ಎಸ್ ಬಿ ಟಿ ಬ್ಯಾಂಕ್ ವಿರುದ್ಧ ಮುಸ್ಲಿಂ ಯೂತ್ ಲೀಗ್ ಮೆರವಣಿಗೆ, ಧರಣಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : “ಮಂಜೇಶ್ವರದ ಹೃದಯ ಭಾಗವಾದ ಹೊಸಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಎಸ್ ಬಿ ಟಿ ಬ್ಯಾಂಕಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಹಕರಿಗೆ ತೋರುತ್ತಿರುವ ಅನುಚಿತ ವರ್ತನೆಯನ್ನು ಕೊನೆಗಾಣಿಸಬೇಕು, ವಹಿವಾಟು ಸಂಬಂಧವಾದ ವಿಷಯಗಳಲ್ಲಿ ಸಮಾನ ನೀತಿಯನ್ನು ಪಾಲಿಸಬೇಕು, ಬ್ಯಾಂಕಿನಲ್ಲಿ ಹೆಚ್ಚಿನ ನೇಮಕ ಮಾಡಿಕೊಳ್ಳಬೇಕು” ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಪಂಚಾಯತು ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿಯನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಹೊಸಂಗಡಿ ಲೀಗ್ ಕಚೇರಿ ಮುಂಬಾಗದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ಎಸ್ ಬಿ ಟಿ ಬ್ಯಾಂಕ್ ಮುಂಬಾಗದಲ್ಲಿ ಪೆÇಲೀಸರು ತಡೆದರು. ಬಳಿಕ ನಡೆದ ಧರಣಿಯನ್ನು ಯೂತ್ ಲೀಗ್ ರಾಜ್ಯ ಸಮಿತಿ ಸದಸ್ಯ ಎ ಕೆ ಎಂ ಅಶ್ರಫ್ ಉದ್ಘಾಟಿಸಿದರು.

ಮಾತನಾಡಿದ ಅವರು, “ಮೋದಿ ಸರಕಾರ ಹಳೆ ನೋಟನ್ನು ಅಮಾನ್ಯಗೊಳಿಸಿದ ಬಳಿಕ ಸಾಮಾನ್ಯ ಜನತೆ ಕಂಗಾಲಾಗಿದೆ. ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಬೇಕಾದ ಪ್ರಧಾನಿ ಮೋದಿ ವಿಮಾನದಲ್ಲಿ ಪ್ರಯಾಣಿಸಿಕೊಂಡು ಮೋಜು ಮಾಡುತಿದ್ದಾರೆ” ಎಂದು ಹೇಳಿದರು. ನೇತಾರರ ಸಹಿತ  ನೂರಾರು ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.