ಮುಲ್ಕಿ ರೈಲ್ವೇ ನಿಲ್ದಾಣ ಸೇತುವೆ ಅಪಾಯದಲ್ಲಿ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿಗೆ ಸಮೀಪದ ಕೆ ಎಸ್ ರಾವ್ ನಗರ ಬಳಿಯ ರೈಲ್ವೇ ಸೇತುವೆ ಅಪಾಯದ ಅಂಚಿನಲ್ಲಿದೆ. ಮುಲ್ಕಿ ರೈಲ್ವೇ ನಿಲ್ದಾಣಕ್ಕೆ ಹೋಗುವ ಸೇತುವೆಯಲ್ಲಿ ಭಾರೀ ಗಾತ್ರದ ಹೊಂಡಗಳು ಬಿದ್ದಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೊಂಡದಲ್ಲಿ ಕಾಂಕ್ರೀಟು ಎದ್ದು ಹೋಗಿದ್ದು, ಕಬ್ಬಿಣದ ಸರಳುಗಳು ಕಾಣುತ್ತಿದೆ.ಭಾರೀ ಮಳೆ ಬಂದರೆ ಹೊಂಡದಲ್ಲಿ ನೀರು ನಿಂತು ಪ್ರಯಾಣವು ತ್ರಾಸದಾಯಕವಾಗುತ್ತದೆ. ರೈಲ್ವೇ ಸೇತುವೆಯ ಇಕ್ಕೆಲಗಳಲ್ಲಿ ಮರಗಿಡಗಳು ಬೆಳೆದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ರಸ್ತೆಯಲ್ಲಿ ದಾರಿದೀಪದ ಅವ್ಯವಸ್ಥೆ ಇದ್ದು, ಪಂಚಾಯತಿ ನಿರ್ಲಕ್ಷ್ಯ ವಹಿಸುತ್ತಿದೆ. ಕೆಲ ವರ್ಷಗಳ ಹಿಂದೆ ಕೆ ಎಸ್ ರಾವ್ ನಗರದಿಂದ ಕೆಂಚನಕೆರೆ ಮೂಡಬಿದ್ರೆ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ರೈಲ್ವೇ ನಿಲ್ದಾಣ ರಸ್ತೆ ತೀವ್ರ ಕೆಟ್ಟು ಹೋಗಿದ್ದನ್ನು ಶಾಸಕರ ನೇತೃತ್ವದಲ್ಲಿ ದುರಸ್ತಿ ಮಾಡಿದ್ದರೂ ರೈಲ್ವೇ ಸೇತುವೆ ನಾದುರಸ್ತಿಯಲ್ಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೂಡಲೇ ರೈಲ್ವೇ ಇಲಾಖೆಯ ಅಧಿಕಾರಿಗಳು ಅಪಾಯ ಸಂಭವಿಸುವ ಮೊದಲೇ ಎಚ್ಚೆತ್ತು ಸೇತುವೆಯನ್ನು ದುರಸ್ತಿಗೊಳಿಸಲು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.