ಗಂಡ ನನ್ನನ್ನು ಅವಾಯ್ಡ್ ಮಾಡುತ್ತಿರಬಹುದೇ?

ನೀವು ಸ್ವಲ್ಪ ದಪ್ಪವಾಗಿದ್ದೀರಿ ಎನ್ನುವ ಏಕೈಕ ಕಾರಣಕ್ಕಾಗಿ ಅವರ ಮಕ್ಕಳ ತಾಯಿಯಾದ ನಿಮ್ಮನ್ನು ಕಡೆಗಣಿಸುತ್ತಿದ್ದಾರೆ ಅಂತ ನನಗನಿಸುವುದಿಲ್ಲ.

ಪ್ರ : ನನಗೀಗ 35. ಅವರಿಗೆ 40. ಇಬ್ಬರು ಶಾಲೆಗೆ ಹೋಗುವ ಮಕ್ಕಳಿದ್ದಾರೆ. ನಾನು ಮದುವೆಯಾಗುವಾಗ ತೆಳ್ಳಗಿದ್ದೆ. ಆದರೆ ಈಗ ಸ್ವಲ್ಪ ದಪ್ಪವಾಗಿದ್ದೇನೆ. ನಮ್ಮವರು ಬ್ಯಾಂಕ್‍ನಲ್ಲಿ ಮೆನೇಜರ್ ಆಗಿದ್ದಾರೆ. ಅವರು ಬೆಳಿಗ್ಗೆ ಹೋದರೆ ಬರುವುದು ಸಂಜೆ ಕಳೆಯುತ್ತದೆ. ಮಕ್ಕಳೂ ಶಾಲೆ, ಟ್ಯೂಷನ್ ಅಂತ ಹೆಚ್ಚು ಸಮಯ ಹೊರಗಡೆಯೇ ಇರುತ್ತಾರೆ. ಮಕ್ಕಳನ್ನು ಕರೆದುಕೊಂಡು ಹೋಗಲು, ವಾಪಾಸು ಕರೆತರಲು ಕಾರು, ಡ್ರೈವರ್ ಇದ್ದಾರೆ. ಬೆಳಿಗ್ಗೆಯಿಂದ ಸಂಜೆಯ ತನಕ ಒಬ್ಬಳೇ ಕುಳಿತು ಬೇಸರವಾಗುವುದರಿಂದ ಟೀವಿ ನೋಡುತ್ತಾ ಸಮಯ ಕಳೆಯುತ್ತೇನೆ. ನನಗೆ ಟೀವಿ ನೋಡುವಾಗ ಏನಾದರೂ ಬಾಯಲ್ಲಿ ಕುರುಕುರಿಸುತ್ತಿರುವುದು ಇಷ್ಟ. ಅದಕ್ಕೇ ದಪ್ಪವಾಗಿಬಿಟ್ಟಿದ್ದೇನೆ. ನನ್ನ ಗಂಡ ಈಗೀಗ ನನ್ನ ಜೊತೆ ಮೊದಲಿನಂತಿಲ್ಲ. ಮೊದಲೆಲ್ಲ ಸೆಕ್ಸ್ ಅವರಿಗೆ ದಿನಾ ಬೇಕಿತ್ತು. ಕೆಲವು ಸಮಯದಿಂದ ಅದು ತುಂಬಾ ಅಪರೂಪವಾಗಿದೆ. ಮೊದಲೆಲ್ಲ ಆಗಾಗ ಹೊರಗಡೆ ಕರೆದುಕೊಂಡು ಹೋಗುತ್ತಿದ್ದರು. ಈಗ ಅದೂ ಕಡಿಮೆಯಾಗಿದೆ. ಅವರು ಬರುವುದೂ ಲೇಟ್. ಬಂದ ನಂತರ ಟೀವಿಯಲ್ಲಿ ನ್ಯೂಸ್ ನೋಡುತ್ತಾ ಕೂರುತ್ತಾರೆ, ಇಲ್ಲಾ ಫೋನಿನಲ್ಲಿ ಮಾತಾಡುತ್ತಿರುತ್ತಾರೆ. ಅವರಿಗೆ ಬೇರೆಯವರ ಜೊತೆ ಸಂಬಂಧವಿರಬಹುದೇ? ನಾನು ದಪ್ಪವಾಗಿದ್ದೇನೆ ಎನ್ನುವ ಕಾರಣಕ್ಕಾಗಿ ನನ್ನ ಮೇಲಿನ ಆಕರ್ಷಣೆ ಕಡಿಮೆಯಾಗಿ ಬೇರೆಯವರ ಸಂಗ ಮಾಡಿರಬಹುದೇ? ಯಾಕೆ ಅವರು ನನ್ನನ್ನು ಅವಾಯ್ಡ್ ಮಾಡುತ್ತಿರಬಹುದು?

: ಇಲ್ಲದ್ದು ಕಲ್ಪಿಸಿಕೊಂಡು ಸುಮ್ಮನೇ ಕೊರಗಬೇಡಿ. ನಿಮ್ಮ ಗಂಡ ಜವಾಬ್ದಾರಿ ಸ್ಥಾನದಲ್ಲಿರುವುದರಿಂದ ಅವರಿಗೆ ಆಫೀಸಿನ ಕೆಲಸದ  ಭಾರ, ಟೆನ್ಷನ್ ಎಲ್ಲ ಇರುತ್ತದೆ. ಅದಕ್ಕೇ ಅವರು ನಿಮ್ಮ ಜೊತೆ ಹೆಚ್ಚು ಸಮಯ ಕಳೆಯುತ್ತಿಲ್ಲದೇ ಇರÀಬಹುದು. ಅವರು ಬೇರೆ ಹುಡುಗಿಯರ ಸಂಗ ಮಾಡುತ್ತಿದ್ದಾರೆ ಅಂತ ನಿಮಗೆ ಯಾಕೆ ಅನಿಸಿತು? ಯಾವುದಾದರೂ ಬಲವಾದ ಸಾಕ್ಷಿ ಇದೆಯಾ? ಅಥವಾ ನೀವು ಅವರನ್ನು ಯಾವುದಾದರೂ ಹುಡುಗಿಯ ಜೊತೆ ಸುತ್ತುವುದನ್ನು ಕಂಡಿದ್ದೀರಾ? ಇಲ್ಲ ತಾನೇ? ಸುಮ್ಮನೆ ಸಂಶಯ ಪಟ್ಟು ನಿಮ್ಮ ನೆಮ್ಮದಿ ಕೆಡಿಸಿಕೊಂಡು ನಿಮ್ಮ ಗಂಡನ ಮೂಡ್ ಕೂಡಾ ಯಾಕೆ ಹಾಳು ಮಾಡುತ್ತೀರಿ? ನೀವು ಸ್ವಲ್ಪ ದಪ್ಪವಾಗಿದ್ದೀರಿ ಅನ್ನುವ ಏಕೈಕ ಕಾರಣಕ್ಕಾಗಿ ಅವರ ಮಕ್ಕಳ ತಾಯಿಯಾದ ನಿಮ್ಮನ್ನು ಕಡೆಗಣಿಸುತ್ತಿದ್ದಾರೆ ಅಂತ ನನಗನಿಸುವುದಿಲ್ಲ. ಆದರೂ ನೀವು ಬರೀ ಟೀವಿಗೆ ಅಡಿಕ್ಟ್ ಆಗದೇ ಗಂಡ ಮತ್ತು ಮಕ್ಕಳ ಕಡೆ ಜಾಸ್ತಿ ಗಮನ ಕೊಡುವುದು ಒಳ್ಳೆಯದು. ಬೆಳಿಗ್ಗೆಯಿಂದ ಸಂಜೆಯವರೆಗೆ ಹೊರಗೆ ದುಡಿದು ಬಂದ ಪತಿ ನಿಮ್ಮಿಂದ ಪ್ರೀತಿಯ ಮಾತು, ಉಪಚಾರ ಎಲ್ಲವನ್ನೂ ಬಯಸುತ್ತಾರೆ. ಅವರು ಬರುವ ಹೊತ್ತಿಗೆ ನೀವು ನಿಮ್ಮ ಕೆಲಸವೆಲ್ಲ ಮುಗಿಸಿಕೊಂಡು ಅವರಿಗೆ ಕಂಪೆನಿ ಕೊಡಿ. ಆಗ ಅವರೂ ತಮ್ಮ ಮನಸ್ಸಿನ ಭಾವನೆಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಬಹುದು. ಆಗ ನಿಮ್ಮ ನಡುವಿನ ಸಂಬಂಧವೂ ಗಟ್ಟಿಯಾಗುತ್ತದೆ. ನೀವೂ ಅಷ್ಟೇ, ಯಾವುದಾದರೂ ಉಪಯುಕ್ತ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ ನಿಮಗೆ ಕೆಟ್ಟ ಆಲೋಚನೆ ಬರುವುದೂ ತಪ್ಪುತ್ತದೆ, ಒಂದೇ ಕಡೆ ಕುಳಿತು ದಪ್ಪವಾಗುವುದೂ ತಪ್ಪುತ್ತದೆ. ಅದು ನೀವು ಆಕರ್ಷಕವಾಗಿ ಕಾಣುವಂತೆ ಮಾಡುವುದರ ಜೊತೆಗೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಗಂಡನಾಗಿಯೇ ನಿಮ್ಮನ್ನು ಹೊರಗೆ ಕರೆದುಕೊಂಡು ಹೋಗಲಿ ಅಂತ ಕಾಯುವುದಕ್ಕಿಂತ ನೀವೇ ಮಕ್ಕಳ ಮತ್ತು ಪತಿಯ ಜೊತೆ ವಾರಕ್ಕೊಮ್ಮೆಯಾದರೂ ಔಟಿಂಗ್ ಬಗ್ಗೆ ಪ್ಲಾನ್ ಮಾಡಬಹುದಲ್ಲಾ?