ಕುರಾನ್ ಅವಹೇಳನಗೈದ ಪ್ರಕರಣ : ನಾಳೆ ಮುಸ್ಲಿಂ ಒಕ್ಕೂಟದ ಪ್ರತಿಭಟನಾ ಸಭೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕುರಾನ್ ನೆಲಕ್ಕೆ ಎಸೆದು ದಾಂದಲೆ ನಡೆಸಿದ ಆರೋಪ ಎದುರಿಸುತ್ತಿರುವವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಮುಸ್ಲಿಂ ಒಕ್ಕೂಟದ ವತಿಯಿಂದ ಅಕ್ಟೋಬರ್ 13ಕ್ಕೆ ಮಂಗಳೂರು ನೆಹರೂ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ ಅಶ್ರಫ್ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ತನಿಖೆನೆಪದಲ್ಲಿ ಮನೆಯೊಳಕ್ಕೆ ನುಗ್ಗಿದ ಪೊಲೀಸರು ಮನೆಯಲ್ಲಿದ್ದ ಧಾರ್ಮಿಕ ಗ್ರಂಥ ಕುರಾನ್ ನೆಲಕ್ಕೆ ಎಸೆದು ಅವಮಾನಿಸಿದ್ದಾರೆ. ಘಟನೆ ವರದಿ ಮಾಡಿದ ಪತ್ರಕರ್ತನನ್ನೂ ಪೊಲೀಸರು ಅನ್ಯಾಯವಾಗಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಜೈಲಿಗಟ್ಟಿದ್ದಾರೆ. ಹೀಗಾಗಿ ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು. ಸಂಬಂಧಿತ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಾವು ಈಗಾಗಲೇ ಮುಖ್ಯಮಂತ್ರಿ, ಗೃಹಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೆ ಸರಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ” ಎಂದು ದೂರಿದರು.

ಈ ಪ್ರಕರಣದ ಪ್ರಮುಖ ಸೂತ್ರಧಾರಿ ತಪ್ಪಿತಸ್ಥ ರಕ್ಷಿತ್ ಗೌಡ ಮತ್ತು ಅವರೊಂದಿಗೆ ಇದ್ದ ಇತರ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದನ್ನು ಖಂಡಿಸಿ ಅಕ್ಟೋಬರ್ 13ರಂದು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅಶ್ರಫ್ ಹೇಳಿದರು. ಪೊಲೀಸ್ ದೌರ್ಜನ್ಯದ ಸಂತ್ರಸ್ತ ಅಹಮ್ಮದ್ ಖುರೇಷಿ ಬಗೆಗಿನ ಸಿಒಡಿ ವರದಿಯನ್ನು ಪ್ರಕಟಿಸಬೇಕು ಎಂಬ ಬೇಡಿಕೆಗಳನ್ನು ಸಭೆಯಲ್ಲಿ ಮುಂದಿಡಲಾಗುವುದು ಎಂದರು.