ಮಗಳ್ಯಾಕೆ ಈ ರೀತಿ ವರ್ತಿಸುತ್ತಿರಬಹುದು?

ಪ್ರ : ನಾನೊಬ್ಬಳು ವಿಧವೆ ತಾಯಿ. ನನ್ನ ಮಗಳಿಗೆ ಆರು ವರ್ಷವಿರುವಾಗಲೇ ನನ್ನ ಗಂಡ ತೀರಿಹೋದರು. ಅತ್ತೆ ಮನೆಯವರ ಕಾಟ ತಾರಲಾರದೇ ಮನೆಯಿಂದ ಮಗಳ ಜೊತೆ ಹೊರಬಂದು ಸ್ವತಂತ್ರವಾಗಿ ಬದುಕುತ್ತಿದ್ದೇನೆ. ಪ್ರೈವೇಟ್ ಸ್ಕೂಲಿನಲ್ಲಿ ಟೀಚರ್ ಕೆಲಸ ಮಾಡಿಕೊಂಡು ಸಂಜೆ ಮಕ್ಕಳಿಗೆ ಟ್ಯೂಷನ್ ಕೊಟ್ಟು ನಾನು ಮಗಳ ಜೊತೆ ಸ್ವಾಭಿಮಾನದಲ್ಲೇ ಬದುಕುತ್ತಿದ್ದೇನೆ. ಮಗಳೇ ನನ್ನ ಸರ್ವಸ್ವ. ಅವಳೂ ಕಲಿಯುವುದರಲ್ಲಿ ಜಾಣೆಯಾಗಿದ್ದಳು. ಮೆರಿಟ್ ಸೀಟಿನಲ್ಲಿ ಮೆಡಿಕಲ್ ಸೀಟ್ ಪಡೆದು ಈಗ ಮೊದಲ ವರ್ಷದಲ್ಲಿ ಇದ್ದಾಳೆ. ನನ್ನ ಸಮಸ್ಯೆಯೇನೆಂದರೆ ಈಗ ಕೆಲವು ತಿಂಗಳಿಂದ ಅವಳಿಗೆ ಯಾವುದರಲ್ಲೂ ಆಸಕ್ತಿಯಿಲ್ಲ. ಈಗ ಓದುವುದೆಂದರೇ ಅಲರ್ಜಿ ಆದವರ ಹಾಗೆ ವರ್ತಿಸುತ್ತಿದ್ದಾಳೆ. ಸರಿಯಾಗಿ ಊಟ ತಿಂಡಿಯನ್ನೂ ಮಾಡುತ್ತಿಲ್ಲ. ಏನೋ ಆಲೋಚನೆ ಮಾಡುತ್ತಾ ಕೂರುತ್ತಾಳೆ. ಅಷ್ಟೊಂದು ಕಲಿಯುವುದರಲ್ಲಿ ಜಾಣೆಯಿದ್ದ ಅವಳು ಈಗ ಹೀಗ್ಯಾಕೆ ಮಾಡುತ್ತಿದ್ದಾಳೆ ಅಂತಲೇ ಗೊತ್ತಾಗುವುದಿಲ್ಲ. ಕೇಳಿದರೆ ಸರಿಯಾದ ಉತ್ತರವನ್ನೂ ಕೊಡುತ್ತಿಲ್ಲ. ಮೊದಲೆಲ್ಲ ಕಾಲೇಜಿನಲ್ಲಿ ನಡೆದ ಎಲ್ಲ ವಿಷಂiÀiಗಳನ್ನೂ ನನ್ನ ಹತ್ತಿರ ಹೇಳುತ್ತಿದ್ದಳು. ನಾನು ಅವಳ ಬೆಸ್ಟ್ ಫ್ರೆಂಡ್ ಅನ್ನುವ ಭಾವನೆ ನನಗಿತ್ತು. ಈಗ ಅವಳು ಈ ರೀತಿ ಮೌನಿಯಾಗಿದ್ದರಿಂದ ನನಗೆ ಬೇಸರದ ಜೊತೆಗೆ ಆತಂಕವೂ ಆಗುತ್ತಿದೆ. ನಾನೇನು ಮಾಡಲಿ?

: ಈ ಟೀನೇಜಿನ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಕೆಲವು ಮಕ್ಕಳು ಎಲ್ಲ ವಿಷಯಗಳನ್ನೂ ತಮ್ಮ ಹೆತ್ತವರಲ್ಲಿ ಮುಕ್ತಮನಸ್ಸಿನಿಂದ ಹೇಳಿಕೊಂಡು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುತ್ತಿರುತ್ತಾರೆ. ಇನ್ನು ಕೆಲವು ಮಕ್ಕಳು ಚಿಕ್ಕವರಿರುವಾಗ ಮುಕ್ತಮನಸ್ಸಿನಿಂದ ಇದ್ದರೂ ಬೆಳೆದಂತೆಲ್ಲ ಹಿರಿಯರ ಜೊತೆ ಸ್ವಲ್ಪ ಅಂತರ ಕಾದುಕೊಳ್ಳಲೇ ಇಷ್ಟಪಡುತ್ತಾರೆ. ನಿಮ್ಮ ಮಗಳೂ ಬಹುಶಃ ತನ್ನೆಲ್ಲ ಸಮಸ್ಯೆಗಳನ್ನು ನಿಮ್ಮ ಹತ್ತಿರ ಹೇಳಿ ನಿಮ್ಮ ಮನಸ್ಸಿಗೆ ಬೇಸರಮಾಡುವುದೇಕೆ ಅಂತ ತಾನೇ ಮನಸ್ಸಿನಲ್ಲಿ ನೋವು ಅನುಭವಿಸುತ್ತಿರಬಹುದು. ಒಂದೇ ಅವಳಿಗೆ ಆ ಕೋರ್ಸ್ ಇಷ್ಟವಾಗುತ್ತಿಲ್ಲದಿರಬಹುದು. ಇಲ್ಲಾ ಕಾಲೇಜಿನಲ್ಲಿ ಅವಳ ಮನಸ್ಸಿಗಾಗದ ಯಾವುದೋ ವಿದ್ಯಮಾನದಿಂದ ಅವಳು ಈ ರೀತಿಯ ಮಾನಸಿಕ ಹಿಂಸೆ ಅನುಭವಿಸುತ್ತಿರಬಹುದು. ಅಥವಾ ಈ ಟೀನೇಜಿನಲ್ಲಿ ಹೆಚ್ಚಿನವರಿಗೆ ಆಗುವ ಹಾಗೆ ಯಾರದೋ ಪ್ರೀತಿಯ ಬಲೆಯಲ್ಲಿ ಬಿದ್ದು ಒದ್ದಾಡುತ್ತಿರಬಹುದು. ಯಾವುದಕ್ಕೂ ಅವಳನ್ನು ಒಮ್ಮೆ ಕೂರಿಸಿಕೊಂಡು ಯಾಕೆ ಹೀಗೆ ಮಾಡುತ್ತಿದ್ದೀ ಅಂತ ಕೇಳಿ ಅವಳ ಮನಸ್ಸನ್ನು ಅರಿಯಲು ಪ್ರಯತ್ನಿಸಿ. ನಿಮ್ಮ ಜೀವನವಿರುವುದೇ ಅವಳಿಗಾಗಿ ಅವಳ ನಗುವಿಗಾಗಿ ನೀವು ಏನು ಮಾಡಲೂ ಸಿದ್ಧ ಎಂದು ಅವಳನ್ನು ಕೂರಿಸಿಕೊಂಡು ಮಾತಾಡಿ. ಅವಳು ಮನಸ್ಸು ಬಿಚ್ಚಿ ಮಾತಾಡದಿದ್ದರೆ ನಿಮಗೆ ಹಿಂಸೆಯಾಗುತ್ತಿದೆ ಅನ್ನುವ ವಿಷಯವನ್ನೂ ನಯವಾಗಿಯೇ ಅವಳಲ್ಲಿ ಹೇಳಿ. ಯಾವ ಕಷ್ಟ ಬಂದರೂ ಎದುರಿಸಿದ ನೀವು ಅವಳ ಮನಸಲ್ಲಾಗುವ ನೋವನ್ನು ಹಂಚಿಕೊಂಡರೆ ಅದನ್ನು ಬಗೆಹರಿಸುವತ್ತ ಸಂಪೂರ್ಣವಾಗಿ ನೀವು ಬೆಂಬಲ ಕೊಡುವುದಾಗಿಯೂ ಅವಳಲ್ಲಿ ಆತ್ಮವಿಶ್ವಾಸ ತುಂಬಿ. ಅಷ್ಟು ಹೇಳಿದರೂ ಅವಳು ನಿಮ್ಮಲ್ಲಿ ಮುಚ್ಚುಮರೆ ಮಾಡಿದರೆ ಅವಳ ಬೆಸ್ಟ್ ಫ್ರೆಂಡ್ಸ್ ಹತ್ತಿರ ಅವಳ್ಯಾಕೆ ಹೀಗಿದ್ದಾಳೆ ಅಂತ ಕೇಳಬಹುದು. ಪರಿಸ್ಥಿತಿ ಬಿಗಡಾಯಿಸುತ್ತಿದೆ ಅಂತ ಅನಿಸಿದರೆ ಒಮ್ಮೆ ಮನೋವೈದ್ಯರ ಹತ್ತಿರ ಕೌನ್ಸೆಲಿಂಗಿಗೂ ಕರೆದುಕೊಂಡು ಹೋಗಿ. ಅವಳು ಇಲ್ಲಿಯವರೆಗೆ ಏನೇ ತಪ್ಪು ಮಾಡಿದರೂ ಅದಕ್ಕೆ ಅವಳನ್ನು ದೂಷಿಸದೇ ಮುಂದೇನು ಪರಿಹಾರ ಅನ್ನುವತ್ತ ಮಾತ್ರ ಗಮನ ಹರಿಸಿ. ಅವಳ ಹತ್ತಿರ ಪ್ರೀತಿಯಿಂದಲೇ ಮಾತಾಡುತ್ತಾ ಅವಳ ದುಗುಡವನ್ನು ಕಡಿಮೆ ಮಾಡುವತ್ತಲೇ ನಿಮ್ಮ ಗಮನ ಇರಲಿ.