ಮ್ಯೂಸಿಕ್ ವಿಡಿಯೋದಲ್ಲಿ ಮಯೂರಿ

ಟೀವಿ ಸೀರಿಯಲ್ `ಅಶ್ವಿನಿ ನಕ್ಷತ್ರದ ಮೂಲಕ ಮನೆಮಾತಾದ ಮಯೂರಿ ಮತ್ತೆ ದೊಡ್ಡ ಪರದೆ ಮೇಲೂ ಕೆಲವು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಳು. ಈಗ ಆಕೆಯ ಮ್ಯೂಸಿಕ್ ವಿಡಿಯೋ ಒಂದು ಬರುತ್ತಿದೆ. `ಗರ್ಲ್ ನಾಟ್ ಎ ಸಿನ್’ ಎಂಬ ಮ್ಯೂಸಿಕ್ ವಿಡಿಯೋ ಇದಾಗಿದ್ದು ಈಗಾಗಲೇ ಇದರ ಟ್ರೇಲರ್ ರಿಲೀಸ್ ಆಗಿದೆ. ಕಂಪ್ಲೀಟ್ ವೀಡಿಯೋ ಮುಂದಿನ ವಾರ ಬಿಡುಗಡೆಯಾಗಲಿದೆ. ವಿಶಾಲ್ ಮೆಹ್ತಾ ಮತ್ತು ಅಬೇ ಈ ವಿಡಿಯೋ ನಿರ್ಮಿಸಿದ್ದು, ಶಾಂಘ್ವಿ ಭಾಯಣ ಈ ಹಾಡು ಹಾಡಿದ್ದಾರೆ. ಈ ವೀಡಿಯೋವನ್ನು ಪಟ್ಟಾಯದಲ್ಲಿ ಚಿತ್ರೀಕರಿಸಿದ್ದಾರೆ.

ಈ ಹಾಡಿನಲ್ಲಿ ನಮ್ಮ ಸಮಾಜದಲ್ಲಿ ಹುಡುಗಿಯರಿಗೆ ವಿಧಿಸುವ ಕಟ್ಟುಪಾಡುಗಳು ಹೈಲೈಟಾಗಿದೆ. ಈ ಬಗ್ಗೆ ಮಾತಾಡುತ್ತಾ ಮಯೂರಿ “ಹುಡುಗಿ ಎನ್ನುವ ಒಂದೇ ಕಾರಣಕ್ಕೆ ಆಕೆ ಕುಳಿತುಕೊಳ್ಳುವುದು, ಡ್ರೆಸ್ ಮಾಡಿಕೊಳ್ಳುವುದರಿಂದ ಹಿಡಿದು ಗೆಳೆಯರನ್ನು ಆಯ್ಕೆ ಮಾಡಿಕೊಳ್ಳುವವರೆಗೆ ಎಲ್ಲದಕ್ಕೂ ಒಂದು ಮಿತಿ ಹೇರಲಾಗುತ್ತದೆ. ನೈಟ್ ಪಾರ್ಟಿಗೆ ಹೋಗಲೂ ಅವಳಿಗೆ ಸ್ವಾತಂತ್ರ್ಯವಿಲ್ಲ. ಅದರ ಬಗ್ಗೆ ಬೆಳಕು ಚೆಲ್ಲುತ್ತಿರುವ ಈ ವೀಡಿಯೋವನ್ನು ನಾನು ಎಲ್ಲಾ ಯುವತಿಯರಿಗೆ ಅರ್ಪಿಸುತ್ತೇನೆ” ಎನ್ನುತ್ತಾಳೆ. ಈ ವೀಡಿಯೋ ಎಲ್ಲಾ ಯುವತಿಯರಿಗೆ ಇಷ್ಟವಾಗುತ್ತದೆ ಎನ್ನುವ ಭರವಸೆ ಮಯೂರಿ ಹೊಂದಿದ್ದಾಳೆ.