ಗೆಳತಿಯ ಗಂಡ ಹತ್ತಿರವಾಗುತ್ತಿದ್ದಾನೆ

ಪ್ರ : ನನ್ನ ಮದುವೆಯಾಗಿ ಎರಡು ವರ್ಷವಾಯಿತು. ನನ್ನ ಬಾಲ್ಯಗೆಳತಿಗೆ ಕಳೆದ ವರ್ಷ ಮದುವೆಯಾಗಿದ್ದು ಈಗ ಕೆಲವು ತಿಂಗಳಿಂದ ಆಕೆ ಗಂಡನಿಗೆ ಈ ಊರಿಗೆ ಟ್ರಾನ್ಸ್‍ಫರ್ ಆಗಿರುವುದರಿಂದ ಇದೇ ಊರಿಗೆ ಅವರು ಬಂದಿದ್ದಾರೆ. ಈಗ ನಮ್ಮ ಎರಡೂ ಕುಟುಂಬ ಎಲ್ಲೇ ಹೋಗುವುದಿದ್ದರೂ ಜೊತೆಯಲ್ಲೇ. ಅದ್ಯಾಕೋ ಗೊತ್ತಿಲ್ಲ, ನನಗೆ ನನ್ನ ಗೆಳತಿಯ ಗಂಡನ ಗುಣ ತುಂಬಾ ಇಷ್ಟವಾಗುತ್ತದೆ. ನಮ್ಮ ನಡುವಿನ ಗೆಳೆತನ ಮತ್ತಷ್ಟು ಜಾಸ್ತಿಯಾಗಿದ್ದು ಕಳೆದ ತಿಂಗಳು. ನಾವೆಲ್ಲ ಸೇರಿ ಕಳೆದ ತಿಂಗಳು ಮುನಾರ್ ಮತ್ತಿತರ ಕೇರಳ ಪ್ರವಾಸಕ್ಕೆ ಹೋಗಿದ್ದೆವು. ಎಲ್ಲಾ ಕಡೆ ನನಗೆ ನನ್ನ ಗೆಳತಿಯ ಗಂಡನೇ ಹೆಚ್ಚು ಸಾಥ್ ಕೊಟ್ಟಿದ್ದು. ನನ್ನ ಗಂಡ ಗಂಭೀರ ಸ್ವಭಾವದವರು. ಅವರಿಗೆ ಮಕ್ಕಳ ರೀತಿ ಆಟವಾಡುವುದೆಲ್ಲ ಇಷ್ಟವಿಲ್ಲ. ನನ್ನ ಗೆಳತಿಯೂ ಸ್ವಲ್ಪ ದಪ್ಪ ಇರುವುದರಿಂದ ಅವಳಿಗೆ ಸುಸ್ತಾಗುವುದು ಬೇಗ. ಹೋದ ಕಡೆಯೆಲ್ಲ ಕುಳಿತುಬಿಡುತ್ತಾಳೆ. ಬೋಟಿಂಗ್, ವಾಟರ್ ಗೇಮ್ಸ್ ಎಲ್ಲವನ್ನೂ ನಾನು ಮತ್ತು ಗೆಳತಿಯ ಗಂಡ ಸಖತ್ ಎಂಜಾಯ್ ಮಾಡಿದೆವು.  ಅಲ್ಲಿಂದ ಬಂದ ನಂತರ ನಮ್ಮಿಬ್ಬರ ನಡುವೆ ಒಂದು ರೀತಿಯ ಅನುಬಂಧ ಬೆಳೆದಿದೆ. ಅವನ ಚುರುಕುತನ ನನ್ನ ಮನ ಗೆದ್ದಿದೆ. ಇಬ್ಬರ ಆಸಕ್ತಿಯೂ ಒಂದೇ ಆಗಿರುವುದರಿಂದ ನಾವಿಬ್ಬರು ಮಾತಾಡುವುದೇ ಹೆಚ್ಚು. ನಾನು ಅವನ ಪ್ರೀತಿಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದೇನೆ ಅಂತಲೂ ಅನಿಸುತ್ತಿದೆ. ದಿನದಿಂದ ದಿನಕ್ಕೆ ನನಗೆ ಆತನ ಮೇಲಿನ ಸೆಳೆತ ಹೆಚ್ಚುತ್ತಿದೆ. ಅವನಿಗೂ ನನ್ನ ಮೇಲೆ ಆಸಕ್ತಿ ಇದೆಯಾದರೂ ಬಾಯಿಬಿಟ್ಟು ಹೇಳಿಲ್ಲ. ನಾನು ಆತನ ಪ್ರೀತಿಗಾಗಿ ಹಾತೊರೆಯುತ್ತಿದ್ದೇನೆ. ಏನು ಮಾಡಲಿ ಈಗ?

: ನಮಗಿಷ್ಟವಾಗುವವರನ್ನೆಲ್ಲ ಪ್ರೀತಿಸುತ್ತಾ ಹೋದರೆ ಅದಕ್ಕೆ ಕೊನೆಮೊದಲಿಲ್ಲ . ಆಸಕ್ತಿಗಳು ಒಂದೇ ಅಂದಾಕ್ಷಣ ಅವರು ಎಲ್ಲ ವಿಷಯದಲ್ಲಿ ಪರ್ಫೆಕ್ಟ್ ಅಂತ ಹೇಳಲು ಬರುವುದಿಲ್ಲ . ಮದುವೆ ಸಕ್ಸಸ್ ಆಗಲು ಇಬ್ಬರ ಆಸಕ್ತಿಯೂ ಒಂದೇ ಆಗಿರಬೇಕೆಂದೂ ಇಲ್ಲ. ಇಬ್ಬರ ವ್ಯಕ್ತಿತ್ವ ಬೇರೆ ಬೇರೆ ಇದ್ದರೂ ಒಬ್ಬರು ಇನ್ನೊಬ್ಬರ ಆಸಕ್ತಿಯನ್ನು ಅರ್ಥಮಾಡಿಕೊಂಡು ಅದನ್ನು ಗೌರವಿಸುವ ಮನೋಭೂಮಿಕೆ ಬೇಕು ಅಷ್ಟೇ. ಕೆಲವೊಮ್ಮೆ ಸಂಗಾತಿಗಳಲ್ಲಿ ಇಬ್ಬರೂ ಅತೀ ಆಕ್ಟಿವ್ ಇದ್ದರೆ ಎಲ್ಲೋ ಒಂದು ಕಡೆ ಕ್ಲಾಶಸ್ ಆಗುವುದೂ ಇರುತ್ತದೆ. ನಿಮ್ಮ ಗಂಡ ಸ್ವಲ್ಪ ಗಂಭೀರ ಸ್ವಭಾವದವರಾದರೂ ಅವರು ನಿಮಗೆ ಉಳಿದೆಲ್ಲ ವಿಚಾರದಲ್ಲಿ ಸಹಕಾರ ಕೊಡುತ್ತಿರಬಹುದು. ಕೆಲವರು ಸ್ವಲ್ಪ ಬೋರ್ ಎನಿಸಿದರೂ ಅವರು ವಿಶ್ವಾಸಕ್ಕೆ ಅರ್ಹರಾಗಿರುತ್ತಾರೆ. ಅವರ ಒಳ್ಳೆತನದ ಬಗ್ಗೆ ಮತ್ತು ಅವರಲ್ಲಿರುವ ಪ್ಲಸ್ ಪಾಯಿಂಟ್‍ಗಳ ಬಗ್ಗೆ ಯೋಚಿಸಿ ಅವರ ಜೊತೆಯೇ ನಿಮ್ಮ ಸುಖಸಂತೋಷವನ್ನು ಹಂಚಿಕೊಳ್ಳಲು ಪ್ರಯತ್ನಿಸಿ. ಅವರಿಗಿಷ್ಟವಾದ ವಿಷಯಗಳಲ್ಲಿ ನೀವೂ ಸಾಥ್ ಕೊಡಿ. ಹಾಗೆಯೇ ಅವರನ್ನೂ ನಿಮ್ಮ ಹವ್ಯಾಸಕ್ಕೆ ಜೊತೆಗೂಡುವಂತೆ ಆದಷ್ಟು ಹುರಿದುಂಬಿಸಿ. ಅದು ಬಿಟ್ಟು ಹೀಗೆ ಗೆಳತಿಯ ಗಂಡನನ್ನು ಆಶಿಸಿದರೆ ನಿಮ್ಮ ಸಂಸಾರ ಮತ್ತು ಆಕೆ ಸಂಸಾರ ಎರಡೂ ಕೆಡುತ್ತದೆ. ನಿಮಗೆ ಕ್ಷಣಿಕವಾಗಿ ಥ್ರಿಲ್ ಸಿಗಬಹುದು. ಅದರಿಂದ ನಿಮಗೆ ಟೆನ್ಷನ್ನೇ ಜಾಸ್ತಿ . ನಿಮ್ಮ ಮತ್ತು ಗೆಳತಿಯ ಗಂಡನ ನಡುವಿನ ಸ್ನೇಹಕ್ಕೆ ಒಂದು ಲಕ್ಷ್ಮಣ ರೇಖೆ ನೀವು ಎಳೆದುಕೊಳ್ಳಲೇಬೇಕು. ನಿಮ್ಮ ಮೇಲೆ ಭರವಸೆ ಇಟ್ಟಿರುವ ನಿಮ್ಮ ಗಂಡ ಮತ್ತು ನಿಮ್ಮ ಗೆಳತಿಗೆ ಮೋಸ ಮಾಡಬೇಡಿ.