ಇಬ್ಬರು ಯುವಕರ ಕೊಲೆಗೆ ಯತ್ನ

ಕೊಲೆಯತ್ನಕ್ಕೀಡಾದ ನಿಫಾನ್

25 ಮಂದಿಯಿದ್ದ ಮರಳು ಮಾಫಿಯಾ ತಂಡದ ಕೃತ್ಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಇಬ್ಬರು ಯುವಕರನ್ನು ಅಡ್ಡಗಟ್ಟಿದ 25 ಮಂದಿಯ ತಂಡ, ಅವರನ್ನು ಸ್ಕೂಟರಿನಿಂದ ಕೆಳಕ್ಕೆ ಬೀಳಿಸಿ ಕೊಲೆಗೈಯ್ಯಲು ಯತ್ನಿಸಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಪುರದಲ್ಲಿ ಶನಿವಾರ ಸಂಭವಿಸಿದೆ.

ಕೊಲೆಯತ್ನಕ್ಕೊಳಗಾದವರನ್ನು ಬಂಡಿಕೊಟ್ಯ ನಿವಾಸಿ ನಿಫಾನ್ (21) ಮತ್ತು ಮುಕ್ಕಚ್ಚೇರಿ ನಿವಾಸಿ ಹನೀಫ್ (21)  ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಶರೀಫ್, ಇಮ್ತಿಯಾಝ್, ಆತುಫ್, ಇರ್ಷಾದ್, ಹಕೀಂ ಮತ್ತು ಇಬ್ಬರು ಸಹೋದರರ ಸಹಿತ 25 ಮಂದಿಯ ತಂಡ ಎಂದು ಗುರುತಿಸಲಾಗಿದೆ. ಆರೋಪಿಗಳು ತಲವಾರು, ದೊಣ್ಣೆ ಸೇರಿದಂತೆ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ.

ಕೊಲೆಯತ್ನಕ್ಕೀಡಾದ ಹನೀಫ್
ಕೊಲೆಯತ್ನಕ್ಕೀಡಾದ ಹನೀಫ್

ಇಲೆಕ್ಟ್ರಿಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಿಫಾನ್ ಮತ್ತು ಹನೀಫ್ ಕೆಲಸದ ನಿಮಿತ್ತ ಉಳ್ಳಾಲ ಕಡೆಗೆ ಆಕ್ಟೀವಾ ಸ್ಕೂಟರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಭಾಗದಿಂದ ಮರಳು ಹೇರಿಕೊಂಡು ಬಂದ ಲಾರಿ ಸ್ಕೂಟರಿಗೆ ಡಿಕ್ಕಿ ಹೊಡೆಸಿ ಇಬ್ಬರನ್ನು ಕೆಳಗೆ ಉರುಳಿಸಿದ್ದಾರೆ. ಬಳಿಕ ಅಲ್ಲೇ ಇದ್ದ ಆರೋಪಿಗಳ ತಂಡ ಮರದ ದೊಣ್ಣೆಯಿಂದ ಬಡಿದು ಕೊಲೆಗೆ ಯತ್ನಿಸಿದ್ದಾರೆ.  ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ದುಷ್ಕರ್ಮಿಗಳೆಲ್ಲರೂ ಪರಾರಿಯಾಗಿದ್ದಾರೆ. ಆರೋಪಿಗಳು ನಿಫಾನ್ ಜೇಬಿನಲ್ಲಿದ್ದ 25 ಸಾವಿರ ರೂ ಹಣವನ್ನೂ ದರೋಡೆಗೈದಿದ್ದಾರೆಂದು ಆರೋಪಿಸಲಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಲೆಯತ್ನದ ಆರೋಪಿ ಶರೀಫ್ ಯಾನೆ ಚಾರಕುಟ್ಟಿ ಹಿಂದಿನಿಂದಲೂ ಉಳ್ಳಾಲ ಭಾಗದಲ್ಲಿ ಹಲವು ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿ ಗುರುತಿಸಿಕೊಂಡಿದ್ದಾನೆ. ಇತ್ತೀಚೆಗೆ ಈತ ತನ್ನ ಮರಳು ವ್ಯವಹಾರದಲ್ಲಿ ಒಳ್ಳೆಯ ಆದಾಯ ಗಳಿಸಿಕೊಂಡಿದ್ದು, ಕೆಲ ಯುವಕರ ತಂಡವನ್ನು ಕಟ್ಟಿಕೊಂಡು ಸ್ಥಳೀಯವಾಗಿ ಜನಪ್ರಿಯನಾಗಲು ಹವಣಿಸುತ್ತಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.