ಡಿ 6ರ ಬಾಬರಿ ಧ್ವಂಸ ದಿನ ನಗರದಲ್ಲಿ ಕಾರ್ಯಕ್ರಮ ತಡೆಯಲು ಆಯುಕ್ತರಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ಆಗ್ರಹ

ಮಂಗಳೂರು : ಬಾಬರಿ ಮಸೀದಿ ಧ್ವಂಸಗೊಂಡ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡಿ 6ರಂದು ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಈ ದಿನದಂದು ಯಾವುದೇ ವಿಜಯೋತ್ಸವ, ಸಭೆ, ಸಮಾರಂಭ, ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಹೀಗಿದ್ದರೂ ನಗರದ ರಥಬೀದಿಯಲ್ಲಿ ನಡೆಯಲು ಉದ್ದೇಶಿಸಿರುವ ಅದ್ದೂರಿ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಕೋರಿ ಮಂಗಳೂರು ಮುಸ್ಲಿಂ ಸೆಂಟ್ರಲ್ ಕಮಿಟಿ ನಿಯೋಗ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.

“ಮಂಗಳೂರಿನ ರಥಬೀದಿಯ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿರುವ ರಸ್ತೆಯಲ್ಲಿ ವೇದಿಕೆಯನ್ನು ನಿರ್ಮಿಸಿ, ಪೂಜೆ, ಪುನಸ್ಕಾರದ ನೆಪದಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ದಿನದಂದೇ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ ಒಂದು ಸಮುದಾಯವನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಈ ಕಾರ್ಯಕ್ರಮವನ್ನು

ಆಯೋಜಿಸಲಾಗುತ್ತಿದೆ. ಹೀಗಾಗಿ ಈ ವಿಜಯೋತ್ಸವಕ್ಕೆ ಕಡಿವಾಣ ಹಾಕಬೇಕು” ಎಂದು ನಿಯೋಗವು ಮನವಿಯಲ್ಲಿ ತಿಳಿಸಿದೆ.

ಸಂಘದ ಅಧ್ಯಕ್ಷ ಅಲಿಹಸನ್, ಅಬ್ದುಲ್ ಅಝೀಜ್ ಕುದ್ರೋಳಿ, ಅಯ್ಯೂಬ್, ಮುನೀರ್ ಮುಕ್ಕಚ್ಚೇರಿ ಮೊದಲಾದವರು ಡಿಸಿಪಿ ಸಂಜೀವ್ ಪಾಟೀಲ್ ಅವರನ್ನು ಭೇಟಿಯಾದ ನಿಯೋಗದಲ್ಲಿದ್ದರು.