್ಲ. ಮನೆಯಲ್ಲಿ ಏನೇ ಹೆಚ್ಚುಕಡಿಮೆಯಾದರೂ ಅವರು ನನ್ನನ್ನೇ ದೂಷಿಸುತ್ತಾರೆ. ನಾನು ಅವರಿಗೆ ಏನು ನಡೆಯಿತು ಅಂತ ವಿವರಿಸಲೂ ನನಗೆ ಅವಕಾಶ ಕೊಡುವುದಿಲ್ಲ. ಅವರದೇ ತಪ್ಪಿದ್ದರೂ ನಾನು ಅದನ್ನು ಹೇಳುವ ಹಾಗೂ ಇಲ್ಲ. ಒಂದು ವೇಳೆ ಹೇಳಿದರೂ ದೊಡ್ಡ ಸ್ವರದಲ್ಲಿ ಕೂಗಾಡಿ ನನ್ನ ಬಾಯಿ ಮುಚ್ಚಿಸುತ್ತಾರೆ. ಅವರು ಹೇಳಿದ್ದನ್ನು ಕೇಳಿಕೊಂಡು ಸುಮ್ಮನಿರಬೇಕು. ಕೆಲವೊಮ್ಮೆ ನನಗೆ ಅವರ ಮಾತಿನಿಂದ ತುಂಬಾ ನೋವಾಗುತ್ತದೆ. ಅವರ ಹತ್ತಿರ ಮಾತಾಡಲೇ ಭಯವಾಗುತ್ತದೆ. ನಾನು ನನ್ನ ತಂದೆಯ ಹತ್ತಿರವೂ ಈ ರೀತಿಯ ಅಂತರದಲ್ಲಿ ಇರಲಿಲ್ಲ. ಒಳ್ಳೆಯ ಮನೆತನದ ದೊಡ್ಡ ಬಿಸಿನೆಸ್ ಇರುವ ಹುಡುಗ ಸಿಕ್ಕಿದ ಅಂತ ನಮ್ಮ ಮನೆಯವರು ನಮ್ಮಿಬ್ಬರ ವಯಸ್ಸಿನ ಅಂತರ ಹದಿಮೂರು ವರ್ಷವಿದ್ದರೂ ಮದುವೆ ಮಾಡಿಕೊಟ್ಟರು. ಹಾಸಿಗೆಯಲ್ಲೂ ಅಷ್ಟೇ. ಅವರಿಗೆ ಬೇಕಾದ್ದು ಪಡೆದು ಮುಖ ತಿರುಗಿಸಿಕೊಂಡು ಮಲಗಿಬಿಡುತ್ತಾರೆ. ಪ್ರೀತಿಯ ಮಾತಿಲ್ಲ, ಕಥೆಯಿಲ್ಲ. ನನಗೇನು ಬೇಕೆಂದು ಕೇಳುವುದೂ ಇಲ್ಲ. ನನ್ನ ಇಷ್ಟಾನಿಷ್ಠದ ಪರಿವೆಯೂ ಅವರಿಗಿಲ್ಲ. ಆದರೆ ಮನೆಯಲ್ಲಿ ಬೇರೆ ಯಾವ ಕೊರತೆಯೂ ನನಗಿಲ್ಲ. ನನಗೆ ಬೇಕಾದ್ದು ತೆಗೆದುಕೊಳ್ಳಲು ನನ್ನ ಅಕೌಂಟಿಗೆ ಬೇಕಷ್ಟು ಹಣ ಹಾಕಿರುತ್ತಾರೆ. ಆದರೂ ಒಂಟಿತನ ಕಾಡುತ್ತಿದೆ. ನಾನೇನು ಮಾಡಲಿ?

: ಸಮವಯಸ್ಕರೇ ಮದುವೆಯಾಗುವ ಈ ಕಾಲದಲ್ಲಿ ನಿಮಗಿಂತ ದಶಕಕ್ಕಿಂತಲೂ ಜಾಸ್ತಿ ಇರುವ ಹುಡುಗನನ್ನು ಮದುವೆಯಾಗಿ ತೊಂದರೆ ಅನುಭವಿಸುತ್ತಿದ್ದೀರಿ. ಅವರ ಮೆಚುರಿಟಿಗೆ ನೀವಿನ್ನೂ ಹುಡುಗು ಸ್ವಭಾವದವರಾಗಿ ಅವರಿಗನಿಸಬಹುದು. ಅವರು ಅದನ್ನೇ ತಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ನೀವು ವಯಸ್ಸಿನಲ್ಲಿ ಅವರಿಗಿಂತ ತುಂಬಾ ಚಿಕ್ಕವರಿರುವುದರಿಂದ ನಿಮಗೇನೂ ಗೊತ್ತಿಲ್ಲ ಅನ್ನುವ ಭಾವನೆ ಅವರದು. ದೊಡ್ಡವರಾದ ಕೂಡಲೇ ಅವರು ಮಾಡುವುದೆಲ್ಲವೂ ಸರಿ ಅಂತೇನೂ ಅಲ್ಲವಲ್ಲ. ಹೆಚ್ಚಿನ ಗಂಡಸರಲ್ಲಿ ಇರುವ ಮೇಲ್ ಈಗೋ ಜೊತೆ ವಯಸ್ಸಿನ ಅಂತರವೂ ಸೇರಿ ಅವರು ನಿಮ್ಮನ್ನು ತುಂಬಾ ಲಘುವಾಗಿ ಕಾಣುತ್ತಿದ್ದಾರೆ. ಜಾಸ್ತಿ ಸೆಂಟಿಮೆಂಟಲ್ ಆಗದೇ ನಿಮ್ಮ ಡ್ಯೂಟಿ ಮಾತ್ರ ಮಾಡ್ತಾ ಹೋಗಿ. ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದೇ ನಿಮಗಿಷ್ಟವಾದ ಹವ್ಯಾಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುತ್ತಾ ನಿಮ್ಮ ವ್ಯಕ್ತಿತ್ವವನ್ನು ನೀವು ಬೆಳೆಸಿಕೊಳ್ಳುತ್ತಾ ಹೋಗಿ. ಆದಷ್ಟು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಸಾಧ್ಯವಾದರೆ ಅವರ ಬಿಸಿನೆಸ್ಸಿನ ಒಳಹೊರಗು ಅರಿತು ಅವರಿಗೇ ಆಶ್ಚರ್ಯವಾಗುವ ರೀತಿಯಲ್ಲಿ ಅವರಿಗೆ ಸಾಥ್ ಕೊಡಿ. ಹಾಗಾದರೆ ಕೆಲವು ಸಮಯದಲ್ಲಿ ನಿಮ್ಮ ನಡುವಿನ ಈ ಅಂತರ ಕಡಿಮೆಯಾಗಬಹುದು.