ಮೇಸ್ಟ್ರೋ, ಸ್ವಾರ್ಕ್ ಎವೆಂಜರ್ಸ್ ಬೋಳಾರ ತಂಡಕ್ಕೆ ರೋಚಕ ಜಯ

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಮಂಗಳೂರು : ನಗರದ ಪಣಂಬೂರು ಬಿ ಆರ್ ಆಂಬೇಡ್ಕರ್ ಕ್ರೀಡಾಂಗಣದಲ್ಲಿ ಜರಗುತ್ತಿರುವ ಮಂಗಳೂರು ಪ್ರೀಮಿಯರ್ ಕ್ರಿಕೆಟ್ ಟೂರ್ನಿಯ ಶುಕ್ರವಾರದ ಜರಗಿದ ಮೊದಲ ಪಂದ್ಯದಲ್ಲಿ ಕಂಕನಾಡಿ ನೈಟ್ ರೈಡರ್ಸ್ ಹಾಗೂ ಮೇಸ್ಟ್ರೋ ತಂಡಗಳ ನಡುವೆ ಮುಖಾಮುಖಿ ನಡೆಯಿತು. ಕಂಕನಾಡಿ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರರಾದ ರಾಜು ಭಟ್ಕಳ್-ನಿಶಿತ್ ರಾಜ್ ಜೋಡಿಯು ಮೊದಲ ವಿಕೆಟಿಗೆ ಓವರುಗಳಲ್ಲಿ 130 ರನ್ ಕಲೆಹಾಕಿದರು. ಇವರಿಬ್ಬರೂ ತಲಾ 66 ರನ್ ಗಳಿಸಿದರು. ಕಂಕನಾಡಿ ತಂಡವು ನಿಗದಿತ 20 ಓವರುಗಳಲ್ಲಿ 4 ವಿಕೆಟಿಗೆ 191 ರನ್ ಗಳಿಸಿತ್ತು.

ಈ ಗುರಿಯನ್ನು ಬೆನ್ನಟ್ಟಿದ ಮೇಸ್ಟ್ರೋ ತಂಡವು ಅಕ್ಷಯ್ ಬಲ್ಲಾಳ ಅವರ ಆಕರ್ಷಕ 69 ರನ್ನುಗಳ ಸಹಕಾರದಲ್ಲಿ ವಿಜಯದ ಗುರಿಗೆ ಲಗ್ಗೆ ಇಟ್ಟಿತ್ತು. ಕೊನೆಯ ಎರಡು ಓವರುಗಳಲ್ಲಿ ನಾಲ್ಕು ವಿಕೆಟುಗಳನ್ನು ಕಳೆದುಕೊಂಡ ಮೇಸ್ಟ್ರೋ ತಂಡವು ಒಂದು ಹಂತದಲ್ಲಿ ಆತಂಕದ ಪರಿಸ್ಥಿತಿಯನ್ನು ಎದುರಿಸಿತ್ತು. ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರಜತ್ ಕೊನೆಯಚೆಂಡು ಬಾಕಿ ಇರುವಂತೆ ವಿಜಯದ ಹೊಡೆತ ಹೊಡೆದು ತಂಡಕ್ಕೆ ಗೆಲುವನ್ನು ತಂದು ಕೊಟ್ಟರು. ಕೆ ಪಿ ಅಪ್ಪಣ್ಣ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ 37 ರನ್ನುಗಳಿಗೆ 4 ವಿಕೆಟುಗಳನ್ನು ಕಬಳಿಸಿದರು. ತಂಡದ ಗೆಲುವಿಗೆ ಕಾರಣರಾದ ಅಕ್ಷಯ್ ಬಲ್ಲಾಳರಿಗೆ ಪÀಂದ್ಯ ಶ್ರೇಷ್ಟ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಸ್ಪಾರ್ಕ್ ಎವೆಂಜರ್ಸಗೆ ಗೆಲುವು

ಗುರುವಾರ ತಡರಾತ್ರಿ ನಡೆದ ಪಂದ್ಯವು ಹೋರಾಟಕಾರಿ ಮುಕ್ತಾಯವನ್ನು ಕಂಡಿದೆ. ಈ ಪಂದ್ಯದಲ್ಲಿ ಸ್ಪಾರ್ಕ್ ಎವೆಂಜರ್ಸ್ ಬೋಳಾರ ತಂಡವು ಸುರತ್ಕಲ್ ಸ್ಟ್ರೈಕರ್ಸ್ ತಂಡವನ್ನು ರೋಮಾಂಚಕ ರೀತಿಯ ಹೋರಾಟದಲ್ಲಿ 3 ರನ್ ಅಂತರದಲ್ಲಿ ಸೋಲಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಸ್ಪಾರ್ಕ್ ತಂಡವು ಧಿಕಾಂಕ್ಷು ನೇಗಿ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಮುಡಿಬಂದ 64 ರನ್ ಹಾಗೂ ಕಾರ್ತಿಕ್ ಸಿ ಎ ಗಳಿಸಿದ 30 ರನ್ ನೆರವಿನಿಂದ 20 ಓವರುಗಳಲ್ಲಿ 7 ವಿಕೆಟಿಗೆ  141 ರನ್ ಸೇರಿಸಿತು. ಝೀಷನ್ ಅಲಿ ಮತ್ತು ಸಂದೀಪ್ ತಲಾ 2 ವಿಕೆಟುಗಳನ್ನು ಪಡೆದರು.

ವಿಜಯದಗುರಿಯನ್ನು ಬೆನ್ನಟ್ಟಿದ ಸುರತ್ಕಲ್ ತಂಡವು ಆರಂಭಿಕ ಮೂರು ವಿಕೆಟುಗಳನ್ನು ಬೇಗನೆ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಆಶೀಷ್ (45 ರನ್) ಮತ್ತು ಝೀಷನ್ ಅಲಿ (55 ರನ್) ಜೊತೆ ಆಟ ನೀಡಿ ತಂಡವನ್ನು ವಿಜಯ ಪಥದತ್ತ ಸಾಗಿಸಿದರು. ಕೊನೆಯ ಓವರಿನಲ್ಲಿ ಗೆಲುವಿಗೆ 8 ರನ್ ಅವಶ್ಯಕತೆ ಇತ್ತು. ಈ ಹಂತದಲ್ಲಿ ಸುರತ್ಕಲ್ ತಂಡವು 5 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಇದರಿಂದ ಸ್ಪಾರ್ಕ್ ಎವೆಂಜರ್ಸ್ ಬೋಳಾರ ತಂಡಕ್ಕೆ 3 ರನ್ನುಗಳ ರೋಚಕ ಗೆಲುವು ಪ್ರಾಪ್ತಿಯಾಯಿತು. ಧಿಕಾಂಕ್ಷು ನೇಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.