ಮುಲ್ಕಿ ರಿಜಿಸ್ಟ್ರಾರ್ ಕಚೇರಿ ಅವ್ಯವಸ್ಥೆಗೆ ಗ್ರಾಹಕರು ಕಂಗಾಲು : ಕಂಪ್ಯೂಟರ್ ಸಿಬ್ಬಂದಿ ತರಾಟೆಗೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನದವರೆಗೂ ಕಂಪ್ಯೂಟರ್ ಕೈಕೊಟ್ಟು ಜಮೀನು ಪರಭಾರೆ ಸಹಿತ ಇನ್ನಿತರ ಕೆಲಸಕ್ಕೆ ಟೋಕನ್ ಪಡೆದುಕೊಂಡ ಗ್ರಾಹಕರು ಕಂಗಾಲಾಗಿ ಕಂಪ್ಯೂಟರ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸೋಮವಾರದಿಂದ ಮಂಗಳವಾರದವರೆಗೆ ಕಂಪ್ಯೂಟರ್ ಕೈಕೊಟ್ಟರೂ ಗುತ್ತಿಗೆ ವಹಿಸಿಕೊಂಡ ಸಿಬ್ಬಂದಿ ಮೌನವಾಗಿರುವುದನ್ನು ಕಂಡ ಗ್ರಾಹಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಕಂಪ್ಯೂಟರ್ ದುರಸ್ತಿ ಮಾಡುವಂತೆ ಸೂಚಿಸಿದರು. ಕೂಡಲೇ ಇಬ್ಬರು ಸಿಬ್ಬಂದಿ ಹಾಳಾದ ಕಂಪ್ಯೂಟರ್ ಸಮೇತ ಉಡುಪಿಗೆ ಹೋಗಿ ಮಧ್ಯಾಹ್ನ ಮುಲ್ಕಿಗೆ ವಾಪಸ್ಸಾಗಿದ್ದು, ಗ್ರಾಹಕರ ಜಮೀನು ಪರಭಾರೆ ಸಹಿತ ಇನ್ನಿತರ ಕೆಲಸ ಪ್ರಾರಂಭವಾಗಿದೆ. ಸೋಮವಾರ ಸುಮಾರು 49 ಮಂದಿಗೆ ಟೋಕನ್ ನೀಡಿದ್ದು, ಮಂಗಳವಾರ ಮಧ್ಯಾಹ್ನ ಕಂಪ್ಯೂಟರ್ ಸರಿಯಾದ ಬಳಿಕ ಸಂಜೆ ವೇಳೆಗೆ ಸುಮಾರು 15 ಕೂಪನ್ ವಿತರಿಸಲಾಗಿದೆ ಎಂದು ಗ್ರಾಹಕರು ತಿಳಿಸಿದ್ದಾರೆ.

ಮೊದಲೇ ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿ ಓಬಿರಾಯನ ಕಾಲದಂತಿದ್ದು, ಕಂಪ್ಯೂಟರ್ ಕೂಡ ಹಳೆಯದಾಗಿದೆ. ಕೂಡಲೇ ದುರಸ್ತಿಪಡಿಸಲು ಸೂಚನೆ ನೀಡುವಂತೆ ಸ್ಥಳೀಯರು ಮುಲ್ಕಿ ಶಾಸಕ ಅಭಯಗೆ ದೂರು ನೀಡಿದ್ದಾರೆ.