ಮಂಜಿಷ್ಣಾರ್ ಕ್ಷೇತ್ರದಲ್ಲಿ ಮುಸ್ಲಿಮರಿಂದ ವೀಳ್ಯದೆಲೆ, ತೆಂಗಿನಕಾಯಿ ಮಾರಾಟ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಜಾತಿ-ಧರ್ಮಗಳ ಹೆಸರಲ್ಲಿ ಪರಸ್ಪರ ಕಚ್ಚಾಡುತ್ತಿರುವ ಈ ಯುಗದಲ್ಲೂ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದಲ್ಲಿ ಕಳೆದ ಸುಮಾರು ಎಂಟುನೂರು ವರ್ಷಗಳಿಂದಲೂ ವಾಡಿಕೆಯಲ್ಲಿರುವ ಹಿಂದೂ ಮುಸಲ್ಮಾರನ್ನು ಒಗ್ಗೂಡಿಸುವಂತಹ ಹಲವು ಸಂಪ್ರದಾಯಗಳು ಈಗಲೂ ಕಂಡುಬರುತ್ತಿವೆ. ಉದ್ಯಾವರ ಸಾವಿರ ಜಮಾಹತ್ ಹಾಗೂ ಉದ್ಯಾವರ ಶ್ರೀ ಅರಸು ಕ್ಷೇತ್ರಕ್ಕಿರುವ ಸಂಬಂಧವನ್ನು ತೋರಿಸುವಂತಹ ಹಲವು ಸಂಪ್ರದಾಯಗಳು ಇಂದಿನ ತಲೆಮಾರಿಗೆ ಮಾದರಿಯಾಗಿದೆ.

ಎಲ್ಲಾ ವರ್ಷದ ವಾಡಿಕೆಯಂತೆ ಈ ವರ್ಷವೂ ಉದ್ಯಾವರ ಶ್ರೀ ಅರಸು ಕ್ಷೇತ್ರದ ಜಾತ್ರೆಗೆ ದಿನ ನಿಶ್ಚಯ(ಕುದಿಕಳ)ವಾಯಿತು. ದಿನ ನಿಶ್ಚಯದಂದು ಸಿಂಹಾಸನ ಕಟ್ಟೆಯಲ್ಲಿ ಒಂದು ಭಾಗದಲ್ಲಿ ಉದ್ಯಾವರ ಸಾವಿರ ಜಮಾಹತಿಗೊಳಪಟ್ಟ ಮುಸಲ್ಮಾನರು ಹಾಗೂ ಇನ್ನೊಂದು ಭಾಗದಲ್ಲಿ ಬ್ರಹ್ಮಸಭೆ ಅಂದರೆ ಕ್ಷೇತ್ರಕ್ಕೆ ಸಂಬಂಧಪಟ್ಟವರು ಕುಳಿತುಕೊಂಡರು. ಬಳಿಕ ದಿನಕಟ್ಟೆಯ ಮುಂಭಾಗದಲ್ಲಿ ಪಾತ್ರಿಗಳ ಆಗಮನದೊಂದಿಗೆ ದಿನ ನಿಶ್ಚಯವನ್ನು ಓದಿ ಹೇಳಲಾಯಿತು. ಈ ಸಂದರ್ಭ ಭಗವತೀ ಭೇಟಿ ಕೂಡಾ ನಡೆಯಿತು. ಭೇಟಿಯ ಬಳಿಕ ಕ್ಷೇತ್ರದ ಉತ್ಸವದ ಧ್ವಜಾರೋಹಣದ ಉಸ್ತುವಾರಿಯನ್ನು ಅವರಿಗೆ ನೀಡಲಾಯಿತು. ಬಳಿಕ ಕ್ಷೇತ್ರದಲ್ಲಿ ವಾಡಿಕೆಯಲ್ಲಿರುವ ವೀಳ್ಯದೆಲೆ ಮಾರಾಟ ಹಾಗೂ ತೆಂಗಿನಕಾಯಿ ಮಾರಾಟ ನಡೆಯಿತು. ಕುದಿಕಳದಲ್ಲಿ ವೀಳ್ಯದೆಲೆ ಮಾರಾಟ ಮಾಡುವುದು ಉದ್ಯಾವರ ಜಮಾಹತಿಗೊಳಪಟ್ಟ ಅನುವಂಶೀಯ ನಖಾ ಕುಟುಂಬಗೊಳಪಟ್ಟ ಒಬ್ಬ ಮುಸಲ್ಮಾನಾಗಬೇಕಾಗಿದೆ. ಇದರಂತೆ ಇದೇ ಕುಟುಂಬದಲ್ಲೊಬ್ಬನಾದ ಸಯ್ಯದ್ ಟಿ ಎಸ್ ಎಂಬಾತ ವೀಳ್ಯದೆಲೆ ಹಾಗೂ ತೆಂಗಿನಕಾಯಿ ಮಾರಾಟ ಮಾಡಿದರು. ನಾಲ್ಕು ತೆಂಗಿನ ಕಾಯಿಗಳಲ್ಲಿ ಎರಡೆರಡನ್ನು ಕ್ಷೇತ್ರದ ಅಣ್ಣ ದೈವ ಹಾಗೂ ತಮ್ಮ ದೈವ ಖರೀದಿಸಿ ತೆಂಗಿನಕಾಯಿ ಒಡೆಯುವ ಸ್ಪರ್ಧೆ ಏರ್ಪಟಿತ್ತು. ಇದನ್ನು ವೀಕ್ಷಿಸಲು ಗುರಿಕಾರರು, ನಾಲ್ಕು ಗ್ರಾಮಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು.