ಪ್ರತಿರೋಧದ ದಾರಿ ದಾಟಿ ಹರಡುತ್ತಿದೆ ಮುಸ್ಲಿಂ ಕೋಮುವಾದ

ಮುಸ್ಲಿಂ ಕೋಮುವಾದ `ಪ್ರತಿರೋಧದ’ ದಾರಿಯನ್ನು ದಾಟಿ ರಾಜಕೀಯ ನೆಲೆಗಳನ್ನು ಹುಡುಕುತ್ತಿದೆ. ಥೇಟ್ ಸಂಘ ಪರಿವಾರದಂತೆಯೇ ವಿದ್ಯಾರ್ಥಿಗಳು, ಮಹಿಳೆಯರು, ಯುವಕರು, ಧಾರ್ಮಿಕ ನಾಯಕರು – ಹೀಗೆ ಸಮುದಾಯದ ಎಲ್ಲಾ ವಿಭಾಗಗಳನ್ನು ವಿವಿಧ ಬ್ಯಾನರುಗಳಡಿ ಸಂಘಟಿಸುತ್ತಾ ಇಡೀ ಸಮುದಾಯವನ್ನು ನಿಯಂತ್ರಿಸಲು ಯತ್ನಿಸುತ್ತಿದೆ. ಇದರ ಅಪಾಯಗಳನ್ನು ಅರಿಯಲು ಕರಾವಳಿಯ ಜಾತ್ಯತೀತ ಶಕ್ತಿಗಳು, ಮುಸ್ಲಿಂ ಸಮುದಾಯದ ಮುಖ್ಯವಾಹಿನಿಯ ಸಂಘಟನೆಗಳು, ವಿಚಾರವಂತರು ವಿಫಲವಾಗಿರುವುದು ಕೋಮುವಾದದ ವಿರುದ್ಧ ಹೋರಾಟದ ಬಹುದೊಡ್ಡ ಕೊರತೆ.

ಕಡಲ ತಡಿಯ ಜಿಲ್ಲೆ ದಕ್ಷಿಣ ಕನ್ನಡ ಎಂದಾಗ ಈ ಹಿಂದೆ ನೆನಪಾಗುತ್ತಿದ್ದು ಇಲ್ಲಿನ ಸುಂದರ ಸಮುದ್ರ ದಂಡೆಗಳು, ತೆಂಗು ಮತ್ತು ಅಡಿಕೆ ತೋಟಗಳು, ಪಶ್ಚಿಮ ಘಟ್ಟದ ದಟ್ಟ ಕಾಡು, ಹೆಂಚು, ಬೀಡಿ ಉದ್ಯಮ, ಮೀನುಗಾರಿಕೆ, ಯಕ್ಷಗಾನ, ನೇಮ, ಉರೂಸ್ ಜಾತ್ರೆಗಳಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಇಲ್ಲಿನ ತುಳುವರ, ಬ್ಯಾರಿಗಳ ಸಹಜ ಸೌಹಾರ್ದ ಬದುಕು. ಇದೆಲ್ಲ ಈಗ ಗತಕಾಲದ ಮಾತು. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಇಲ್ಲಿ ಎಲ್ಲವೂ ಬದಲಾಗಿದೆ. ಈಗ ಮಂಗಳೂರು ಎಂದಾಕ್ಷಣ ನೆನಪಾಗುವುದು ಹಿಂದೂ ಮುಸ್ಲಿಂ ಗಲಾಟೆಗಳು, ನೈತಿಕ ಪೊಲೀಸಗಿರಿ, ಪರಸ್ಪರ ತೊಡೆತಟ್ಟುವ ಕೋಮು ಸಂಘಟನೆಗಳು.
ತೊಂಭತ್ತರ ದಶಕದ ಆರಂಭದಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಆದಂತೆ ಕರಾವಳಿಯಲ್ಲೂ ಬಾಬರಿ ಮಸೀದಿ ಧ್ವಂಸ ಕೋಮುಗಲಭೆಯ ಕಿಡಿ ಹತ್ತಿಸಿ ಕರ್ನಾಟಕದ ಕರಾವಳಿ ಭಾಗಗಳಲ್ಲೂ ಘರ್ಷಣೆಗಳು ನಡೆದವು. ಇತಿಹಾಸದಲ್ಲಿ ಪ್ರಥಮ ಬಾರಿಗೆ ಬ್ಯಾರಿಗಳೂ, ತುಳುವರೂ ತಮ್ಮ ಇತಿಹಾಸವನ್ನು ಮರೆತು ಕಾದಾಡಿದರು. ದಿನಗಳೆದಂತೆ ರಾಜ್ಯದ ಬೇರೆ ಪ್ರದೇಶಗಳು ಸಹಜ ಸ್ಥಿತಿಗೆ ಮರಳಿದರೆ ಕರಾವಳಿ ಜಿಲ್ಲೆಗಳು ಮಾತ್ರ ಅನಂತರ ಯಾವತ್ತೋ ಸೌಹಾರ್ದತೆಯ ದಾರಿಗೆ ಹೊರಳಲೇ ಇಲ್ಲ. ತೊಂಭತ್ತೆರಡರ ಗಲಭೆ ಐದಾರು ಜೀವಗಳನ್ನು ಪಡೆದರೆ ಅದರ ಮುಂದುವರಿಕೆಯಂತೆ ತೊಂಭತ್ತೆಂಟರ ಸುರತ್ಕಲ್ ಗಲಭೆ ಹತ್ತು ಜೀವಗಳನ್ನು ಬಲಿ ಪಡೆಯಿತು. ಈ ಶತಮಾನದ ಹದಿನಾರು ವರ್ಷಗಳಂತೂ ಅವಿಭಜಿತ ದ ಕ ಜಿಲ್ಲೆಗಳ ಕೋಮುವಾದದ ಉಚ್ಛ್ರಾಯ ದಿನಗಳು. ಯಾವ ಸಾಮಾಜಿಕ ಅಧ್ಯಯನಕಾರರ ವಿಶ್ಲೇಷಣೆಗೂ ಸಿಗದಷ್ಟು ಕೋಮುವಾದ ಇಲ್ಲಿ ಬೆಳೆದುನಿಂತಿದೆ.
ಕರಾವಳಿಯಲ್ಲಿ ಬಹುಸಂಖ್ಯಾತ ಕೋಮುವಾದದ ಜಾಲಗಳು ತುಳುವರ ಮಧ್ಯೆ ವ್ಯಾಪಕವಾಗಿ ಹಬ್ಬಿರುವಂತೆಯೇ ಇಲ್ಲಿ ಅಲ್ಪಸಂಖ್ಯಾತ ಕೋಮುವಾದ ಬ್ಯಾರಿ ಮುಸ್ಲಿಮರ ಮಧ್ಯೆ ತನ್ನ ಬೇರುಗಳನ್ನು ಆಳಕ್ಕೆ ಇಳಿಸಿಕೊಂಡಿದೆ. ತೊಂಭತ್ತೆಂಟರ ಸುರತ್ಕಲ್ ಕೋಮುಗಲಭೆಯವರೆಗೂ ಕರಾವಳಿಯ ಕೋಮು ಕದನಗಳು ನಡೆದದ್ದು ಏಕಪಕ್ಷೀಯವಾಗಿಯೇ. ಆದರೆ ಎರಡು ಸಾವಿರ ಇಸವಿ ಆರಂಭ ಆದ ನಂತರದ ದಿನಗಳ ಕೋಮು ಘರ್ಷಣೆಯನ್ನು, ಕೋಮುವಾದದ ವ್ಯಾಪಕ ಬೆಳವಣಿಗೆಯನ್ನು ಅಷ್ಟು ಸರಳೀಕರಿಸಿ ನೋಡಲಾಗುವುದಿಲ್ಲ.
ಭಟ್ಕಳದಲ್ಲಿ ನಡೆದ ನಿರಂತರ ಕೋಮುಗಲಭೆಗಳು, ಅಂತರ್ಮತೀಯ ಜೋಡಿ ನಾಪತ್ತೆ ಪ್ರಕರಣ, ಆಸೋಡು ಜಾತ್ರೆಯ ಹಿನ್ನೆಲೆಯಲ್ಲಿ ನಡೆದ ಕುಂದಾಪುರದ ಎರಡು ಕೋಮುಗಲಭೆಗಳು, ಸುರತ್ಕಲ್ ಗಲಭೆ, ಗುಜರಾತ್ ಕೋಮು ದಂಗೆಗಳ ಪರಿಣಾಮಗಳು ಕರಾವಳಿಯ ಬ್ಯಾರಿ ಮುಸಲ್ಮಾನರನ್ನು ಅತಂತ್ರ, ಹತಾಶ ಸ್ಥಿತಿಗೆ ತಲುಪಿಸಿದವು. ಮುಖ್ಯವಾಹಿನಿಯ ಮಾಧ್ಯಮಗಳು ಮುಸ್ಲಿಮರ ವಿರುದ್ಧ ನಿಂತ ಈ ಸಂದರ್ಭ ಮುಸ್ಲಿಂ ಮೂಲಭೂತವಾದ ಮತ್ತು ಕೋಮುವಾದದ ಬೆಳವಣಿಗೆಗೆ ಪೂರಕ ವಾತಾವgಣವನ್ನು ನಿರ್ಮಿಸಿಕೊಟ್ಟವು.
ಮೊದ ಮೊದಲು ಆತ್ಮರಕ್ಷಣೆ, ಕ್ರಿಯೆಗೆ ಪ್ರತಿಕ್ರಿಯೆ ಎಂಬ ಲಾಜಿಕ್ ಮೇಲೆ ಕಾರ್ಯತಂತ್ರ ಹೆಣೆದ ಅವಕಾಶಕ್ಕಾಗಿ ಕಾಯುತ್ತಿದ್ದ ಮುಸ್ಲಿಂ ಕೋಮುವಾದ, ಪರಿಸ್ಥಿತಿಯ ಪೂರ್ಣ ಲಾಭ ಪಡೆದು ಸಂಘಟಿತ ಶಕ್ತಿಯಾಗಿ ಕರಾವಳಿಯಲ್ಲಿ ಬೆಳೆದುನಿಂತಿದೆ. ಈ ಅಲ್ಪಸಂಖ್ಯಾತ ಕೋಮುವಾದದ ಊರುಗೋಲಿನ ಸಹಾಯದಿಂದಲೇ ಬಹುಸಂಖ್ಯಾತ ಕೋಮುವಾದ ತನ್ನ ಅಸ್ತಿತ್ವವನ್ನು ಯಾವುದೇ ಹಿನ್ನಡೆ ಇಲ್ಲದೆ ಕಾಪಾಡಿಕೊಳ್ಳುತ್ತಿದೆ. ಬಹುಶಃ ಅರವತ್ತರ ದಶಕದಲ್ಲೇ ಕರಾವಳಿಯ ನಗರ ಪ್ರದೇಶಗಳಲ್ಲಿ ಮುಸ್ಲಿಂ ಮೂಲಭೂತವಾದ ಕಾಣಿಸಿಕೊಂಡಿತ್ತು. 1978ರ ಅಫ್ಘನ್ ಕ್ರಾಂತಿಯನ್ನು ಸೋಲಿಸಲು ಮತ್ತು ಅದರ ಬೆಂಬಲಕ್ಕೆ ನಿಂತ ಸೋವಿಯತ್ ಒಕ್ಕೂಟವನ್ನು ಹಣೆಯಲು ಅಮೆರಿಕನ್ ಸಾಮ್ರಾಜ್ಯಶಾಹಿ ಮುಸ್ಲಿಂ ಮೂಲಭೂತವಾದವನ್ನು ಹುಟ್ಟಿ ಹಾಕಿತ್ತು. ಆ ಮೇಲೆ ವಿಶ್ವವ್ಯಾಪ್ತಿಯಾದ ಮತ್ತು ಸೋವಿಯೆತ್ ಕುಸಿತದ ನಂತರ ಉಂಟಾದ ಜಾಗತಿಕ ರಾಜಕಾರಣದ ಪಲ್ಲಟಗಳಿಂದ ಗಟ್ಟಿಗೊಂಡ ಮುಸ್ಲಿಂ ಮೂಲಭೂತವಾದ ಕರಾವಳಿಯ ಕಡೆಯೂ ತನ್ನ ನೆಲೆಗಾಗಿ ಯತ್ನ ನಡೆಸತೊಡಗಿತ್ತು. ಇಲ್ಲಿನ ಹಿಂದೂತ್ವವಾದಿಗಳ ನಿರ್ಲಜ್ಜ ದಾಳಿಗಳು, ಪೊಲೀಸ್ ಇಲಾಖೆ, ಮಾಧ್ಯಮಗಳ ಕೋಮುವಾದೀಕರಣ, ಕಾಂಗ್ರೆಸ್ಸಿನ ವೈಫಲ್ಯ, ಎಡಶಕ್ತಿಗಳು ಕುಸಿತ ಮುಸ್ಲಿಂ ಕೋಮುವಾದದ ತೆಕ್ಕೆಗೆ ಅಲ್ಪಸಂಖ್ಯಾತ ಯುವಕರನ್ನು ಆಕರ್ಷಿಸುವಂತೆ ಮಾಡಿದವು. ಇವುಗಳಷ್ಟೇ ಮುಖ್ಯವಾದದ್ದು ಕರಾವಳಿಯ ಬಹಳ ದೊಡ್ಡ ಸಂಖ್ಯೆಯ ಬ್ಯಾರಿ ಯುವಕರು ಹದಿಹರೆಯ ವಯಸ್ಸಿನಲ್ಲೇ ಉದ್ಯೋಗವನ್ನರಿಸಿ ಕೊಲ್ಲಿ ರಾಷ್ಟ್ರಗಳಿಗೆ ತೆರಳಿರುವುದು ಕರಾವಳಿಯ ಬೆಳವಣಿಗೆಗಳು ಈ ಯುವಕರಲ್ಲಿ ಸಹಜವಾಗಿಯೇ ಆಕ್ರೋಶವನ್ನು ಸೃಷ್ಟಿಸತೊಡಗಿದವು. ಇನ್ನೊಂದೆಡೆ ಕೊಲ್ಲಿ ರಾಷ್ಟ್ರಗಳಲ್ಲಿ ಆಳವಾಗಿ ಬೇರು ಬಿಟ್ಟಿರುವ, ವ್ಯವಸ್ಥೆಯನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿರುವ `ಪರಿಶುದ್ಧ ಇಸ್ಲಾಂ’ ಘೋಷಣೆಯ ಕಟ್ಟರ್ ಮೂಲಭೂತವಾದಿ ವಹಾಬಿಸಂ ಕೂಡ ಗಲ್ಫ್‍ನಲ್ಲಿ ಉದ್ಯೋಗದಲ್ಲಿರುವ ಕರಾವಳಿಯು ಮುಸ್ಲಿಮರ ಮೇಲೆ ಒಂದಷ್ಟು ಪ್ರಭಾವವನ್ನು ಬೀರತೊಡಗಿದವು.
ಹೀಗೆ ಒಂದೆಡೆ `ಪರಿಶುದ್ಧ ಇಸ್ಲಾಂ’ ಬ್ಯಾನರಿನ ವಹಾಬಿಸಂ, ಇನ್ನೊಂದೆಡೆ ಆತ್ಮರಕ್ಷಣೆ, ಪ್ರತೀಕಾರ, ಸ್ವಾಭಿಮಾನದ ಹೆಸರಿನ ಸಮುದಾಯದ ಯುವಜನತೆಯ ಒಂದು ವಿಭಾಗವನ್ನು ಮುಸ್ಲಿಂ ಕೋಮುವಾದದ ಬಲೆಗೆ ಬೀಳುವಂತೆ ಮಾಡಿದೆ. ಇದರ ಪರಿಣಾಮ ಇಂದು ಕರಾವಳಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದು ಮುಸ್ಲಿಂ ಕೋಮುವಾದ ಪ್ರತಿರೋಧದ ದಾರಿಯನ್ನು ದಾಟಿ ರಾಜಕೀಯ ನೆಲೆಗಳನ್ನು ಹುಡುಕುತ್ತಿದೆ. ಥೇಟ್ ಸಂಘ ಪರಿವಾರದಂತೆಯೇ ವಿದ್ಯಾರ್ಥಿಗಳು, ಮಹಿಳೆಯರು, ಯುವಕರು, ಧಾರ್ಮಿಕ ನಾಯಕರು ಹೀಗೆ ಸಮುದಾಯದ ಎಲ್ಲಾ ವಿಭಾಗಗಳನ್ನು ವಿವಿಧ ಬ್ಯಾನರುಗಳಡಿ ಸಂಘಟಿಸುತ್ತಾ ಇಡೀ ಸಮುದಾಯವನ್ನು ನಿಯಂತ್ರಿಸಲು ಯತ್ನಿಸುತ್ತಿದೆ. ಇದರ ಅಪಾಯಗಳನ್ನು ಅರಿಯಲು ಕರಾವಳಿಯ ಜಾತ್ಯತೀತ ಶಕ್ತಿಗಳು, ಮುಸ್ಲಿಂ ಸಮುದಾಯದ ಮುಖ್ಯವಾಹಿನಿಯ ಸಂಘಟನೆಗಳು, ವಿಚಾರವಂತರು ವಿಫಲವಾಗಿರುವುದು ಕೋಮುವಾದದ ವಿರುದ್ಧ ಹೋರಾಟದ ಬಹುದೊಡ್ಡ ಕೊರತೆ. (ಜನಶಕ್ತಿಯಿಂದ)
* ಮುನೀರ್ ಕಾಟಿಪಳ್ಳ  ಮಂಗಳೂರು