ಐಡೆಂಟಿಟಿ ಶೋಧದಲ್ಲಿ ಮುಸ್ಲಿಂ ಮಹಿಳೆಯರು

ಎಷ್ಟೇ ಸಾಂಸ್ಕøತಿಕ, ರಾಜಕೀಯ ಅಡೆತಡೆಗಳಿದ್ದರೂ ಮುಸ್ಲಿಂ ಮಹಿಳೆಯರು ಸಾರ್ವಜನಿಕ ವಲಯದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನಮಾನಗಳನ್ನು ಗಳಿಸುತ್ತಿದ್ದಾರೆ.

  • ಮೊಯಿನ್ ಖಾಜಿ

ಸಾಮಾನ್ಯವಾಗಿ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮುಸ್ಲಿಂ ಮಹಿಳೆಯರನ್ನು ನಿಸ್ಸಹಾಯಕರಂತೆ ಬಿಂಬಿಸಲಾಗುತ್ತದೆ. ಸಾರ್ವಜನಿಕ ವಲಯದಲ್ಲಿ ಮುಸ್ಲಿಂ ಮಹಿಳೆಯರು ಎಂದರೆ ನಾಲ್ಕು ಗೋಡೆಗಳ ನಡುವೆ ಬಂಧಿಸಲ್ಪಟ್ಟವರು, ಅಸಹಾಯಕರು, ಶೋಷಿತರು ಮತ್ತು ತಮ್ಮ ಮೂಲಭೂತ ಹಕ್ಕುಗಳನ್ನೂ ಅನುಭವಿಸಲಾಗದೆ ಮೌನಕ್ಕೆ ಶರಣಾಗಿರುವ ಹಾಗೂ ತಾರತಮ್ಯ ಎದುರಿಸುತ್ತಿರುವ ದನಿ ಇಲ್ಲದವರು ಎಂದು ಪರಿಗಣಿಸಲಾಗುತ್ತದೆ.

ಪಶ್ಚಿಮ ರಾಷ್ಟ್ರಗಳಲ್ಲಿ ಮಾಧ್ಯಮಗಳು ಮುಸ್ಲಿಂ ಮಹಿಳೆಯನ್ನು ಈ ರೀತಿ ಬಿಂಬಿಸುವುದರಿಂದ ವಿಶ್ವದ ಬಹುತೇಕ ದೇಶಗಳಲ್ಲಿ ಇದೇ ಪರಂಪರೆ ಅನುಸರಿಸಲಾಗುತ್ತದೆ. ಶಿಕ್ಷಣ, ಸಾಮಾಜಿಕ ಸ್ಥಾನಮಾನ, ಗೋಪ್ಯತೆ ಮತ್ತು ಶೈಕ್ಷಣಿಕ ಬೆಳವಣಿಗೆಯಿಂದ ಮುಸ್ಲಿಂ ಮಹಿಳೆ ವಂಚಿತಳಾಗಿದ್ದಾಳೆ ಎಂಬ ಅಭಿಪ್ರಾಯ ದಟ್ಟವಾಗಿ ಬೇರೂರಿದೆ. ಆದರೆ ವಾಸ್ತವ ಪ್ರಪಂಚ ಬೇರೆಯೇ ಆಗಿದೆ. ಅರಬ್ ದೇಶಗಳಲ್ಲಿ, ವಿಶೇಷವಾಗಿ ಇರಾನಿನ ವಿಶ್ವವಿದ್ಯಾಲಯಗಳಲ್ಲಿ ಪುರುಷರಿಗಿಂತಲೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಜಿಪ್ಟಿನಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವ್ಯಾಸಂಗ ಮಾಡುವ ಮಹಿಳೆಯರ ಸಂಖ್ಯೆ ಅಮೆರಿಕದ ಮಹಿಳೆಯರಿಗಿಂತಲೂ ಹೆಚ್ಚಾಗಿದೆ.

ಕಳೆದ ಮೂರು ದಶಕಗಳಲ್ಲಿ ಒಂಭತ್ತು ಮುಸ್ಲಿಂ ಮಹಿಳೆಯರು ವಿವಿಧ ದೇಶಗಳಲ್ಲಿ ಆಡಳಿತ ನಡೆಸಿದ್ದಾರೆ. ಆದರೆ ಅಮೆರಿಕ ತನ್ನ ಪ್ರಪ್ರಥಮ ಮಹಿಳಾ ಅಧ್ಯಕ್ಷರನ್ನು ಚುನಾಯಿಸಲು ಸೋತಿದೆ. ಅನಕ್ಷರತೆ, ಅಜ್ಞಾನ ಮತ್ತು ಬಡತನ ಹೆಚ್ಚಾಗಿರುವ ಸಮಾಜಗಳಲ್ಲಿ ಮಹಿಳೆಯರ ಶೋಷಣೆ ಹೆಚ್ಚಾಗಿರುತ್ತದೆ. ಆದರೆ ಇದು ಎಲ್ಲ ಸಮುದಾಯಗಳಿಗೂ ಅನ್ವಯಿಸುತ್ತದೆ.  ಏಷಿಯಾದ ಅನೇಕ ದೇಶಗಳಲ್ಲಿ ಮುಸ್ಲಿಂ ಮಹಿಳೆಯರು ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿ ತಮ್ಮ ಘನತೆಗಾಗಿ ಹೋರಾಡುತ್ತಿದ್ದಾರೆ. ಖುರಾನಿನಲ್ಲಿ ಉಲ್ಲೇಖಿಸಿರುವ ಸೂತ್ರಗಳನ್ನೇ ಅಧರಿಸಿ ಮಹಿಳೆಯರು ತಮ್ಮ ಘನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಯಶಸ್ವಿಯಾಗಿ ಹೋರಾಡುತ್ತಿದ್ದಾರೆ. ಧಾರ್ಮಿಕ ವಿಚಾರಗಳಲ್ಲೂ ತಮ್ಮದೇ ಆದ ಸಾಧನೆ ಮಾಡಿರುವ ಮುಸ್ಲಿಂ ಮಹಿಳೆಯರು ಪುರುಷ ಸಮಾಜದ ಅಧಿಪತ್ಯದ ನಡುವೆಯೂ ಸೆಕ್ಯುಲರ್ ಮತ್ತು ಧಾರ್ಮಿಕ ಅಧ್ಯಯನದಲ್ಲಿ ಮುಂಚೂಣಿಯಲ್ಲಿರುವುದನ್ನು ಕಾಣಬಹುದು.

ಇನ್ನು ಕೆಲವು ಸಂದರ್ಭಗಳಲ್ಲಿ ಮುಸ್ಲಿಂ ಮಹಿಳೆಯರು ಖುರಾನ್ ನಿಯಮಗಳಂತೆಯೇ ತಮ್ಮ ಹಕ್ಕೊತ್ತಾಯಗಳಿಗಾಗಿ ಹೋರಾಡುತ್ತಿದ್ದಾರೆ. ಆದರೆ ಆಧುನಿಕ ಮುಸ್ಲಿಂ ಮಹಿಳೆಯರು ಉನ್ನತ ಶಿಕ್ಷಣದಿಂದ ಪ್ರಭಾವಿತರಾಗಿದ್ದು, ಇಸ್ಲಾಮಿಕ್ ನಿಯಮಗಳನ್ನು ಪರಾಮರ್ಶಿಸದೆ ಒಪ್ಪಿಕೊಳ್ಳುತ್ತಿಲ್ಲ. ಪಶ್ಚಿಮ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಅನೇಕ ಸಾರ್ವಜನಿಕ ಹಕ್ಕುಗಳು ದೊರೆತಿದ್ದು ಕೇವಲ ನೂರು ವರ್ಷಗಳ ಹಿಂದೆ. ಆದರೆ ಸಾವಿರ ವರ್ಷಗಳ ಹಿಂದೆಯೇ ಇಸ್ಲಾಂಧರ್ಮ ಮಹಿಳೆಯರಿಗೆ ಹಲವು ಹಕ್ಕುಗಳನ್ನು ನೀಡಿತ್ತು ಎಂಬುದನ್ನು ಗಮನಿಸಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳ ಸ್ತ್ರೀವಾದಿ ಧೋರಣೆಯನ್ನು ಮುಸ್ಲಿಂ ಮಹಿಳೆಯರು ಒಪ್ಪದೆ ಇರಬಹುದು. ಆದರೆ ವಿಶ್ವದ ಮಹಿಳಾ ಚಳುವಳಿಗಳು ಮಹಿಳೆಯರ ಹಕ್ಕುಗಳ ವಿಚಾರದಲ್ಲಿ ಇಸ್ಲಾಂ ಧರ್ಮದ ಮೂಲ ತತ್ವಗಳನ್ನೂ ಪರಾಮರ್ಶಿಸಿ ಪರಿಗಣಿಸಬೇಕಾಗಿದೆ.

ಎಷ್ಟೇ ಸಾಂಸ್ಕøತಿಕ, ರಾಜಕೀಯ ಅಡೆತಡೆಗಳಿದ್ದರೂ ಮುಸ್ಲಿಂ ಮಹಿಳೆಯರು ಸಾರ್ವಜನಿಕ ವಲಯದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನಮಾನಗಳನ್ನು ಗಳಿಸುತ್ತಿದ್ದಾರೆ. ಇದು ಸ್ವಾಗತಾರ್ಹವಷ್ಟೇ ಅಲ್ಲ, ಈ ಬೆಳವಣಿಗೆಯನ್ನು ಬೌದ್ಧಿಕ ವಲಯ ಗಂಭೀರವಾಗಿ ಪರಿಗಣಿಸಬೇಕಾಗಿದೆ.