ಮಂಗಳೂರಿನಲ್ಲಿ ಸೀಯಾಳಕ್ಕೀಗ ಭಾರೀ ಬೇಡಿಕೆ

ಮಂಗಳೂರು : ನಗರದಲ್ಲಿ ಬಿಸಿಲು ಸುಡತೊಡಗಿದೆ. ಈಗಾಗಲೇ ತಂಪು ಪಾನೀಯಗಳಿಗೆ ಭಾರೀ ಬೇಡಿಕೆ ಕುದುರಿದೆ. ಇನ್ನೊಂದೆಡೆ ಎಳನೀರಿಗೂ ಬೇಡಿಕೆ ಬಂದಿದೆ. ಈ ನಡುವೆ ಈ ತೆಂಗಿನ ಮರಗಳಿಗೆ ಬಾಧಿಸಿರುವ ಕೊಳೆರೋಗದಿಂದಾಗಿ ಫಸಲು ಕೈಕೊಟ್ಟಿದ್ದು ಕೃಷಿಕರು ಕಂಗಾಲಾಗಿದ್ದಾರೆ.

ಈ ಬಾರಿ ಮಳೆಯ ಕೊರತೆ, ಹವಾಮಾನ ವೈಪರೀತ್ಯ, ಫಸಲಿನಲ್ಲಿ ಇಳಿಕೆ ಕಂಡ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಎಳನೀರು ಬರುತ್ತಿಲ್ಲ. ಇದರಿಂದಾಗಿ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಎಳನೀರು ಕಡಿಮೆಯಾಗಿರುವುದರಿಂದ ಸಹಜವಾಗಿಯೇ ಬೆಲೆ ದುಪ್ಪಟ್ಟಾಗುತ್ತಿದೆ. ಇದೀಗ ತೆಂಗಿನಕಾಯಿಯನ್ನೂ ಕೇಜಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ದರವೂ ಗಗನಕ್ಕೇರಿದೆ. 20 ರೂ.ಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಇದೀಗ 40 ರೂಪಾಯಿ ಸನಿಹ ತಲುಪಿದೆ. 50 ರೂಪಾಯಿ ಖಂಡಿತ ಆಗುತ್ತದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು. ಅಲ್ಲದೆ ತೆಂಗಿನ ಎಣ್ಣೆ ಕೂಡಾ 120 ರೂ ಇದ್ದದ್ದು, 200ರ ಸನಿಹ ತಲುಪಿದೆ. ಎಳನೀರು ಬೇಡಿಕೆ ಇದ್ದಷ್ಟು ಪೂರೈಕೆ ಆಗದ ಕಾರಣ ದರವೂ ಹೆಚ್ಚಾಗಿದೆ.

ಒಂದು ಸೀಯಾಳ ದರ ಸಾಮಾನ್ಯವಾಗಿ 30ರಿಂದ 35 ಇರುತ್ತಿತ್ತು. ರಖಂ 16ರಿಂದ 20 ರೂ.ಗಳಿಗೆ ಸಿಗುತ್ತಿತ್ತು. ಈ ಬಾರಿ ಅದು 35 ರೂಪಾಯಿಗಿಂತಲೂ ಮೇಲೇರಿದೆ. ನಗರಕ್ಕೆ ಸೀಯಾಳ ಲಾರಿಯಲ್ಲಿ ತರುತ್ತಿರುವುದರಿಂದ ಖರ್ಚು ಕೂಡಾ ಹೆಚ್ಚಾಗಿದೆ. ಈ ನಡುವೆ ತಮಿಳುನಾಡಿನಿಂದ ಲಾರಿಗಟ್ಟಲೆ ಬರುತ್ತಿದ್ದ ಸೀಯಾಳವೂ ನಿಂತುಹೋಗಿದೆ. ಅಲ್ಲಿ ವಿದೇಶಿ ತಂಪು ಪಾನೀಯಗಳಿಗೆ ನಿಷೇಧ ಹೇರಿದ ಬಳಿಕ ಸೀಯಾಳಕ್ಕೆ ಸಖತ್ ಬೇಡಿಕೆ ಇದೆ. ಹೀಗಾಗಿ ಅಲ್ಲಿಂದ ಸೀಯಾಳ ಬರುತ್ತಿಲ್ಲ. ಅಲ್ಲದೆ ಊರಿನ ಗೆಂದಾಳಿಗೆ ಇಲ್ಲಿ ಸಖತ್ ಬೇಡಿಕೆ ಇದ್ದರೂ ಬೇಕಾದಷ್ಟು ಸಿಗುತ್ತಿಲ್ಲ. ದರ ಮಾತ್ರ 50ರ ಸನಿಹ ತಲುಪಿದೆ !

“ನಮ್ಮಂತಹ ಬಡ ವ್ಯಾಪಾರಿಗಳಿಗೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ. ಒಂದೆಡೆ ಎಳನೀರು ಸಿಗುತ್ತಿಲ್ಲ. ಇನ್ನೊಂದೆಡೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಬಂದಿದೆ. ಸೀಯಾಳ ಮಾರಾಟ ಮಾಡಿ ಜೀವನ ನಿರ್ವಹಣೆಯೂ ಇದೀಗ ಕಷ್ಟಕರವಾಗಿದೆ” ಎನ್ನುತ್ತಾರೆ ವ್ಯಾಪಾರಿ ಸಂತೋಷ್.