ರೆಡ್ ಹಾಕ್ಸ್ ಕುಡ್ಲ, ಕಾರ್ಕಳ ಗ್ಲೇಡಿಯೇಟರ್ಸ್, ಯುನೈಟೆಡ್ ಬೋಳಾರ ತಂಡಗಳಿಗೆ ಜಯ

ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಸಾದಿಕ್

ಎಂಪಿಎಲ್ ಕ್ರಿಕೆಟ್ ಟೂರ್ನಿ

  • ಎಸ್ ಜಗದೀಶ್ಚಂದ್ರ ಅಂಚನ್ ಸೂಟರಪೇಟೆ

ಮಂಗಳೂರು : ಬುಧವಾರ ನಡೆದ ಎಂಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರೆಡ್ ಹಾಕ್ಸ್ ಕುಡ್ಲ ತಂಡವು ಮೇಸ್ಟ್ರೋ ಟೈಟಾನ್ಸ್ ತಂಡವನ್ನು ಸೋಲಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಮೇಸ್ಟ್ರೋ ಟೈಟಾನ್ಸ್ ತಂಡವು ಅಕ್ಷಯ್ ಬಳ್ಳಾಲ್ ಅವರ ಆಕರ್ಷಕ ಆಟದಿಂದ ಮೂಡಿ ಬಂದ 81 ರನ್ ನೆರವಿನಿಂದ ನಿಗದಿತ 20 ಓವರುಗಳಲ್ಲಿ 174 ರನ್ ಗಳಿಸಿತು.

ಈ ಮೊತ್ತವನ್ನು ಬೆಂಬತ್ತಿದ ರೆಡ್ ಹಾಕ್ಸ್ ಕುಡ್ಲ ಆರಂಭಿಕ ಹಂತದಲ್ಲಿ ಎದುರಾಳಿ ತಂಡದ ಬಿಗು ಬೌಲಿಂಗಿಗೆ ನಡುಗಿ ತನ್ನ ಪ್ರಮುಖ ಆಟಗಾರರ ವಿಕೆಟುಗಳನ್ನು ಬೇಗನೆ ಕಳೆದುಕೊಂಡಿತು. ತಂಡದ ಮೊತ್ತ 10 ಓವರುಗಳಲ್ಲಿ 5 ವಿಕೆಟಿಗೆ 67 ರನ್ ಗಳಿಸಿತು. ಈ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಸ್ಥಳೀಯ ಆಟಗಾರ ಸಾದಿಕ್ ಎನ್ ಎಂ ತನ್ನ ತಂಡಕ್ಕೆ ಚೇತರಿಕೆ ನೀಡಿ 33 ಎಸೆತಗಳಲ್ಲಿ ಅಜೇಯ 77 ರನ್ ಬಾರಿಸಿದರು. ಇವರ ಅಜೇಯ ಆಟದಿಂದ ರೆಡ್ ಹಾಕ್ಸ್ ಕುಡ್ಲ ತಂಡವು 19.2 ಓವರುಗಳಲ್ಲಿ ಗೆಲುವನ್ನು ದಾಖಲಿಸಿಕೊಂಡಿತು. ಈ ಪಂದ್ಯದಲ್ಲಿ ಗೆಲುವಿನ ಆಟವಾಡಿದ ಸಾದಿಕ್ ಎನ್ ಎಂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಕಾರ್ಕಳ ತಂಡಕ್ಕೆ ಜಯ

ಬುಧವಾರ ನಡೆದ ಇನ್ನೊಂದು ಪಂದ್ಯದಲ್ಲಿ ಕಾರ್ಕಳ ಗ್ಲೇಡಿಯೇಟರ್ಸ್ ತಂಡ ಹಾಗೂ ಮೂಡುಬಿದಿರೆ ಟೀಂ ಎಲಿಗೆಂಟ್ ತಂಡಗಳು ಮುಖಾಮುಖಿಯಾಗಿತ್ತು. ಮೊದಲ ಪಂದ್ಯವನ್ನು ರೋಚಕವಾಗಿ ಗೆದ್ದಿರುವ ಕಾರ್ಕಳ ತಂಡ ಈ ಪಂದ್ಯದಲ್ಲಿ 4 ವಿಕೆಟುಗಳ ಜಯ ದಾಖಲಿಸಿಕೊಂಡಿತು.

ಮೂಡುಬಿದಿರೆ ತಂಡವು ಮೊದಲು ಬ್ಯಾಟಿಂಗ್ ನಡೆಸಿ 8 ವಿಕೆಟಿಗೆ 135 ರನ್ನುಗಳ ಸಾಧಾರಣ ಮೊತ್ತವನ್ನು ಗಳಿಸಿತು. ಮನೋಜ್ ಗಳಿಸಿದ 37 ರನ್ ಗರಿಷ್ಠ ಸ್ಕೋರ್. ಕಾರ್ಕಳ ತಂಡದ ಅಭಿಷೇಕ್ 30 ರನ್ನಿಗೆ 2 ವಿಕೆಟ್ ಪಡೆದರು.

ಕಾರ್ಕಳ ತಂಡದ ಮೊದಲ ಪಂದ್ಯದ ಹೀರೋ ಕೆ ಪಿ ಪವನ್ ಈ ಪಂದ್ಯದಲ್ಲೂ ಆಕರ್ಷಕ ಆಟವಾಡಿ 69 ರನ್ ಗಳಿಸಿದರು. ಇವರು ಈ ಪಂದ್ಯದಲ್ಲೂ ಪಂದ್ಯ ಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು

ಬೋಳಾರ ತಂಡಕ್ಕೆ ಗೆಲುವು

ಮಂಗಳವಾರ ತಡರಾತ್ರಿ ಯುನೈಟೆಡ್ ಉಳ್ಳಾಲ ಹಾಗೂ ಸ್ಟಾರ್ಕ್ ಎವೆಂಜರ್ಸ್ ಬೋಳಾರ ತಂಡಗಳ ಮಧ್ಯೆ ನಡೆದ ಪಂದ್ಯ ರೋಚಕ ಹೋರಾಟದಲ್ಲಿ ಕೊನೆಗೊಂಡಿತು.

ಮೊದಲು ಬ್ಯಾಟಿಂಗ್ ನಡೆಸಿದ ಯುನೈಟೆಡ್ ಉಳ್ಳಾಲ ತಂಡವು ಸಾದಿಕ್ ಕಿರ್ಮಾನಿಯವರ ಆಕರ್ಷಕ ಶತಕ (101)ದ ನೆರವಿನಿಂದ 175 ರನ್ನುಗಳ ದೊಡ್ಡ ಮೊತ್ತವನ್ನೇ ಗಳಿಸಿತು. ಈ ಪಂದ್ಯದಲ್ಲಿ ಖಂಡಿತವಾಗಿ ತಂಡ ಗೆಲುವು ಪಡೆಯುವುದೆಂಬ ವಿಶ್ವಾಸ ಉಳ್ಳಾಲ ಅಭಿಮಾನಿಗಳಲ್ಲಿತ್ತು.

ಆದರೆ, ಫಲಿತಾಂಶ ಮಾತ್ರ ಬೋಳಾರ ತಂಡದ ಪರವಾಯಿತು. ಉಳ್ಳಾಲ ತಂಡ ನೀಡಿದ ಗುರಿಗೆ

ಉತ್ತರವಾಗಿ ಬೋಳಾರ ತಂಡವು ಈ ಮೊತ್ತವನ್ನು ಸುಲಭವಾಗಿ ತಲುಪಿತು. ಧಿಕಾಂಕ್ಷು ಹಾಗೂ ಸ್ಟಾಲಿನ್ ಜೊತೆಯಾಟದಲ್ಲಿ ಪಂದ್ಯದ ಚಿತ್ರಣವೇ ಬದಲಾಯಿತು.

ಈ ಜೋಡಿಯು ಉಳ್ಳಾಲ ತಂಡದ ಬೌಲರುಗಳನ್ನು ದಂಡಿಸಿ ಮೂರನೇ ವಿಕೆಟಿಗೆ 150 ರನ್ನುಗಳ ಅಜೇಯ ಜೊತೆಯಾಟ ನೀಡಿ ತಂಡಕ್ಕೆ 8 ವಿಕೆಟುಗಳ ಜಯವನ್ನು ತಂದಿತ್ತಿತು. ಧಿಕಾಂಕ್ಷು 6 ಬೌಂಡರಿ, 4 ಸಿಕ್ಸರುಗಳ 76 ರನ್ ಮತ್ತು ಸ್ಟಾಲಿನ್ 6 ಸಿಕ್ಸರುಗಳ 82 ರನ್ನುಗಳನ್ನು ಬಾರಿಸಿದರು. ಇವರಿಬ್ಬರಿಗೆ ಜಂಟಿಯಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.