ಗಂಡ ನನ್ನ ಜೊತೆ ಸೆಕ್ಸ್ ನಡೆಸಿಯೇ ಇಲ್ಲ

ಅವರು ನೋಡಲು ಎಲ್ಲ ರೀತಿಯಲ್ಲೂ ಸರಿಯಾಗಿದ್ದರೂ ಲೈಂಗಿಕವಾಗಿ ಅವರು ತುಂಬಾ ದುರ್ಬಲರಿರಬಹುದು ಅಥವಾ ಮಾನಸಿಕವಾಗಿ ಅವರು ಯಾವುದೋ ಸಮಸ್ಯೆಯಿಂದ ನರಳುತ್ತಿರಬಹುದು.

ಪ್ರ : ನಾನೊಂದು ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಯಾರ ಹತ್ತಿರವೂ ಈ ವಿಷಯ ಹೇಳಲೇ ಕಷ್ಟವಾಗುತ್ತಿದೆ. ನಮ್ಮದು ಎರೇಂಜ್ಡ್ ಮ್ಯಾರೇಜ್ ಆದರೂ ಕೂಡಾ ಮದುವೆ ನಿಶ್ಚಯವಾದಂದಿನಿಂದ ನಾವಿಬ್ಬರೂ ಫೋನಿನಲ್ಲಿ ಮಾತಾಡಿಕೊಳ್ಳುತ್ತಿದ್ದರಿಂದ ಮದುವೆಯ ಹೊತ್ತಿಗೆ ಒಳ್ಳೆಯ ಫ್ರೆಂಡ್ಸ್ ಆಗಿದ್ದೆವು.  ನಮ್ಮ ಮದುವೆಯಾಗಿ ಈಗ ಒಂದು ವರ್ಷವಾದರೂ ಕೂಡಾ ಇನ್ನುವರೆಗೂ ನಾವು ಒಂದಾಗಿಲ್ಲ. ಅವರು ಎಲ್ಲರೆದುರು ನನ್ನ ಜೊತೆ ಸರಿಯಾಗಿ ಮಾತಾಡುತ್ತಿದ್ದರೂ ಬೆಡ್‍ರೂಮಿನಲ್ಲಿ ಅವರ ನಡೆಯೇ ಬೇರೆ ತೆರನಾಗಿರುತ್ತದೆ. ಅವರು ಮುಖ ತಿರುಗಿಸಿಕೊಂಡು ಮಲಗಿ ಬಿಡುತ್ತಾರೆ. ಸೆಕ್ಸ್ ಬಗ್ಗೆ ಮಾತಾಡಲು ಪ್ರಯತ್ನಿಸಿದರೂ ಅದಕ್ಕೆ ರೆಸ್ಪಾಂಡ್ ಮಾಡುವುದೇ ಇಲ್ಲ.  ನಾನು ಅವರನ್ನು ಮುಟ್ಟುವುದೂ ಅವರಿಗಿಷ್ಟವಿಲ್ಲ. ಬೈಕಿನಲ್ಲಿ ಹೋಗುವಾಗ ಅವರನ್ನು ಹಿಡಿದುಕೊಂಡು ಕುಳಿತರೆ `ಬ್ಯಾಲೆನ್ಸ್ ತಪ್ಪುತ್ತೆ, ಹಿಡಿಕೆ ಹಿಡಿದು ಕುಳಿತುಕೋ’ ಅನ್ನುತ್ತಾರೆ. ಉಳಿದಂತೆ ಅವರು ಮೃದುಸ್ವಭಾವದ ಜೆಂಟ್ಲ್‍ಮ್ಯಾನ್. ಒಳ್ಳೆಯ ಕುಟುಂಬಹಿನ್ನೆಲೆಯಿರುವ ಕೈತುಂಬಾ ಸಂಬಳ ತರುವ ಸ್ಪುರದ್ರೂಪಿ ಪತಿ ಅವರಾದ್ದರಿಂದ ನನ್ನೆಲ್ಲ ಸ್ನೇಹಿತೆಯರಿಗೆ ನಾನು ಲಕ್ಕಿ ಅನ್ನುವ ಭಾವನೆ ಇದೆ. ಅವರನ್ನು ಕಳೆದುಕೊಳ್ಳಲೂ ನನಗೆ ಇಷ್ಟವಿಲ್ಲ. ಅದೂ ಅಲ್ಲದೇ ನನ್ನ ತವರಿನವರಿಗೆ ಸಮಾಜದಲ್ಲಿ ಗೌರವ ಸ್ಥಾನ ಇರುವುದರಿಂದ ನಾನು ಮದುವೆಯಿಂದ ಹೊರಬಂದರೆ ಅವರಿಗೆ ಬೇಸರವಾಗಬಹುದು. ಆದರೆ ದಾಂಪತ್ಯಜೀವನದ ಬಗ್ಗೆ ಕನಸು ಕಂಡಿದ್ದ ನನಗೆ ಮದುವೆಯಾದರೂ ಈ ರೀತಿ ಸನ್ಯಾಸಿನಿಯಂತೆ ಬದುಕುವುದೂ ಕಷ್ಟವಾಗುತ್ತಿದೆ. ನಾನೇನು ಮಾಡಲಿ?

: ಮದುವೆಯಾದ ಹೊಸತರಲ್ಲಿಯೇ ಅವರು ಈ ರೀತಿ ಹೆಂಡತಿಯಿಂದ ದೂರ ಇರುತ್ತಿದ್ದಾರೆ ಎಂದರೆ ನಿಮ್ಮ ಗಂಡ ಯಾವುದೋ ಗುರುತರವಾದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅನ್ನುವುದರಲ್ಲಿ ಸಂಶಯವೇ ಇಲ್ಲ. ಒಂದೇ ಅವರು ನೋಡಲು ಎಲ್ಲ ರೀತಿಯಲ್ಲೂ ಸರಿಯಾಗಿದ್ದರೂ ಲೈಂಗಿಕವಾಗಿ ಅವರು ತುಂಬಾ ದುರ್ಬಲರಿರಬಹುದು ಅಥವಾ ಮಾನಸಿಕವಾಗಿ ಅವರು ಯಾವುದೋ ಸಮಸ್ಯೆಯಿಂದ ನರಳುತ್ತಿರಬಹುದು. ಚಿಕ್ಕ ವಯಸ್ಸಿನಲ್ಲಿ ನಡೆದ ಯಾವುದೋ ದುರ್ಘಟನೆಯಿಂದಾಗಿ ಅವರು ಸೆಕ್ಸ್ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡಿರುವ ಪ್ರಮೇಯವೂ ಇರಬಹುದು. ಇಲ್ಲಾ ನಿಮ್ಮೆದುರಿಗೆ ಅವರು ಕೀಳರಿಮೆಯಿಂದ ಆ ರೀತಿ ವರ್ತಿಸುತ್ತಿರಬಹುದು. ಅಥವಾ ಮೊದಲು ಬೇರೆ ಹುಡುಗಿಯ ಜೊತೆ ಪ್ರೇಮಸಂಬಂಧ ಹೊಂದಿದ್ದು ಮದುವೆಯಾಗಲು ಸಾಧ್ಯವಾಗದೇ ಈಗ ಅವಳಿಗೆ ಮೋಸ ಮಾಡುತ್ತಿದ್ದೇನೆ ಅನ್ನುವ ಗಿಲ್ಟ್ ಅವರನ್ನು ನಿಮ್ಮಿಂದ ದೂರ ಇರುವಂತೆ ಮಾಡಿರಲಿಕ್ಕೂ ಸಾಕು. ಯಾವುದೂ ಅವರ ಬಾಯನ್ನು ಮೊದಲು ಬಿಡಿಸದೇ ಅವರ ಈ ರೀತಿಯ ವರ್ತನೆಗೆ ಕಾರಣ ಹೇಳುವುದು ಕಷ್ಟ. ನೀವು ಹೇಗಾದರೂ ಮುಕ್ತವಾಗಿ ಅವರ ಜೊತೆ ಈ ವಿಷಯ ಚರ್ಚಿಸಿ. ಅವರು ನಿಮ್ಮ ಜೊತೆ ಮಾತಾಡಲು ಇಷ್ಟಪಡದಿದ್ದರೂ `ಇದು ನನ್ನ ಜೀವನದ ಪ್ರಶ್ನೆಯಾದ್ದರಿಂದ ನೀವು ಈ ವಿಷಯದ ಬಗ್ಗೆ ಮುಕ್ತವಾಗಿ ಮಾತಾಡಲೇಬೇಕು’ ಅಂತ ಒತ್ತಾಯಿಸಿ ಅವರ ಸಮಸ್ಯೆ ಮೊದಲು ತಿಳಿದುಕೊಳ್ಳಿ. ಮಾನಸಿಕ ಇಲ್ಲಾ ಲೈಂಗಿಕ ತಜ್ಞರ ಸಹಾಯ ಪಡೆದು ಅವರ ಕಾಯಿಲೆ ಗುಣವಾಗುವಂತೆ ಮೊದಲು ಪ್ರಯತ್ನಿಸಿ. ಅವರು ಒಂದು ವೇಳೆ ಸರಿಯೇ ಆಗುವುದಿಲ್ಲ ಅಂತಾದರೆ ನೀವು ಬೇರೆ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಯೋಚಿಸಬಹುದು. ಬರೀ ಮರ್ಯಾದೆಗೆ ಅಂಜಿ ಜೀವನಪೂರ್ತಿ ಮದುವೆಯಾದರೂ ಸನ್ಯಾಸಿನಿಯಂತೆ ಬಾಳುವ ಅಗತ್ಯವೇನೂ ಇಲ್ಲ.