ಮುಸ್ಲಿಂ ಮಹಿಳೆ ವೈವಾಹಿಕ ಜೀವನ ಉಳಿಸಲು ಪರಪುರುಷನ ಜತೆ ಮಲಗುವ ಹಲಾಲ ಪದ್ಧತಿ

ಶರೀಯತ್ ಪ್ರಕಾರ, ವಿಚ್ಛೇದಿತ ಪತಿಯನ್ನು ಮರಳಿ ಪಡೆಯಲು ಮತ್ತೊಂದು ಮದುವೆಯಾಗಲೇಬೇಕಾದ ಅನಿವಾರ್ಯತೆ ಇರುವುದರಿಂದ ಈ ಮಹಿಳೆಯರು ಅಪರಿಚಿತನೊಂದಿಗೆ ಮದುವೆಯಾಗಿ, ಲೈಂಗಿಕ ಕ್ರಿಯೆಯಲ್ಲೂ ತೊಡಗಿಸಿಕೊಂಡು ಪುನಃ ತಲಾಖ್ ನೀಡಿ ತಮ್ಮ ಪತಿಯ ಬಳಿ ಮರಳುತ್ತಿದ್ದಾರೆ.

ಲಂಡನ್ : ಯಾವುದೋ ಒಂದು ಸಂದರ್ಭದಲ್ಲಿ ತನ್ನ ಗಂಡನಿಂದ ತಲಾಖ್ ಪಡೆದು ಪ್ರತ್ಯೇಕವಾಗಿ ಜೀವನ ನಡೆಸುವ ಮುಸ್ಲಿಂ ಮಹಿಳೆಯರು ತಮ್ಮ ಪತಿಯ ಬಳಿಗೆ ಮತ್ತೆ ಹೋಗಲು ನೂತನ ಮಾರ್ಗವೊಂದನ್ನು ಕಂಡುಕೊಂಡಿದ್ದು ಬ್ರಿಟನ್ನಿನಲ್ಲಿ ಇದು ಹಲಾಲಾ ಪದ್ಧತಿಯ ಮೂಲಕ ಜಾರಿಯಲ್ಲಿದೆ.

ಶರೀಯತ್ ಪ್ರಕಾರ, ವಿಚ್ಛೇದಿತ ಪತಿಯನ್ನು ಮರಳಿ ಪಡೆಯಲು ಮತ್ತೊಂದು ಮದುವೆಯಾಗಲೇಬೇಕಾದ ಅನಿವಾರ್ಯತೆ ಇರುವುದರಿಂದ ಈ ಮಹಿಳೆಯರು ಅಪರಿಚಿತನೊಂದಿಗೆ ಮದುವೆಯಾಗಿ, ಲೈಂಗಿಕ ಕ್ರಿಯೆಯಲ್ಲೂ ತೊಡಗಿಸಿಕೊಂಡು ಪುನಃ ತಲಾಖ್ ನೀಡಿ ತಮ್ಮ ಪತಿಯ ಬಳಿ ಮರಳುತ್ತಿದ್ದಾರೆ.

ಈ ಹಲಾಲಾ ಪದ್ಧತಿ ಆನಲೈನ್ ಮೂಲಕ ವ್ಯಾಪಿಸುತ್ತಿದ್ದು ಬ್ರಿಟನ್ನಿನ ಮುಸ್ಲಿಂ ಮಹಿಳೆಯರ ಒಂದು ವರ್ಗ ಈ ವಿಧಾನವನ್ನು ಅನುಸರಿಸುತ್ತಿದೆ. ಮೂರು ಬಾರಿ ತಲಾಖ್ ಎಂದು ಹೇಳುವ ಮೂಲಕ ಪತ್ನಿಗೆ ವಿಚ್ಚೇದನ ನೀಡುವ ಪದ್ಧತಿ ಬಹುತೇಕ ಮುಸ್ಲಿಂ ರಾಷ್ಟ್ರಗಳಲ್ಲಿ ನಿಷೇಧಿತವಾಗಿದ್ದರೂ ಇಂದಿಗೂ ಜಾರಿಯಲ್ಲಿರುವುದು ವಾಸ್ತವ. ತಮ್ಮ ಇಚ್ಚೆಗೆ ವಿರುದ್ಧವಾಗಿ ತಲಾಖ್ ಪಡೆದು ಪರದಾಡುವ ಮುಸ್ಲಿಂ ಮಹಿಳೆಯರಿಗೆ ಹಲಾಲಾ ಪದ್ಧತಿಯೊಂದೇ ಉತ್ತಮ ಮಾರ್ಗ ಎಂದು ಅನೇಕ ಮುಸ್ಲಿಂ ಮಹಿಳೆಯರು ಭಾವಿಸುತ್ತಾರೆ.

ಕೆಲವು ಸಂದರ್ಭಗಳಲ್ಲಿ ಹಲಾಲಾ ಮೂಲಕ ತಮ್ಮ ಮೊದಲ ಪತಿಯನ್ನು ಪುನಃ ಸೇರಲು ಬಯಸುವ ಮುಸ್ಲಿಂ ಮಹಿಳೆಯರು ಆರ್ಥಿಕ ಶೋಷಣೆಗೊಳಗಾಗುವ ಸಾಧ್ಯತೆಗಳೂ ಇವೆ. ಇಂತಹ ಅಮಾಯಕ ಮಹಿಳೆಯರನ್ನು ಹಲಾಲಾ ಪದ್ಧತಿಯಲ್ಲಿ ವಿವಾಹವಾಗುವ ಪುರುಷರು ಬ್ಲಾಕ್ಮೇಲ್ ಮಾಡುವ ಮೂಲಕ ಸುಲಿಗೆ ಮಾಡುವುದು ಸಾಮಾನ್ಯ ಸಂಗತಿಯಾಗಿದೆ.

ವಿವಾಹ ವಿಚ್ಚೇದನವನ್ನು ಕುರಿತಂತೆ ಇಸ್ಲಾಂನ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇಂತಹ ಅನರ್ಥಗಳು ನಡೆಯುತ್ತಿವೆ ಎಂದು ವಿದ್ವಾಂಸರು ಹೇಳುತ್ತಾರೆ.

ಲಿಖಿತ ಒಪ್ಪಂದದ ಮೂಲಕ ಏರ್ಪಡುವ ಹಲಾಲಾ ಸಂಬಂಧಗಳು ಹಲವಾರು ಸಂದರ್ಭಗಳಲ್ಲಿ ಮಹಿಳೆಯರಿಗೆ ಕಂಟಕಪ್ರಾಯವಾಗುವ ಸಂಭವವೂ ಹೆಚ್ಚು. ಪೂರ್ವ ಲಂಡನ್ನಿನಲ್ಲಿರುವ ಇಸ್ಲಾಮಿಕ್ ಸಮಿತಿ ಹಲಾಲಾ ವಿವಾಹಗಳನ್ನು ಇಸ್ಲಾಂ ವಿರೋಧಿ ಎಂದು ಖಂಡಿಸಿದೆ. ಇಂತಹ ವಿವಾಹ ಸಂಬಂಧಗಳು ಕೇವಲ ಹಣಗಳಿಕೆಯ ಉದ್ದೇಶದಿಂದ ನೆರವೇರುತ್ತಿವೆ, ಇದು ಇಸ್ಲಾಂ ತತ್ವಗಳ ಅನುಸಾರ ಅಕ್ರಮ ಮತ್ತು ಅನೈತಿಕ ಎಂದು ಇಸ್ಲಾಮಿಕ್ ವಿದ್ವಾಂಸರು ಹೇಳಿದ್ದಾರೆ. ಆದರೂ ಬ್ರಿಟನ್ನಿನ ಮುಸ್ಲಿಮರ ಒಂದು ಗುಂಪು ಹಲಾಲಾ ಪದ್ಧತಿಯನ್ನು ಅನುಸರಿಸುತ್ತಿರುವುದು ಸಾಂಪ್ರದಾಯಿಕ ಮುಸ್ಲಿಮರಲ್ಲಿ ಆತಂಕ ಮೂಡಿಸಿದೆ. (ಕೃಪೆ : ಬಿಬಿಸಿ)