ಗಂಡನಿಗೆ ಬೇರೆ ಸಂಬಂಧವಿದೆಯಂತೆ

ಪ್ರ : ಮದುವೆಯಾಗಿ ಎರಡು ತಿಂಗಳಾಯಿತು. ನಮ್ಮದು ಹಿರಿಯರು ನೋಡಿ ಮಾಡಿದ ಮದುವೆಯೇ. ಆದರೂ ನಾನು ಮೋಸ ಹೋಗಿದ್ದೇನೆ. ನನ್ನ ಗಂಡ ಪ್ರತೀದಿನ ತಡವಾಗಿ ಮನೆಗೆ ಬರುತ್ತಿದ್ದರು. ಅವರಿಗೆ ನನ್ನ ಬಗ್ಗೆ ಇಂಟರೆಸ್ಟೂ ಇರಲಿಲ್ಲ. ಎರಡು ತಿಂಗಳಲ್ಲಿ ನಾಲ್ಕೈದು ಬಾರಿ ನನ್ನ ಜೊತೆ ಮಲಗಿದ್ದರು. ಕಳೆದ ವಾರ ಕುಡಿದ ಅಮಲಿನಲ್ಲಿ ಅವರು ಏನೇನೋ ಹಲುಬುತ್ತಿದ್ದರು. ಅವರಿಗೆ ಬೇರೆ ಹೆಂಗಸಿನ ಜೊತೆ ಸಂಬಂಧವಿದೆಯಂತೆ, ಅವರಿಗೆ ನನ್ನ ಬಗ್ಗೆ ಇಷ್ಟವೇ ಇಲ್ಲವಂತೆ. ಮನೆಯವರ ಒತ್ತಾಯಕ್ಕೆ ನನ್ನನ್ನು ಮದುವೆಯಾಗಿದ್ದಂತೆ. ಅದನ್ನು ಕೇಳಿದ ನನಗೆ ರಾತ್ರಿ ಇಡೀ ನಿದ್ದೆ ಬರದೇ ಬೆಳಗಾಗುತ್ತಲೇ ನನ್ನ ತವರಿಗೆ ಹೊರಟು ಬಂದೆ. ವಿಷಯ ತಿಳಿದ ನನ್ನ ಅಮ್ಮ ಅಪ್ಪ ಈಗ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಅತ್ತೆ-ಮಾವನಲ್ಲಿ ಈ ವಿಷಯ ಫೋನಿನಲ್ಲಿ ಕೇಳಿದ್ದಕ್ಕೆ `ಅವನು ಗಂಡಸು, ಹೊರಗೆ ಹೋದವನು ಏನು ಮಾಡಿಕೊಂಡರೂ ನಿನಗೇನು?, ಮನೆಯಲ್ಲಿ ಎಲ್ಲ ಅನುಕೂಲವಾಗಿದೆಯಲ್ಲ, ಸುಮ್ಮನೆ ಮನೆಯಲ್ಲಿ ಬಂದಿರು’ ಅಂತ ಉಡಾಫೆಯಿಂದ ಮಾತಾಡುತ್ತಾರೆ. ಅವರಿಗೆ ಮಗ ಹೀಗೆ ಬೇರೆಯವಳ ಜೊತೆ ಕೂಡಿಕೆ ಮಾಡಿಕೊಂಡಿದ್ದು ಗೊತ್ತಿದ್ದೂ ನನ್ನನ್ನು ಅವರಿಗೆ ಕಟ್ಟಿದರು. ಅವರಿಗೆ ತಮ್ಮ ಕುಟುಂಬದ ಗೌರವ ಕಾಪಾಡಿಕೊಳ್ಳಲು ಮತ್ತು ಮನೆಕೆಲಸ ಮಾಡಿಕೊಂಡು ಮನೆ ಮೆಂಟೈನ್ ಮಾಡಲು ಒಬ್ಬಳು ಸೊಸೆ ಬೇಕಿತ್ತು. ಅವರಿಗೆ ತಾವು ಮಾಡಿದ್ದು ತಪ್ಪು ಅಂತಲೂ ಅನಿಸುತ್ತಿಲ್ಲ. ನನಗೆ ಸಹೋದರರಿಲ್ಲ. ಇರುವ ಒಂದು ತಂಗಿಗೆ ಮದುವೆಗೆ ಹುಡುಗನನ್ನು ಹುಡುಕುತ್ತಿದ್ದಾರೆ. ನಾನು ಗಂಡನ ಮನೆ ಬಿಟ್ಟು ಇಲ್ಲಿ ಬಂದು ಕೂತಿದ್ದಕ್ಕೆ ನನ್ನ ತಂಗಿಗೆ ವರ ಸಿಗದಿದ್ದರೆ ಅನ್ನುವ ಆತಂಕ ನನ್ನ ಪಾಲಕರಿಗೆ. ಗಂಡನನ್ನು ಯಾಕೆ ಹೀಗೆ ಮಾಡಿದಿರಿ ಅಂತ ಮೊನ್ನೆ ನಾನೇ ಫೋನ್ ಮಾಡಿ ಕೇಳಿದ್ದಕ್ಕೆ `ಮದುವೆಯಾಗದಿದ್ದರೆ ತಾನು ಸಾಯುತ್ತೇನೆ ಅಂತ ಅಮ್ಮ ಹೆದರಿಸಿದ್ದಕ್ಕೆ ಮನೆಯಲ್ಲಿ ಒಬ್ಬಳು ಇರಲಿ ಅಂತ ಮದುವೆಯಾದೆ’ ಅಂತ ಸ್ವಲ್ಪವೂ ಪಶ್ಚಾತ್ತಾಪ ಇಲ್ಲದೇ ಹೇಳಿದರು. ನನಗೆ ಏನು ಮಾಡಬೇಕೆಂದೇ ದಾರಿ ತೋಚುತ್ತಿಲ್ಲ. ಸಲಹೆ ಕೊಡಿ ಪ್ಲೀಸ್.

: ನಿಮ್ಮ ಗಂಡ ಮತ್ತು ಅವನ ಕುಟುಂಬ ಯಾವ ರೀತಿಯಲ್ಲಿ ನಿಮ್ಮ ಮೇಲೆ ಸವಾರಿ ಮಾಡಿದ್ದೆಂದರೆ ನಿಮ್ಮ ಜೀವನವನ್ನೇ ನಡು ನೀರಿನಲ್ಲಿ ಮುಳುಗುವಂತೆ ಮಾಡಿದರು. ಅವರು ನಿಮ್ಮನ್ನು ಸತ್ಯ ಸಂಗತಿ ಮರೆಮಾಚಿ ಮೋಸದಿಂದ ಮದುವೆಯಾಗಿದ್ದು. ಯಾವ ಹುಡುಗಿಯ ಹೆತ್ತವರೂ ಹುಡುಗ ಈ ರೀತಿ ಬೇರೆ ಹೆಂಗಸಿನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ ಅಂತ ಗೊತ್ತ್ತಾದರೆ ಖಂಡಿತಾ ಹೆಣ್ಣು ಕೊಡುವುದಿಲ್ಲ. ಅದಕ್ಕಾಗಿಯೇ ನಿಮ್ಮ ಗಂಡನ ಮನೆಯವರು ತಮಗೆ ವಿಷಯ ಗೊತ್ತಿದ್ದರೂ ನಿಮ್ಮಿಂದ ಆ ಸಂಗತಿ ಮರೆಮಾಚಿದ್ದರು. ನಿಮ್ಮ ಹೆತ್ತವರೂ ಆ ಹುಡುಗನ ಪೂರ್ವಾಪರ ಸರಿಯಾಗಿ ವಿಚಾರಿಸದೇ ಮದುವೆ ಮಾಡಿ ನಿಮಗೆ ಅನ್ಯಾಯ ಮಾಡಿದರು. ಆದರೂ ಈಗ ಹಿಂದಿನದ್ದು ಯೋಚಿಸುತ್ತಾ ಕೂರದೇ ಮುಂದಿನ ನಿಮ್ಮ ಜೀವನದ ಬಗ್ಗೆ ಚಿಂತಿಸಬೇಕಿದೆ. ನಿಮ್ಮ ಪಾಲಕರು ನಿಮ್ಮ ತಂಗಿಗೆ ಮದುವೆ ಮಾಡುವುದು ಕಷ್ಟವಾಗುತ್ತದೆ ಅನ್ನುವ ಒಂದೇ ಕಾರಣಕ್ಕೆ ನೀವು ನಿಮ್ಮ ಗಂಡನ ಮನೆಗೆ ಮರಳಬೇಕು ಅನ್ನುವುದು ನ್ಯಾಯವಲ್ಲ. ನಿಮಗೆ ಈ ರೀತಿ ಅನ್ಯಾಯವಾಗಿದ್ದಕ್ಕೆ ಅವರೂ ಜವಾಬ್ದಾರರು. ಈಗ ನಿಮ್ಮ ಜೀವನ ಸರಿಪಡಿಸಲೂ ಅವರು ಬದ್ಧರೇ. ಮೊದಲು ಯಾವುದಾದರೂ ಒಳ್ಳೆಯ ವಕೀಲರನ್ನು ಹಿಡಿದು ಡೈವೋರ್ಸಿಗೆ ನೋಟಿಸ್ ಕಳಿಸಿ. ಅವರು ಮಾಡಿದ ಮೋಸಕ್ಕೆ ಪರಿಹಾರವನ್ನೂ ಕೇಳಿ. ಅವರು ನಿಮಗೆ ಮಾಡಿದ ದ್ರೋಹಕ್ಕೆ ಯಾವ ಶಿಕ್ಷೆ ಕೊಟ್ಟರೂ ಕಡಿಮೆಯೇ. ಮದುವೆಯಾಗಿದ್ದಕ್ಕೆ ಕನಿಷ್ಠ ಇನ್ನು ಮುಂದೆಯಾದರೂ ಆ ಹೆಂಗಸಿನ ಸಂಪರ್ಕವೆಲ್ಲ ಕಡಿದುಕೊಂಡು ನಿಮ್ಮ ಜೊತೆ ಪ್ರಾಮಾಣಿಕವಾಗಿ ಇರುತ್ತೇನೆ ಅನ್ನುವ ಇರಾದೆಯೂ ಇಲ್ಲದ ಅಂತಹ ಮೋಸಗಾರನ ಜೊತೆ ಬಾಳುವ ದರ್ದು ನಿಮಗೇನೂ ಇಲ್ಲ. ಪ್ರಪಂಚ ವಿಶಾಲವಾಗಿದೆ. ಇಲ್ಲಿ ಎಲ್ಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕು ಇದೆ. ಸಮಾಜ ಏನು ಹೇಳುತ್ತದೆ ಅಂತ ಹೆಚ್ಚು ತಲೆಕೆಡಿಸಿಕೊಳ್ಳದೇ ಧೈರ್ಯದಿಂದ ಮತ್ತು ಆತ್ಮಾಭಿಮಾನದಿಂದ ಬಾಳಿ.

LEAVE A REPLY