ನನ್ನವಳಿಗೆ ಫ್ಯಾಷನ್ ಬಿಟ್ಟರೆ ಬೇರೆ ಗೊತ್ತಿಲ

Couple fighting

ಪ್ರ : ನನಗೀಗ ನಲವತ್ತು ವರ್ಷ. ಹೆಂಡತಿ ನನಗಿಂತ ಎಂಟು ವರ್ಷ ಚಿಕ್ಕವಳು. ಅವಳನ್ನು ನಾನು ಮೊದಲು ನೋಡಿದ್ದು ಒಂದು ಫ್ಯಾಮಿಲಿ ಫಂಕ್ಷನ್ನಿನಲ್ಲಿ. ಅವಳ ರೂಪ, ಲಾವಣ್ಯಕ್ಕೆ ಮನಸೋತು ಅವಳೇ ಬೇಕೆಂದು ಹಠಹಿಡಿದು ನನ್ನವಳನ್ನಾಗಿ ಮಾಡಿಕೊಂಡಿದ್ದೇನೆ. ಅವಳ ಮನೆಯಲ್ಲಿ ಬಡತನವಿದ್ದರೂ ಅವಳ ಬ್ಯೂಟಿಯೆದುರು ನನಗೆ ಬೇರೆ ಯಾವುದೂ ಗಮನಕ್ಕೇ ಹೋಗಿರಲಿಲ್ಲ. ನಾನೊಬ್ಬ ಬಿಸ್ನೆಸ್‍ಮ್ಯಾನ್. ಸಂಜೆ ಪಾರ್ಟಿಗೆ ಒಳ್ಳೆಯ ಡ್ರೆಸ್ ಮಾಡಿಕೊಂಡಿರುವ ಮುದ್ದಾದ ಹೆಂಡತಿಯ ಜೊತೆ ಹೋಗುವುದೆಂದರೆ ನನಗಾಗ ಹೆಮ್ಮೆಯ ವಿಷಯವಾಗಿತ್ತು. ಅವಳೂ ನನ್ನ ಅಂತಸ್ತಿಗೆ ಸರಿಯಾಗಿ ನಡೆದುಕೊಳ್ಳಲು ಬಹುಬೇಗ ಕಲಿತಳು. ಮದುವೆಯಾದ ಕೆಲವು ವರ್ಷ ಯಾವ ಅಡೆತಡೆಯಿಲ್ಲದೇ ಆರಾಮವಾಗಿ ಕಳೆದುಹೋಯಿತು. ಆದರೆ ಈಗ ಕೆಲವು ವರ್ಷಗಳಿಂದ ನನ್ನ ಬಿಸ್ನೆಸ್ ಅಷ್ಟೊಂದು ಚೆನ್ನಾಗಿ ನಡೆದುಕೊಂಡು ಹೋಗುತ್ತಿಲ್ಲ. ಮಾಡಿದ ಸಾಲವನ್ನೂ ತೀರಿಸಲಾಗದೇ ಪರದಾಡುತ್ತಿದ್ದೇನೆ. ಇಂತಹ ಸಮಯದಲ್ಲಿ ನನಗೆ ಬೆಂಗಾವಲಾಗಿ ನಿಲ್ಲಬೇಕಾದ ನನ್ನ ಹೆಂಡತಿ ಬರೀ ಫ್ಯಾಷನ್ ಪ್ರಪಂಚದಲ್ಲಿಯೇ ಮುಳುಗಿಕೊಂಡಿದ್ದಾಳೆ. ಸಂಜೆಯಾಯಿತೆಂದರೆ ಲೇಡೀಸ್ ಕ್ಲಬ್ಬಿಗೆ ಅಲಂಕಾರ ಮಾಡಿಕೊಂಡು ಹೊರಟುಬಿಡುತ್ತಾಳೆ. ಮೊದಲು ಎರಡು ಕಾರುಗಳಿರುವಾಗ ಅವಳು ಒಂದನ್ನು ಉಪಯೋಗಿಸಿದ್ದರೆ ನನಗೆ ತೊಂದರೆಯಾಗುತ್ತಿರಲಿಲ್ಲ. ಆದರೆ ಈಗಿರುವುದು ಒಂದೇ ಕಾರಾದರೂ ಅದು ತನಗೇ ಬೇಕೆಂದು ಹಠ ಹಿಡಿಯುತ್ತಿದ್ದಾಳೆ. ಮೊದಲಿನ ಹಾಗೇ ಆಳುಕಾಳುಗಳನ್ನು ಇಟ್ಟುಕೊಂಡು ದರ್ಬಾರು ನಡೆಸುತ್ತಿದ್ದಾಳೆ. ಈ ರೀತಿಯ ಜೀವನಕ್ರಮಕ್ಕೆ ನನ್ನ ಆರ್ಥಿಕ ಪರಿಸ್ಥಿತಿ ಸಹಕರಿಸುತ್ತಿಲ್ಲ ಅಂದರೂ ಅರ್ಥಮಾಡಿಕೊಳ್ಳುತ್ತಿಲ್ಲ. ನಮಗಿರುವ ಒಬ್ಬಳೇ ಮಗಳ ಬಗ್ಗೆಯೂ ಕೇರ್ ಕೊಡುತ್ತಿಲ್ಲ. ಹೆಚ್ಚಿಗೆ ಹೇಳಿದರೆ ಈ ಸೌಭಾಗ್ಯಕ್ಕೆ ನನ್ನ ಹಿಂದೆ ಬಿದ್ದು ಯಾಕೆ ನನ್ನನ್ನು ಮದುವೆಯಾಗಬೇಕಿತ್ತು ಅಂತ ನನ್ನನ್ನೇ ದಬಾಯಿಸುತ್ತಾಳೆ. ಒಂದು ಕಡೆ ಬಿಸ್ನೆಸ್ಸಿನ ಟೆನ್ಷನ್. ಇನ್ನೊಂದೆಡೆ ಮನೆಯಲ್ಲಿ ಕಿರಿಕಿರಿ. ಕಂಗಾಲಾಗಿದ್ದೇನೆ. ಸಲಹೆ ಕೊಡಿ ಪ್ಲೀಸ್.

ಉ : ಅಲ್ಪರಿಗೆ ಐಶ್ವರ್ಯ ಬಂದರೆ ಮನೆಯ ಒಳಗಡೆ ಕೊಡೆ ಹಿಡಿದ ಹಾಗಾಯ್ತು ನಿಮ್ಮ ಹೆಂಡತಿಯ ಕತೆ. ಬಡತನದಲ್ಲೇ ಬೆಳೆದ ಹುಡುಗಿ ಈಗ ಕಷ್ಟವೇನೆಂದು ತನಗೆ ಗೊತ್ತೇ ಇಲ್ಲ ಅನ್ನುವ ರೀತಿ ವರ್ತಿಸುವುದು ನಿಜಕ್ಕೂ ಅವಳು ಮಹಾ ಸ್ವಾರ್ಥಿ ಅಂತ ಪುರಾವೆ ಮಾಡುತ್ತದೆ. ಗಂಡನ ಕಷ್ಟವನ್ನು ಅರ್ಥಮಾಡಿಕೊಳ್ಳದೇ ಬರೀ ವೈಭೋಗದಲ್ಲಿ ಮೆರೆಯುವ ಹೆಂಡತಿ ಸಿಕ್ಕರೆ ಅಂತವರ ಜೊತೆ ಬಾಳುವುದು ನಿಜಕ್ಕೂ ಕಷ್ಟವೇ. ಅವಳು ಆ ರೀತಿ ಬಿಗಡಾಯಿಸಲಿಕ್ಕೆ ನೀವೂ ಪರೋಕ್ಷವಾಗಿ ಕಾರಣರೇ. ಅವಳ ರೂಪಕ್ಕೆ ಮರುಳಾಗಿ ಆಗ ಅವಳನ್ನು ತಲೆಯ ಮೇಲೆ ಕೂರಿಸಿಕೊಂಡಿರಿ. ಅವಳ ನಿರೀಕ್ಷೆಗಿಂತಲೂ ಹೆಚ್ಚು ಅವಳನ್ನು ಓಲೈಸಿದಿರಿ. ಈಗ ಆಕೆಗೆ ಆ ರೀತಿಯ ಬದುಕು ಹ್ಯಾಬಿಟ್ ಆಗಿಬಿಟ್ಟಿದೆ. ನೀವೂ ಅವಳ ಸೌಂದರ್ಯಕ್ಕೆ ಮೈಮರೆತು ಮೋಜಿನಲ್ಲೇ ದಿನಕಳೆದು ನಿಮ್ಮ ಬಿಸ್ನೆಸ್ಸನ್ನು ನಿರ್ಲಕ್ಷಿಸಿರಬಹುದು. ಇನ್ನಾದರೂ ನೀವು ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಕಡೆಯೇ ಗಮನ ಹರಿಸಿ. ನಿಮ್ಮ ಹೆಂಡತಿಯೂ ವಾಸ್ತವವನ್ನು ಅರ್ಥಮಾಡಿಕೊಳ್ಳದಷ್ಟು ಚಿಕ್ಕಹುಡುಗಿಯಲ್ಲ. ನೀವೀಗ ಅವಳ ಬಾಯಿಗೆ ಹೆದರಿ ಸುಮ್ಮನಿದ್ದು ಅವಳ ಇಚ್ಛೆಯಂತೆ ಬದುಕಲು ಬಿಟ್ಟರೆ ಮುಂದೆ ಮತ್ತಷ್ಟು ಕಷ್ಟಕ್ಕೆ ಸಿಲುಕಿಕೊಳ್ಳುತ್ತೀರಿ. ಒಂದು ಹೆಣ್ಣುಮಗುವಿನ ತಂದೆಯೂ ಆದ ನೀವು ಈಗ ಆಕೆಗೆ ನಿಜಸ್ಥಿತಿಯ ಅರಿವು ಮೂಡಿಸಿ ಪರಿಸ್ಥಿತಿ ಮತ್ತೂ ಹದಗೆಡದಂತೆ ನೋಡಿಕೊಳ್ಳದಿದ್ದರೆ ನೀವು ನಿಮ್ಮ ಸಂಸಾರಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಅವಳನ್ನು ಕೂರಿಸಿಕೊಂಡು ಎಲ್ಲ ವಿಷಯವನ್ನು ಸರಿಯಾಗಿ ವಿವರಿಸಿ ಹೇಳಿ. ಇನ್ನಾದರೂ ಖರ್ಚಿಗೆ ಕಡಿವಾಣ ಹಾಕಿ ಬಿಸ್ನೆಸ್ಸನ್ನು ಇಂಪ್ರೂವ್ ಮಾಡುವ ಕಡೆ ಗಮನ ಹರಿಸದಿದ್ದರೆ ಎಲ್ಲರೂ ಬೀದಿಗೆ ಬೀಳಬೇಕಾಗುತ್ತದೆ ಅಂತ ಸರಿಯಾಗಿ ಅವಳಿಗೆ ವಿವರಿಸಿ ಹೇಳಿ. ಇನ್ನೊಬ್ಬರಿಗೆ ಶೋಆಫ್ ಮಾಡಲು ಹೋಗಿ ನಿಮ್ಮ ಗುಂಡಿಯನ್ನು ನೀವೇ ತೋಡಿಕೊಳ್ಳುವುದು ಬೇಡ ಅಂತ ಅವಳಿಗೆ ತಿಳಿಸಿ. ಅವಳನ್ನೂ ನಿಮ್ಮ ಬಿಸ್ನೆಸ್ಸಿಗೆ ಸಹಕರಿಸುವಂತೆ ಕರೆಯಿರಿ. ಇಬ್ಬರೂ ಜೊತೆಯಿದ್ದು ಕೆಲಸಮಾಡಿದರೆ ಯಾವ ಸಮಸ್ಯೆಯನ್ನೂ ಬಗೆಹರಿಸಿಕೊಳ್ಳಬಹುದು.

 

LEAVE A REPLY