ಗೆಲುವಿನ ನಾಗಾಲೋಟದಲ್ಲಿ ಮುಂಬೈ ಇಂಡಿಯನ್ಸ್

  • ಎಸ್ ಜಗದೀಶ್ಚಂದ್ರ ಅಂಚನ್ , ಸೂಟರಪೇಟೆ

ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಮುಂಬೈ ಇಂಡಿಯನ್ಸ್ ಐಪಿಎಲ್ ಟೂರ್ನಿಯಲ್ಲಿ ಸತತ ಐದನೇ ಜಯವನ್ನು ದಾಖಲಿಸಿಕೊಂಡಿದೆ.

ಇಂದೋರ್ ಹೋಳ್ಕರ್ ಮೈದಾನದಲ್ಲಿ ಗುರುವಾರ ನಡೆದ  ಟೂರ್ನಿಯ 22ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಬಲಾಡ್ಯ ಮುಂಬೈ  ಇಂಡಿಯನ್ಸ್  ಅದ್ಭುತ ಆಟದ ಮೂಲಕ ಎಂಟು ವಿಕೆಟ್ ಜಯ ಸಂಪಾದಿಸಿದೆ.

ಮೊದಲೆರಡು ಪಂದ್ಯಗಳ ಗೆಲುವಿನ ನಂತರ ಮೇಲಿಂದ ಮೇಲೆ ಎಡವುತ್ತಾ ಸಾಗಿದ ಪಂಜಾಬ್ ತಂಡ ನಿನ್ನೆಯ ಪಂದ್ಯದಲ್ಲಿ ಗ್ರೇಟ್ ಕಮ್ ಬ್ಯಾಕ್ ಮಾಡಿತು. ಸ್ಥಿರವಾದ ಬ್ಯಾಟಿಂಗ್ ಕೊರತೆಯನ್ನು  ನೀಗಿಸಿದ ಈ ಪಂದ್ಯದಲ್ಲಿ  ಹಶೀಮ್ ಆಮ್ಲ ಬಾರಿಸಿದ ಬರಸಿಡಿಲಿನ ಅಜೇಯ ಶತಕ (104  ರನ್) ಕಿಂಗ್ಸ್ ಪಂಜಾಬ್ ತಂಡಕ್ಕೆ ಹುರುಪಿನ  ಟಾನಿಕ್ ನೀಡಿತು. ಇವರ ಅಮೋಘ ಆಟದಿಂದಲೇ ಪಂಜಾಬ್ 198 ರನ್  ಸವಾಲಿನ ಮೊತ್ತವನ್ನು ಪೇರಿಸಿತು.

ಆದರೆ,  ಜಯದ ಮದದಲ್ಲಿದ್ದ  ಮುಂಬೈ ಇಂಡಿಯನ್ಸಗೆ ಕಿಂಗ್ಸ್ ಇಲೆವೆನ್ ನೀಡಿದ ಗೆಲುವಿನ ಟಾರ್ಗೆಟ್ ಸವಾಲೇ ಆಗಲಿಲ್ಲ. ಜೋಸ್ ಬಟ್ಲರ್ (77ರನ್) ಹಾಗೂ  ನಿತೀಶ್ ರಾಣಾ (ಅಜೇಯ 62 ರನ್) ಅವರಿಬ್ಬರ  ಅಬ್ಬರದ ಆಟ ಮುಂಬೈ ತಂಡದ ಗೆಲುವಿನ  ಹೈಲೈಟ್ಸ್ ಆಗಿತ್ತು.  ಇಂಗ್ಲೆಂಡ್  ಆಟಗಾರ ಜೋಸ್ ಬಟ್ಲರ್ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು.

ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ತನ್ನ  ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಮುಂಬೈ ಇಂಡಿಯನ್ಸ್ ಅನಂತರ ಜಯದ ಹಾದಿಯನ್ನು ಕಂಡುಕೊಂಡ ಪರಿ ದಿಗ್ಭ್ರಮೆಗೊಳಿಸುವಂತಹದು. ಒಂದು ಸೋಲಿನ ನಂತರ ಎಚ್ಚೆತ್ತುಕೊಂಡು ಮುಂಬೈ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದ ರೋಹಿತ್ ಶರ್ಮ ಈ ಬಾರಿಯ ಐಪಿಎಲ್ಲಿನಲ್ಲಿ ಗ್ರೇಟ್ ಕ್ಯಾಪ್ಟನ್ ಆಗಿಯೂ ಗುರುತಿಸಿಕೊಂಡಿದ್ದಾರೆ.

ಆತ್ಮಸ್ಥೈರ್ಯ ಕುಂದಿಸದ ಮುಂಬೈ ಇಂಡಿಯನ್ಸ್ ಸತತ ಗೆಲುವಿಗೆ ಪ್ರತಿಯೊಬ್ಬ ಆಟಗಾರರು ಸ್ಥಿರತೆ ಯಿಂದ ಆಟವಾಡಿದ್ದಾರೆ. ಅದರಲ್ಲೂ ದೆಹಲಿಯ ಎಡಗೈ ಬ್ಯಾಟ್ಸ್ ಮ್ಯನ್ ನಿತೀಶ್ ರಾಣಾ ಅಮೋಘ ಲಯದಲ್ಲಿರುವುದು ಮುಂಬೈ ತಂಡಕ್ಕೆ ವರವಾಗಿ ಪರಿಣಮಿಸಿದೆ. ಆಡಿರುವ ಆರು ಪಂದ್ಯಗಳಿಂದ 255 ರನ್ ಸಂಪಾದಿಸಿಕೊಂಡಿರುವ ನಿತೀಶ್ ಆರೆಂಜ್ ಕ್ಯಾಪನ್ನು ನಿನ್ನೆಪಡೆದುಕೊಂಡಿದ್ದಾರೆ.                                                      ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರಲ್ಲಿದ್ದ ಆರೆಂಜ್ ಕ್ಯಾಪ್ ನಿನ್ನೆಯ ಪಂದ್ಯದಲ್ಲಿ ನಿತೀಶ್ ರಾಣಾ ಅವರ ಕೈವಶವಾಗಿದೆ. ಕ್ರಿಕೆಟ್ ದಿಗ್ಗಜರ ನಡುವೆ ಈ ಉದಯೋನ್ಮುಖ ಆಟಗಾರ ಮುಂಬೈ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿ ಗುರುತಿಸಿಕೊಂಡಿರುವುದು ಅದ್ಭುತ ಸಾಧನೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮತ್ತೆ ಮತ್ತೆ ಸೋಲನ್ನು ಕಾಣುತ್ತಿರುವುದು ತಂಡದ ನಾಯಕನಲ್ಲಿ ಆತಂಕವನ್ನು ಮೂಡಿಸಿದೆ. ಮೊದಲ ಬಾರಿಗೆ ಪಂಜಾಬ್ ತಂಡವನ್ನು ಮುನ್ನಡೆಸುತ್ತಿರುವ ಗ್ಲೆನ್ ಮ್ಯಾಕ್ಸವೆಲ್ ಮುಂದಿನ ಪಂದ್ಯಗಳಲ್ಲಾದರೂ ತನ್ನ ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ತುಂಬಬೇಕು. ಇಲ್ಲವಾದರೆ ಮುಂದಿನ ಪಂದ್ಯಗಳಲ್ಲೂ ಸೋಲು ಕಟ್ಟಿಟ್ಟ ಬುತ್ತಿ.

ಅಂತೂ ಎರಡು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್  ಈ ಬಾರಿ ರೋಹಿತ್ ಶರ್ಮ ಸಾರಥ್ಯ ದಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. ಈಗಾಗಲೇ ಆಡಿರುವ ಆರು ಪಂದ್ಯಗಳ ಪೈಕಿ ಐದನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್  ಗೆಲುವಿನ ನಾಗಲೋಟದಲ್ಲಿದೆ. ಹತ್ತು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್  ಮೊದಲ ಸ್ಥಾನದಲ್ಲಿದೆ.