ಅಪಾಯದಲ್ಲಿ ಮುಲ್ಕಿ ಬಹುಮಹಡಿ ಕಟ್ಟಡ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಬಸ್ ನಿಲ್ದಾಣದ ಬಳಿ ಬಹುಮಹಡಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಟ್ಟಡ ವಾಲುವ ಸ್ಥಿತಿಯಲ್ಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೆದ್ದಾರಿ ಅಗಲೀಕರಣದ ನಿಮಿತ್ತ ಮುಲ್ಕಿ ಬಸ್ ನಿಲ್ದಾಣದ ಬಳಿ ನೂರ್ ಕಾಂಪ್ಲೆಕ್ಸ್ ಕಟ್ಟಡದ ಎದುರು ಭಾಗವನ್ನು ತೆರವುಗೊಳಿಸುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರು. ಅದರಂತೆ ಸುಮಾರು 5 ಅಂತಸ್ತಿನ ಕಟ್ಟಡದ ಎದುರು ಭಾಗವನ್ನು ಒಳಗಿನಿಂದ ಪಿಲ್ಲರ್ ಜೋಡಿಸಿ ತೆಗೆಯುತ್ತಿದ್ದು, ಕಟ್ಟಡದ ಒಂದು ಪಾಶ್ರ್ವ ಕುಸಿದು ಅಪಾಯಕಾರಿ ಹಂತಕ್ಕೆ ತಲುಪಿದೆ.

ಕಟ್ಟಡ ಕುಸಿದರೆ ಭಾರೀ ಅನಾಹುತ ಸಂಭವಿಸಲಿದ್ದು, ಮುಲ್ಕಿ ಬಸ್ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಗೆ ಹೊಂದಿಕೊಂಡೇ ಕಾಮಗಾರಿ ನಡೆಸಲಾಗುತ್ತಿದೆ. ಈಗಾಗಲೇ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಸರ್ವೀಸ್ ರಸ್ತೆಯಲ್ಲಿ ಕಟ್ಟಡ ಸಾಮಗ್ರಿಗಳನ್ನು ಹಾಕುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಮುಲ್ಕಿ ನಗರ ಪಂಚಾಯತ ಅಧ್ಯಕ್ಷ ಸುನಿಲ್ ಆಳ್ವ, ಮುಖ್ಯಾಧಿಕಾರಿ ಮಂಗಳವಾರ ಸ್ಥಳಕ್ಕೆ ಧಾವಿಸಿ ಕಟ್ಟಡ ಮಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ಮುಲ್ಕಿ ಪರಿಸರದ ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳಕ್ಕೆ ಈಗಾಗಲೇ ಸಿದ್ಧರಾಗಿರುವಂತೆ ಸೂಚಿಸಲಾಗಿದೆ ಎಂದು ಸುನಿಲ್ ಆಳ್ವ ತಿಳಿಸಿದ್ದಾರೆ.