ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾದ ಮುಸ್ಲಿಂ ಯುವಕರ ಬಿಜೆಪಿ ಸೇರ್ಪಡೆ

ಮುಸ್ಲಿಂ ಯುವಕರು ಬಿಜೆಪಿ ಸೇರ್ಪಡೆಗೊಂಡ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹರಿದಾಡಿದ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕಿನ ಲೊರೆಟ್ಟೊಪದವು ಎಂಬಲ್ಲಿನ ಕೆಲ ಮುಸ್ಲಿಂ ಯುವಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಇದು ಮುಸ್ಲಿಮರ ಎರಡು ಗುಂಪುಗಳ ನಡುವೆ ಸಾಮಾಜಿಕ ತಾಣಗಳಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ವೇದಿಕೆ ಒದಗಿಸಿಕೊಟ್ಟ ವಿಲಕ್ಷಣ ಘಟನೆ ಮಂಗಳವಾರ ನಡೆದಿದೆ.

ಬಂಟ್ವಾಳ ಸಮೀಪದ ಲೊರೆಟ್ಟೊ ಪದವು ಎಂಬಲ್ಲಿ ಕೆಲ ಮುಸ್ಲಿಂ ಯುವಕರು ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎನ್ನಲಾಗಿದ್ದು, ಇದು ಸಚಿತ್ರವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಮಂಗಳವಾರ ಮಧ್ಯಾಹ್ನದಿಂದ ಹರಿದಾಡತೊಡಗಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಸುನ್ನೀ ಮುಸ್ಲಿಮರ ಒಂದು ಗುಂಪು ಇದೇ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಲೊರೆಟ್ಟೊಪದವು ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ ಎಂಬ ಒಕ್ಕಣೆಯುಳ್ಳ ಬರಹಗಳು ರಾರಾಜಿಸತೊಡಗಿದವು. ಇದು ದಿನವಿಡೀ ಎಸ್ಸೆಸ್ಸೆಫ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾಯಿತು. ಬಳಿಕ ಲೊರೆಟ್ಟೊಪದವು ಎಸ್ಕೆಎಸ್ಸೆಸ್ಸೆಫ್ ಕಾರ್ಯದರ್ಶಿ ಅವರು ಇಲ್ಲಿನ ಯಾವುದೇ ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿರುವ ಯುವಕರಿಗೂ ಸಮಸ್ತ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಸಾಮಾಜಿಕ ತಾಣಗಳಲ್ಲಿಯೇ ಸ್ಪಷ್ಟನೆ ನೀಡಿದರು. ಬಳಿಕ ಆರೋಪ-ಪ್ರತ್ಯಾರೋಪ ಪೋಸ್ಟುಗಳಿಗೆ ಕಡಿವಾಣ ಬಿದ್ದಿದೆ.