ಗರ್ಲ್ಫ್ರೆಂಡ್ ಮೋಸ ಮಾಡುತ್ತಿದ್ದಾಳೆ

ಪ್ರ : ಅವಳ ಜೊತೆ ನಾನು ಎರಡು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದೇನೆ. ಕೆಲವು ದಿನಗಳ ಹಿಂದೆ ಅವಳು ನನಗೊಂದು ಶಾಕಿಂಗ್ ನ್ಯೂಸ್ ಹೇಳಿದಳು — ಅವಳು ಬೇರೊಬ್ಬ ಹುಡುಗನ ಜೊತೆ ಫ್ರೆಂಡ್ಲಿಯಾಗಿರುವುದಾಗಿಯೂ ಮತ್ತು ಅವನ ಜೊತೆ ಸೆಕ್ಸ್ ಸಂಬಂಧ ಸಹ ಮಾಡಿರುವುದಾಗಿಯೂ ಹೇಳಿದಳು. ಅದೂ ಅಲ್ಲದೇ ನನಗೆ ಅವಳಿಗಿಂತ ಒಳ್ಳೆಯ ಹುಡುಗಿಯನ್ನು ಪಡೆಯಲು ಯೋಗ್ಯತೆಯಿರುವುದಾಗಿಯೂ ಮತ್ತು ಅವಳನ್ನು ಮರೆತು ಬಿಡುವಂತೆಯೂ ಕಿರು ಭಾಷಣವನ್ನೇ ಮಾಡಿದಳು. ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಅವಳು ಮಾಡಿದ ತಪ್ಪನ್ನು ಮನ್ನಿಸಲೂ ತಯಾರಿದ್ದೇನೆ. ಅವಳು ಇನ್ನೊಬ್ಬನ ಜೊತೆ ಸೆಕ್ಸ್ ಮಾಡಿರುವ ಬಗ್ಗೆ ಅವಳು ಹೇಳಿದ ಪ್ರಾಮಾಣಿಕ ನುಡಿಯಿಂದ ಅವಳ ಮೇಲೆ ಕೋಪ ಬರುವುದಕ್ಕೆ ಬದಲಾಗಿ ಇನ್ನಷ್ಟು ಪ್ರೀತಿ ಮೂಡಿದೆ. ಅಂತೂ ನನಗೆ ಅವಳ ಜೊತೆ ಬೇಕು. ಆದರೆ ಅವಳು ಈಗೀಗ ನನ್ನ ಜೊತೆ ಹೆಚ್ಚು ಸಮಯವನ್ನೂ ಕಳೆಯುತ್ತಿಲ್ಲ. ಯಾವಾಗಲೂ ಆ ಹುಡುಗನ ಜೊತೆಯೇ ಇರುತ್ತಾಳೆ. ಕೇಳಿದರೆ ಬೇರೆ ಹುಡುಗಿಯನ್ನು ನೋಡಿಕೋ ಅನ್ನುತ್ತಿದ್ದಾಳೆ. ಅವಳನ್ನು ಕ್ಷಮಿಸಲೂ ತಯಾರಿರುವ ನನ್ನನ್ನು ಬಿಟ್ಟು ಬೇರೆಯವರ ಸಂಗ ಮಾಡುತ್ತಿದ್ದಾಳಲ್ಲಾ, ನನ್ನ ಒಳ್ಳೆಯತನಕ್ಕೆ ಬೆಲೆಯೇ ಇಲ್ಲವೇ? ಅವಳು ನನ್ನನ್ನು ಫೂಲ್ ಅಂದುಕೊಂಡಿರಬಹುದೇ?

: ಅಲ್ಲಾ ಮಾರಾಯಾ ಅವಳೊಬ್ಬಳೇ ಹುಡುಗಿಯಾ ಈ ಪ್ರಪಂಚದಲ್ಲಿ ಇರುವುದು ? ನೀನೊಬ್ಬ ಸಾಮಾನ್ಯ ಮನುಷ್ಯನಾ ಅಥವಾ ಗೌತಮ ಬುದ್ಧನಾ? ನಿನಗೆ ಕೋಪವೇ ಬರುವುದಿಲ್ಲವೇ? ನೀನು ಅಷ್ಟೊಂದು ಪ್ರೀತಿಸುತ್ತಿರುವ ಹುಡುಗಿ ಬೇರೆಯವನ ಜೊತೆ ಮಲಗಿದ್ದೇನೆ ಅಂತ ಅವಳೇ ಅಷ್ಟೊಂದು ರಾಜಾರೋಷವಾಗಿ ಹೇಳಿಕೊಳ್ಳುತ್ತಿದ್ದರೂ ನಿನಗೇನೂ ಅನಿಸಲಿಲ್ಲವೇ? ಅಥವಾ ನೀನೊಬ್ಬ ಗಂಡಸು ಅಂತ ಅವಳು ಬಾವಿಸಿಯೇ ಇಲ್ಲವೇನೋ. ಯಾಕೆಂದರೆ ಅವಳು ತನ್ನ ಬಾಯ್‍ಫ್ರೆಂಡಿನಿಂದ ಮತ್ತೇನೋ ನಿರೀಕ್ಷಿಸಿರಬಹುದು. ನೀನು ಬಹುಶಃ ತುಂಬಾ ಸಭ್ಯ ಹುಡುಗ. ಅವಳಿಗೆ ನಿಷ್ಕಲ್ಮಷ ಪ್ರೀತಿಗಿಂತ ಸೆಕ್ಸ್ ಬೇಕಾಗಿದ್ದಿರಬಹುದು. ಅದನ್ನೇ ಬಯಸುವ ಬೇರೆ ಹುಡುಗನನ್ನು ಅವಳೀಗ ಜೊತೆ ಮಾಡಿಕೊಂಡಿರಬಹುದು. ಅಂತಹ ಹುಡುಗಿ ನಿನಗೆ ಸರಿಯಾದವಳೇ ಅಲ್ಲ. ಅವಳು ನಿನಗೆ ಮೋಸ ಮಾಡಿದಳು ಅಂತ ಗೊತ್ತಾದ ತಕ್ಷಣ ಅವಳ ಜೊತೆಗಿನ ಎಲ್ಲ ಸಂಪರ್ಕ ಕಡಿದುಕೊಳ್ಳಬೇಕಿತ್ತು. ಅಂತಹ ವಿಷಯದಲ್ಲೂ ನಿನಗೆ ಕೋಪ ಬಂದಿಲ್ಲವೆಂದರೆ ನೀನು ದೇವರೇ ಇರಬೇಕು. ಇನ್ನಾದರೂ ಸ್ವಲ್ಪ ಪ್ರಾಕ್ಟಿಕಲ್ಲಾಗಿ ಆಲೋಚಿಸು. ಒಂದು ವೇಳೆ ಅವಳನ್ನು ನೀನು ಕ್ಷಮಿಸಿ ನಿನ್ನವಳನ್ನಾಗಿ ಮಾಡಿಕೊಂಡರೂ ಅವಳು ಪುನಃ ನಿನಗೆ ಮೋಸ ಮಾಡುವುದಿಲ್ಲ ಅಂತ ಗ್ಯಾರಂಟಿಯೇನು? ಅಳುಮುಂಜಿ ಹುಡುಗಿಯಂತೆ ಇನ್ನೂ ಅವಳ ಸುತ್ತ ಗಿರಕಿ ಹೊಡೆಯದೇ ಸ್ವಾಭಿಮಾನದಿಂದ ಅವಳಿಂದ ಮೊದಲು ದೂರ ಹೋಗು.

LEAVE A REPLY