ಗುತ್ತಕಾಡು ರಸ್ತೆಯಲ್ಲಿ ತ್ಯಾಜ್ಯ : ಸ್ಥಳೀಯರಿಂದ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

 ಮುಲ್ಕಿ  : ಕಿನ್ನಿಗೋಳಿಯಿಂದ ಗುತ್ತಕಾಡು-ಕೊಲ್ಲೂರುಪದವು ರಸ್ತೆಯಲ್ಲೇ ಗುತ್ತಿಗೆಗೆದಾರರೊಬ್ಬರು ಟಿಪ್ಪರಿನಲ್ಲಿ ತ್ಯಾಜ್ಯ ಮಣ್ಣು ಸುರಿದ ಘಟನೆ ಶನಿವಾರ ಸಂಜೆ ನಡೆದಿದೆ. ಸ್ಥಳೀಯ ಗುತ್ತಿಗೆದಾರ ತೌಪೀಕ್ ರೋಡ್ ಲೈನ್ಸ್ ಮಾಲಿಕ ಅಬೂಬಕ್ಕರ್ ಎಂಬಾತನ ಟಿಪ್ಪರಿನಲ್ಲಿ ಬಂದ ತ್ಯಾಜ್ಯ ಮಣ್ಣು ರಸ್ತೆಯಲ್ಲೇ ಹಾಕಿ ಹೋಗಿದ್ದಾರೆ ಎಂದು ಸ್ಥಳೀಯ ಪಂಚಾಯತಿ ಸದಸ್ಯ ಪ್ರಕಾಶ್ ಎಳತ್ತೂರು ಆರೋಪಿಸಿದ್ದಾರೆ. ಕಿನ್ನಿಗೋಳಿ ಗುತ್ತಗಾಡು- ಕೊಲ್ಲೂರುಪದವು ನಡು ರಸ್ತೆಯಲ್ಲೇ ತ್ಯಾಜ್ಯ ಮಣ್ಣು ಸುರಿದ ಗುತ್ತಿಗೆದಾರ ಅಬೂಬಕ್ಕರ್ ಅವರನ್ನು ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡಾಗ ಆತ ಉಢಾಫೆಯಾಗಿ ವರ್ತಿಸಿದ್ದಾನೆ ಎಂದು ಪ್ರಕಾಶ್ ಹೆಗ್ಡೆ ಆರೋಪಿಸಿದ್ದಾರೆ.

ರಸ್ತೆಯಲ್ಲೇ ತ್ಯಾಜ್ಯ ಸುರಿದಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು ಬಳಿಕ ಸ್ಥಳೀಯರು ರಸ್ತೆ ತಡೆಯನ್ನು ತೆರವುಗೊಳಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಈ ಭಾಗದ ರಸ್ತೆ ತೀವ್ರ ಹದಗೆಟ್ಟಿದ್ದು ರಸ್ತೆ ಸರಿಪಡಿಸುವ ಜನಪ್ರತಿನಿಧಿಗಳು ನಾಪತ್ತೆಯಾಗಿದ್ದಾರೆ ಹಾಗೂ ರಸ್ತೆ ಬದಿಯಲ್ಲಿ ಎಲ್ಲೆಲ್ಲಿಂದಲೋ ತ್ಯಾಜ್ಯ ತಂದು ಸುರಿಯಲಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸರಿಗೆ ಹಾಗೂ ಕಿನ್ನಿಗೋಳಿ ಪಂಚಾಯತಿಗೆ ದೂರಲಾಗುವುದು ಎಂದು ತಿಳಿಸಿದ್ದಾರೆ.