ನಗರವನ್ನು ಸ್ಮಾರ್ಟ್ ಸಿಟಿ ಮಾಡುವತ್ತ ಮೂಡಾ ಹೊಸ ಅಧ್ಯಕ್ಷ ಬಲ್ಲಾಳರ ದೃಷ್ಟಿ

ಸುರೇಶ್ ಬಳ್ಳಾಲ್

ಮಂಗಳೂರು : ಮಂಗಳೂರು ನಗರ ಅಭಿವೃದ್ದಿ ಪ್ರಾಧಿಕಾರಕ್ಕೆ ಎರಡನೇ ಬಾರಿಗೆ ಆಯ್ಕೆಯಾದ ನೂತನ ಅಧ್ಯಕ್ಷ ಸುರೇಶ್ ಬಳ್ಳಾಲ್, ನಗರವನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೊಂಡೊಯ್ಯಲು  ಹೆಚ್ಚಿನ ಅಭಿವೃದ್ದಿ ಕೈಗೊಳ್ಳುವ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದಾರೆ.

ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “ನಗರವು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ದಿ ಹೊಂದಲು ನಗರದಲ್ಲಿ ನೈರ್ಮಲ್ಯವಿರಬೇಕು, ನಗರದಲ್ಲಿ ಹಸಿರು ಗಿಡಗಳು ಕಂಗೊಳಿಸಬೇಕು, ಜೊತೆಗೆ ರಸ್ತೆಗಳ ಅಭಿವೃದ್ದಿ ಮತ್ತು ಕೈಗಾರಿಕಾ ಅಭಿವೃದ್ದಿಗೆ ಮೂಲಭೂತ ಸಲಕರಣೆಗಳನ್ನು ಒದಗಿಸುವುದು ಇವೇ ಮೊದಲಾದುವುಗಳಿಗೆ ಆದ್ಯತೆ ನೀಡಲಾಗುವುದು” ಎಂದು ಅವರು ಹೇಳಿದ್ದಾರೆ.  ನೆನೆಗುದಿಗೆ ಬಿದ್ದಿರುವ ಹಲವು ವರ್ಷಗಳ ಬೇಡಿಕೆಯಾದ ಚೇಲಾರಪದವು ಮತ್ತು ದೇರಳಕಟ್ಟೆ ಲೇಔಟ್ ವಿವಾದವನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ.

ಆಶ್ಚರ್ಯ

“ಮೂಡಾ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾಗಿರುವುದಕ್ಕೆ ಆಶ್ಚರ್ಯವಾಗಿದೆ, ಏಕೆಂದರೆ ನಾನು ಈ ಹುದ್ದೆಯ ಆಕಾಂಕ್ಷಿಯಾಗಿರಲಿಲ್ಲ. ನಾನು ರಾಜ್ಯ ಮಟ್ಟದ ಬೋರ್ಡು ಅಥವಾ ಕಾರ್ಪೋರೇಷನ್ ಅಧ್ಯಕ್ಷತೆಯ ಆಕಾಂಕ್ಷಿಯಾಗಿದ್ದೆ. ಇದನ್ನು ಮುಖಂಡರಲ್ಲಿ ತಿಳಿಸಿದ್ದೆ. ಅಂತಹ ಐದು ಬೋರ್ಡು ಮತ್ತು ಕಾರ್ಪೋರೇಷನ್‍ಗಳಲ್ಲಿ ನನ್ನ ಪ್ರಾಮುಖ್ಯತೆಯನ್ನು ಪಟ್ಟಿ ಮಾಡಲಾಗಿತ್ತು. ಆದರೆ  ಇತ್ತೀಚಿನ ಆಯ್ಕೆಗಳಲ್ಲಿ ಶಾಸಕರನ್ನು ಆ ಬೋರ್ಡುಗಳಿಗೆ ಆಯ್ಕೆ ಮಾಡಲಾಗಿದೆ. ಮೂಡಾದಲ್ಲಿ ನನ್ನ ಅನುಭವವನ್ನು ಪರಿಗಣಿಸಿ ಮತ್ತೆ ನನ್ನನ್ನು ಆರಿಸಿದ್ದಾರೆ” ಎಂದು ಸುರೇಶ್ ಬಲ್ಲಾಳ್ ಹೇಳಿದ್ದಾರೆ.