ಗಂಡನಿಗೆ ನನ್ನ ಮೇಲೆ ಸಂಶಯ

ಪ್ರ : ನಾನೊಂದು ಪ್ರೈಮರಿ ಸ್ಕೂಲಿನ ಟೀಚರ್. ನನ್ನ ಗಂಡ ನಮ್ಮದೇ ಶಾಲೆಯ ಹೈಸ್ಕೂಲ್ ವಿಭಾಗಕ್ಕೆ ಕಲಿಸುತ್ತಾರೆ. ನಮಗೆ ಇಬ್ಬರು ಮಕ್ಕಳು. ನನಗೆ ಮಕ್ಕಳಿಗೆ ಕಲಿಸುವುದರ ಜೊತೆಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಿರ್ವಹಿಸುವ ಜವಾಬ್ದಾರಿಯೂ ಇದೆ. ನನ್ನ ಕಲೀಗ್ ಒಬ್ಬರಿಗೆ ಸಹ ಇಂತಹ ಕಾರ್ಯಕ್ರಮಗಳ ಬಗ್ಗೆ ಇಂಟರೆಸ್ಟ್ ಇದೆ. ಅದರಿಂದ ನಾವಿಬ್ಬರೂ ಜೊತೆಗೇ ಹೆಚ್ಚು ಇರುತ್ತೇವೆ. ನನ್ನ ಗಂಡನಿಗೆ ಅವರನ್ನು ನೋಡಿದರೆ ಅಷ್ಟಕ್ಕಷ್ಟೇ. ನಾನು ಅವರ ಜೊತೆ ಹೆಚ್ಚು ಬೆರೆಯುವುದು ಗಂಡನಿಗೆ ಇಷ್ಟವಿಲ್ಲ. ಈ ನಡುವೆ ಅವರ ಜೊತೆ ನನಗೆ ಸಂಬಂಧವಿದೆಯೆಂದೂ ಆರೋಪಿಸುತ್ತಿದ್ದಾರೆ. ಮನೆಯಲ್ಲಿ ಇಡೀ ಹೊತ್ತೂ ಈ ವಿಷಯದ ಬಗ್ಗೆಯೇ ತಗಾದೆ ಎಬ್ಬಿಸುತ್ತಾರೆ. ಅಂಥದ್ದೇನಿಲ್ಲ ಅಂತ ನಾನು ಎಷ್ಟೇ ಹೇಳಿದರೂ ಕೇಳುತ್ತಿಲ್ಲ . ಆದರೆ ನನ್ನ ಆ ಕಲೀಗ್ ತುಂಬಾ ಒಳ್ಳೆಯವರು. ಮಕ್ಕಳಿಗೆ ಡ್ರಾಮಾ ಹೇಳಿಕೊಡಲು, ಡ್ಯಾನ್ಸ್ ಮಾಡಿಸಲು ಎಲ್ಲದರಲ್ಲೂ ತುಂಬಾ ಸಹಾಯ ಮಾಡುತ್ತಾರೆ. ಅವರಿಗೂ ಮದುವೆಯಾಗಿ ಒಂದು ಮಗುವಿದೆ. ನಾನು ಆ ಕಲೀಗ್ ಜೊತೆ ಮಾತಾಡುವುದನ್ನು ಬಿಡದಿದ್ದರೆ ನಮ್ಮವರು ನನ್ನ ಜೊತೆ ಮಾತಾಡುವುದನ್ನೇ ನಿಲ್ಲಿಸುತ್ತಾರಂತೆ. ನನಗೆ ಉಭಯ ಸಂಕಟ. ಗಂಡನ ವಿರುದ್ಧವಾಗಿ ಹೋಗಲೂ ಆಗುತ್ತಿಲ್ಲ. ಅದೇ ಸಮಯದಲ್ಲಿ ಈ ರೀತಿ ಕಟ್ಟುಪಾಡುಗಳನ್ನು ಸಹಿಸಲೂ ಕಷ್ಟವಾಗುತ್ತಿದೆ. ನಾನೀಗ ಏನು ಮಾಡಲಿ?

: ನೀವು ಯಾವ ಪುರುಷ ಅಧ್ಯಾಪಕರ ಹತ್ತಿರ ಮಾತಾಡಿದರೂ ಗಂಡನಿಗೆ ಇಷ್ಟವಾಗುವುದಿಲ್ಲವೋ ಅಥವಾ ಇವರೊಬ್ಬರ ಹತ್ತಿರ ಮಾತ್ರ ಅವರಿಗೆ ಪ್ರಾಬ್ಲೆಂ ಇದೆಯಾ ಅಂತ ಮೊದಲು ಅರಿಯಿರಿ. ಅವರೊಬ್ಬರ ಹತ್ತಿರ ನೀವು ಸಂಪರ್ಕದಲ್ಲಿರುವುದು ಅವರಿಗಿಷ್ಟವಿಲ್ಲವಾದರೆ ಆ ನಿಮ್ಮ ಕಲೀಗ್ ಜೊತೆ ಗಂಡನಿಗೆ ಇರುವ ಪ್ರಾಬ್ಲೆಂ ಬಗ್ಗೆ ಮೊದಲು ತಿಳಿಯಲು ಪ್ರಯತ್ನಿಸಿ. ಒಂದು ವೇಳೆ ಆ ನಿಮ್ಮ ಕಲೀಗ್ ನಡತೆ ಸರಿ ಇಲ್ಲದೇ ನಿಮ್ಮ ಜೊತೆ ಅವರು ನಾಟಕವಾಡುತ್ತಿದ್ದಾರೆ ಅಂತ ನಿಮ್ಮ ಗಂಡನಿಗೆ ಅನಿಸಿ ನೀವು ಅವರಿಂದ ದೂರ ಇರಲು ವಾರ್ನ್ ಮಾಡುತ್ತಿದ್ದರೆ ಅಥವಾ ನಿಮ್ಮ ಗಂಡನ ವಿರುದ್ಧ ಅವರೇನಾದರೂ ಪಿತೂರಿ ನಡೆಸುತ್ತಿದ್ದರೆ ಗಂಡನ ಮಾತಿಗೂ ಸ್ವಲ್ಪ ಬೆಲೆ ಕೊಟ್ಟು ಅವರ ಜೊತೆ ಹೆಚ್ಚು ಬೆರೆಯದಿರುವುದೇ ಒಳ್ಳೆಯದು. ನಿಮ್ಮ ಕೆಲಸಕ್ಕೆ ಬೇಕಷ್ಟೇ ಅವರ ಜೊತೆ ಸಂಪರ್ಕ ಇರಿಸಿಕೊಳ್ಳಿ. ಅದೊಂದೇ ಕಾರಣಕ್ಕೆ ಎರಡು ಮಕ್ಕಳಿರುವ ನಿಮ್ಮ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆಯಾದರೆ ಇಂತಹ ಸಣ್ಣಪುಟ್ಟ ತ್ಯಾಗ ಅನಿವಾರ್ಯ. ಯಾಕೆಂದರೆ ಸಂಶಯವೆನ್ನುವುದು ಒಮ್ಮೆ ತಲೆಗೆ ಹೊಕ್ಕಿತೆಂದರೆ ಅದನ್ನು ತಲೆಯಿಂದ ಹೊರಹಾಕುವುದು ಬಹಳ ಕಷ್ಟವೇ.
ಇನ್ನು ನಿಮ್ಮ ಗಂಡನಿಗೆ ನೀವು ಪುರುಷ ಕಲೀಗ್ಸ್ ಜೊತೆ ಮಾತಾಡುವುದೇ ಇಷ್ಟವಾಗುವುದಿಲ್ಲ ಅಂದರೆ ಅವರು ತುಂಬಾ ಸಂಕುಚಿತ ಮನೋಭಾವದವರು ಅಂತಲೇ ಹೇಳಬೇಕಾಗುತ್ತದೆ. ಹಾಗಿದ್ದರೆ ಅವರು ಮಹಿಳೆಯರ ಹತ್ತಿರ ಮಾತಾಡುವುದೇ ಇಲ್ಲವೇ? ನಿಮ್ಮ ಗಂಡನ ಈ ರೀತಿ ಮನೋಭಾವಕ್ಕೆ ಮತ್ತೂ ಒಂದು ಕಾರಣವಿರಬಹುದು. ನೀವು ಅವರಿಗಿಂತ ಎಲ್ಲ ರಂಗದಲ್ಲೂ ಮುಂದೆ ಇದ್ದು ಅವರನ್ನು ಯಾರೂ ಕೇರ್ ಮಾಡುವವರಿಲ್ಲದಿದ್ದರೆ ಅವರು ಕೀಳರಿಮೆಯಿಂದಾಗಿ ಆ ರೀತಿ ವರ್ತಿಸುತ್ತಿರಲೂ ಸಾಕು. ಯಾವುದಕ್ಕೂ ಅವರ ಆ ಸ್ವಭಾವದ ಮೂಲ ಹುಡುಕಿ ಅವರ ಹತ್ತಿರ ಮುಕ್ತವಾಗಿ ಮಾತಾಡಿ ನಿಮ್ಮ ಮಧ್ಯೆ ಇರುವ ಅಪಾರ್ಥವನ್ನು ಹೋಗಲಾಡಿಸಿಕೊಳ್ಳಿ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಜೀವನದಲ್ಲಿ ಎಲ್ಲರಿಗಿಂತ ನಿಮ್ಮ ಗಂಡನೇ ಪ್ರಮುಖರು ಎನ್ನುವ ಭಾವನೆ ಅವರಿಗೆ ಕೊಡಿ. ಅಸುರಕ್ಷತೆ ಎನ್ನುವುದು ಕಾಡಿದರೆ ಗಂಡಸರೇ ಆಗಲಿ, ಹೆಂಗಸರೇ ಆಗಲಿ ಈ ರಿತಿ ವರ್ತಿಸುವಂತೆ ಮಾಡುತ್ತದೆ.