ಮೇ 14ರಿಂದ ಮಂಗಳೂರಿನಲ್ಲಿ `ಮುಸ್ಲಿಂ ಯುವ ಸಮಾವೇಶ ‘

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ದೇಶದಲ್ಲಿರುವ ಮುಸಲ್ಮಾನರು ಇಂದು ಸಾವಿರಾರು ಸಮಸ್ಯೆಗಳಿಂದ, ನೋವುಗಳಿಂದ ಸಂಕಷ್ಟಕ್ಕೀಡಾಗಿದ್ದಾರೆ. ಅವರು ಸಮುದಾಯದ ಒಳಗೂ, ಹೊರಗೂ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅನುಮಾನಿತ, ಅವಮಾನಿತ ಸಮುದಾಯದ ನೋವು ನಲಿವುಗಳ ಕುರಿತು ಚರ್ಚೆ, ಸಂವಾದ ನಡೆಸಲು ಡಿವೈಎಫೈ ಸಂಘಟನೆ ವತಿಯಿಂದ ಮೇ 14, 15ರಂದು ಮುಸ್ಲಿಂ ಯುವ ಸಮಾವೇಶ ಆಯೋಜಿಸಲಾಗಿದೆ ” ಎಂದು ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು,  ಸ್ಥಳೀಯ ಆಡಳಿತಗಳು ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ದಿವ್ಯ ನಿರ್ಲಕ್ಷ್ಯ ತೋರಿಸುವುದು ದೇಶದೆಲ್ಲೆಡೆ ಕಣ್ಣಿಗೆ ರಾಚುತ್ತದೆ. ಕೇಂದ್ರ ರಾಜ್ಯ ಸರ್ಕಾರಗಳ ಬಜೆಟುಗಳಲ್ಲಿ ಮುಸ್ಲಿಮರನ್ನು ನಿರ್ಲಕ್ಷಿಸಲಾಗುತ್ತಿದೆ. ಒಂದೆಡೆ ವ್ಯವಸ್ಥೆಯ ನಿರ್ಲಕ್ಷ್ಯಕ್ಕೊಳಗಾಗಿ ಹಸಿವು, ಬಡತನದಿಂದ ನರಳುತ್ತಿರುವ ಮುಸ್ಲಿಮರು ಇನ್ನೊಂದೆಡೆ ಹೆಚ್ಚುತ್ತಿರುವ ಕೋಮುವಾದದ ಬಲಿಪಶುಗಳಾಗಿದ್ದಾರೆ ” ಎಂದರು.

ರಾಜ್ಯದ ಮುಸ್ಲಿಂ ಸಮುದಾಯದ ಹಾಗೂ ಇತರೆ ಬರಹಗಾರರು, ಚಿಂತಕರು, ಸಾಹಿತಿಗಳು 2 ದಿನ ನಡೆಯುವ ಯುವ ಸಮಾವೇಶದಲ್ಲಿ ಸಮುದಾಯದ ನಿಜ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ, ವಿಚಾರ ಮಂಡಿಸಲಿದ್ದಾರೆ” ಎಂದರು. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಉಪಾಧ್ಯಕ್ಷ ಬಿ ಕೆ ಇಮ್ತಿಯಾಜ್, ಕಾರ್ಯದರ್ಶಿ ರಫೀಕ್ ಹರೇಕಳ, ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಾದಿಕ್ ಕಣ್ಣೂರು ಮೊದಲಾದವರಿದ್ದರು.