ಕೆಲಸವಿಲ್ಲದ ಬಾಯ್‍ಫ್ರೆಂಡ್ ದುಬಾರಿ ಗಿಫ್ಟ್‍ಕೊಡುತ್ತಿದ್ದಾನೆ

ಪ್ರ : ಈ ಹುಡುಗನ ಜೊತೆ ನಾನು ಕಾಲೇಜು ದಿನಗಳಿಂದಲೂ ಡೇಟಿಂಗ್ ಮಾಡುತ್ತಿದ್ದೇನೆ. ನಾನೀಗ ನೌಕರಿ ಮಾಡುತ್ತಿದ್ದೇನೆ. ಅವನು ಸ್ವಲ್ಪ ಚಂಚಲ ಸ್ವಭಾವದವನು. ಡೆಸ್ಕ್ ವರ್ಕ್ ಅವನಿಗಿಷ್ಟವಿಲ್ಲ. ಮಾರ್ಕೆಟಿಂಗ್ ಕೆಲಸ ಅವನಿಗೆ ಹೊಂದುತ್ತದೆ. ಆದರೆ ಸಿಕ್ಕಿದ ಕೆಲಸಗಳಲ್ಲೆಲ್ಲ ಒಂದಲ್ಲ ಒಂದು ಪ್ರಾಬ್ಲೆಂ ಅವನಿಗೆ. ಯಾರೂ ಅವನಿಗೆ ಡಿಕ್ಟೇಟ್ ಮಾಡಬಾರದು. ಸೀನಿಯರ್ಸಿಗೆ ಸಲಾಂ ಹೊಡೆದುಕೊಂಡಿರುವುದು ಅವನಿಂದ ಸಾಧ್ಯವಿಲ್ಲ. ಅದಕ್ಕೇ ಅವನು ಯಾವ ಕೆಲಸದಲ್ಲೂ ಎರಡು ತಿಂಗಳ ಮೇಲೆ ನಿಲ್ಲಲಿಲ್ಲ. ಅವನ ಮನೆಯವರು ಸ್ವಲ್ಪ ಶ್ರೀಮಂತರು. ಅವನ ಅಣ್ಣನೂ ಒಳ್ಳೆಯ ನೌಕರಿಯಲ್ಲಿ ಇದ್ದಾನೆ. ಪಾಕೆಟ್‍ಮನಿ ಬೇಕಷ್ಟು ಸಿಗುತ್ತದೆ. ಹಣದ ಕೊರತೆ ಅವನಿಗೆ ಕಾಡಿದ್ದೇ ಇಲ್ಲ. ಪರ್ಸ್ ತುಂಬಿದ್ದರೆ ದಿಲ್ ದಾರ್ ಮನುಷ್ಯ. ನನ್ನ ಜೊತೆ ಡೇಟಿಂಗಿನಲ್ಲೆಲ್ಲ ನಾನು ಬೇಡವೆಂದರೂ ಖರ್ಚು ಮಾಡುವುದು ಅವನೇ. ಕಳೆದ ವಾರ ನನ್ನ ಬರ್ತ್‍ಡೇ ಇತ್ತು. ಅವನು ನನಗೆ ಪಾರ್ಟಿ ಕೊಟ್ಟಿದ್ದಲ್ಲದೇ ಚಿನ್ನದ ನೆಕ್‍ಲೇಸ್ ಸಹ ಗಿಫ್ಟ್ ಕೊಟ್ಟಿದ್ದಾನೆ. ಕೆಲಸ ಸಹ ಇಲ್ಲದ ಅವನು ಕೊಟ್ಟ ಆ ದುಬಾರಿ ಗಿಫ್ಟ್ ತೆಗೆದುಕೊಳ್ಳಲು ನನಗೆ ತುಂಬಾ ಮುಜುಗರವಾಯಿತು. ಅದನ್ನು ಹಿಂದಿರುಗಿಸೋಣ ಅಂತ ಅನಿಸಿದರೂ ಅವನಿಗೆ ಬೇಸರವಾಗಬಹುದೆನ್ನುವ ಭಯದಿಂದ ಹಾಗೆ ಮಾಡಿಲ್ಲ. ನನಗೆ ಅವನ ಪ್ರೀತಿ ಮುಖ್ಯವೇ ವಿನಃ ಅವನು ಕೊಡುವ ಉಡುಗೊರೆಯಲ್ಲ. ಅದು ಅಲ್ಲದೇ ಅವನು ನನಗೆ ಕೊಡುವ ಗಿಫ್ಟ್ ಅವನು ಸಂಪಾದಿಸಿದ ಹಣದಲ್ಲಿ ಖರೀದಿಸಿದ್ದಲ್ಲ. ಅವನೇ ದುಡಿದ ಹಣದಲ್ಲಿ ಫ್ಯಾನ್ಸಿ ಇಯರ್‍ರಿಂಗ್ ನೀಡಿದ್ದರೂ ನನಗೆ ಖುಶಿಯಾಗುತ್ತಿತ್ತು. ಹೇಗೆ ಹೇಳಲಿ ಅವನಿಗೆ ಈ ವಿಷಯವನ್ನು?

: ನಿಮಗೆ ಅವನ ಬಗ್ಗೆ ಇರುವ ಕನ್ಸರ್ನ್ ಸಹಜವೇ. ಸ್ವತಃ ಸಂಪಾದಿಸದೇ ಮನೆಯವರ ಹಣದಲ್ಲಿ ಪ್ರೀತಿಸುವವಳಿಗೆ ಗಿಫ್ಟ್ ಕೊಟ್ಟರೆ ಅದನ್ನು ಸ್ವೀಕರಿಸುವಾಗ ಮುಜುಗರವಾಗುವುದು ಸ್ವಾಭಾವಿಕವೇ. ಆದರೆ ಈಗ ಅವನು ಕೊಟ್ಟ ಗಿಫ್ಟನ್ನು ಹಿಂದಿರುಗಿಸಿದರೆ ಅವನಿಗೆ ನೋವಾಗುವುದಷ್ಟೇ ಅಲ್ಲ ತನ್ನ ಬಗ್ಗೆ ಇರುವ ಆತ್ಮವಿಶ್ವಾಸವೂ ಹೊರಟುಹೋಗಬಹುದು. ಮನೆಯವರು ಕೊಟ್ಟ ಅಥವಾ ನೌಕರಿ ಮಾಡಿದ್ದಷ್ಟು ದಿನ ಉಳಿಸಿದ ಹಣದಲ್ಲಿ ನಿಮಗೆ ಪ್ರೀತಿಯಿಂದ ನೆಕ್‍ಲೇಸ್ ತÀಂದಿದ್ದಾನೆ. ಅದು ನಿಮ್ಮ ಬಳಿಯೇ ಇರಲಿ. ಆದರೆ ಅವನು ದುಡಿದ ಹಣದಲ್ಲಿಯೇ ಗಿಫ್ಟ್ ಕೊಟ್ಟರೆ ನಿಮಗೆ ಇನ್ನಷ್ಟು ಸಂತೋಷವಾಗುವುದು ಅಂತ ಪರೋಕ್ಷವಾಗಿ ಹೇಳಿ. ಮನೆಯವರು ಕೊಟ್ಟ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವುದು ಸರಿಯಲ್ಲ ಅಂತ ಅವನಿಗೆ ತಿಳಿಹೇಳಿ. ನಿಮ್ಮನ್ನು ಅಷ್ಟೊಂದು ಪ್ರೀತಿಸುತ್ತಿರುವುದರಿಂದ ನಿಮ್ಮ ಬಯಕೆ ಈಡೇರಿಸಲಾದರೂ ಅವನು ನೌಕರಿಗೆ ಪುನಃ ಸೇರಬಹುದು. ಅನುಭವ ಪಡೆದುಕೊಳ್ಳಲಾದರೂ ಬೇರೆಯವರ ಕೈಕೆಳಗೆ ಸ್ವಲ್ಪ ವರ್ಷ ಕೆಲಸ ಮಾಡುವುದು ಒಳ್ಳೆಯದು ಅಂತ ಅವನಿಗೆ ಮನವರಿಕೆ ಮಾಡಿಕೊಡಿ. ಮನೆಯಲ್ಲಿ ಅನುಕೂಲಸ್ಥರೂ ಆಗಿರುವುದರಿಂದ ಅವನಿಗಿಷ್ಟವಾದ ಕೆಲಸದಲ್ಲಿ ಅನುಭವ ಪಡೆದುಕೊಂಡರೆ ಅವನೇ ಬಿಸಿನೆಸ್ ಪ್ರಾರಂಭಿಸಬಹುದು. ಆಗ ಬೇರೆಯವರಿಗೆ ಸಲಾಂ ಹೊಡೆಯುವುದೂ ತಪ್ಪುತ್ತದೆ. ನಿಮ್ಮ ಹುರಿದುಂಬಿಕೆಯಿಂದ ಅವನೂ ಸ್ವತಃ ದುಡಿಯಲು ನೀವು ಪ್ರೇರಕ ಶಕ್ತಿಯಾಗಿ.