ನೋಟು ನಿಷೇಧ ಪರಿಣಾಮ ಹೆಚ್ಚಾಗಿ ಮುಸ್ಲಿಮರಿಗೇ ಎಂದ ಉ ಕ ಸಂಸದ ಅನಂತಕುಮಾರ

ಅನಂತಕುಮಾರ್ ಹೆಗಡೆ

ನಮ್ಮ ಪ್ರತಿನಿಧಿ ವರದಿ

ಶಿರಸಿ (ಉ ಕ) : “ಮುಸ್ಲಿಮರು ಹೆಚ್ಚು ವ್ಯಾಪಾರ, ವಹಿವಾಟು ಮಾಡುತ್ತಿದ್ದು, ಬಹಳಷ್ಟು ಜನರು ಹಣದ ದಾಖಲೆ ಇಡಲು ಬಯಸುವುದಿಲ್ಲ. ಅದರಲ್ಲೂ ಕೆಲವರು ಭಯೋತ್ಪಾದನೆಗೂ ಹಣ ನೀಡುತ್ತಾರೆಂಬ ಮಾಹಿತಿ ಇದೆ. ನೋಟು ನಿಷೇಧದಿಂದ ಮುಸ್ಲಿಮರಿಗೇ ಹೆಚ್ಚು ಪರಿಣಾಮ ಆಗಿದೆ” ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಹೊಸ ಬಾಂಬ್ ಸಿಡಿಸಿದ್ದಾರೆ.

ಅವರು ಶನಿವಾರ ಶಿರಸಿಯ ಪ್ರವಾಸಿಮಂದಿರದಲ್ಲಿ ಹೆಗಡೆ ಬ್ರದರ್ಸ್ ನಿರ್ಮಾಣದ ಸಂದೇಶ ಹೆಗಡೆ ನಿರ್ದೇಶನದ ಭ್ರಷ್ಟಾಚಾರ ವಿರುದ್ಧ ಹಾಗೂ ನೋಟು ನಿಷೇಧ ಕುರಿತಾದ `ಕಾಂಚಾಣ’ ಎಂಬ ಕಿರುಚಿತ್ರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

“ನೋಟು ನಿಷೇಧದಿಂದ ಆರ್ಥಿಕ ಸದೃಢತೆ, ಭಯೋತ್ಪಾದನೆ ಚಟುವಟಿಕೆ ನಿಯಂತ್ರಣ, ಭ್ರಷ್ಟಾಚಾರ ನಿಯಂತ್ರಣದ ಗುರಿ ಇದ್ದವು. ಬಹುತೇಕ ಮೂರರಲ್ಲೂ ಯಶಸ್ವಿಯಾಗುತ್ತೇವೆ. ಸಹಕಾರಿ ಸಂಘಗಳಲ್ಲೂ ದೇಶದ ಹಲವಡೆ ನಿರ್ದೇಶಕರೇ ನೋಟು ವಿನಿಮಯ ಮಾಡಿಸಿದ್ದಾರೆ. ಎಲ್ಲರಿಗೂ ಮುಂದೆ ಮಾರಿಹಬ್ಬ ಕಾದಿದೆ. ನಾವು ಮುಂದೆ ಚುನಾವಣೆ ಗೆಲ್ಲುತ್ತೇವೆಯೋ, ಇಲ್ಲವೋ ಎಂಬುದು ಗೊತ್ತಿಲ್ಲ. ದೇಶಕ್ಕೆ ಒಳ್ಳೆಯದಾಗುತ್ತದೆ” ಎಂದರು.