ಇಂದಿನಿಂದ ನಗರದಲ್ಲಿ `ಎಂಪಿಎಲ್’ ಹವಾ

* ಎಸ್ ಜಗದೀಶ್ಚಂದ್ರ
ಅಂಚನ್, ಸೂಟರಪೇಟೆ

ಮಂಗಳೂರಿನಲ್ಲಿ ಕ್ರಿಕೆಟ್ ಟೂರ್ನಿ ಎಂದಾಗಲೆಲ್ಲ ಪಕ್ಕನೇ `ಅಂಡರ್ ಆರ್ಮ್’ ಕ್ರಿಕೆಟ್ ಎನ್ನುವವರೇ ಹೆಚ್ಚು. ಏಕೆಂದರೆ ಮಂಗಳೂರಿನಲ್ಲಿ ವೀಕೆಂಡ್ ಕ್ರೀಡೆಯಾಗಿ `ಅಂಡರ್ ಆರ್ಮ್’ ಕ್ರಿಕೆಟನ್ನೇ ಹೆಚ್ಚು ಆಡಲಾಗುತ್ತಿದೆ. ಹಾಗಾಗಿ `ಅಂಡರ್ ಆರ್ಮ್’ ಕ್ರಿಕೆಟ್ ಇಲ್ಲಿ ಹೆಚ್ಚು ಪ್ರಚಲಿತ. `ಅಂಡರ್ ಆರ್ಮ್’ ಕ್ರಿಕೆಟ್ ನೆರಳಲ್ಲೇ ಓವರ್ ಆರ್ಮ್ ಕ್ರಿಕೆಟ್ ತನ್ನ ಅಸ್ತಿತ್ವವನ್ನು ಇಲ್ಲಿ ಉಳಿಸಿಕೊಂಡಿದೆ. `ಅಂಡರ್ ಆರ್ಮ್’ ಕ್ರಿಕೆಟಿನಿಂದಲೇ ಮುಂದೆ ಓವರ್ ಆರ್ಮ್ ಕ್ರಿಕೆಟಿನಲ್ಲೂ ಅನೇಕ ಪ್ರತಿಭಾನ್ವಿತ ಆಟಗಾರರು ಬೆಳಕಿಗೆ ಬಂದಿದ್ದಾರೆ.
ಮಂಗಳೂರು ಇಂದು ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲೂ ತನ್ನ ಛಾಪನ್ನು ಮೂಡಿಸಿದೆ. ಇಂದು ಟೀಮ್ ಇಂಡಿಯಾದಲ್ಲಿ ಆಡುತ್ತಿರುವ ಕೆ ಎಲ್ ರಾಹುಲ್ ಮಂಗಳೂರಿನವರು ಎನ್ನುವಾಗ ನಮಗೆ ಹೆಮ್ಮೆ ಎನಿಸುತ್ತದೆ. ಕೆ ಎಲ್ ರಾಹುಲ್ ಇಂದು ಟೀಮ್ ಇಂಡಿಯಾದಲ್ಲಿ ಮೂರು ಪ್ರಕಾರದ ಕ್ರಿಕೆಟಿಗೂ ಪರಿಪೂರ್ಣ ಆಟಗಾರನಾಗಿ ಬೆಳೆದಿದ್ದಾರೆ. ಇವರಂತೆ ಹಿಂದೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಆಟಗಾರರು ರಘುರಾಮ್ ಭಟ್, ವಿ ವಿ ಶಶಿಕಾಂತ್, ಸನತ್ ಕುಮಾರ್, ಶ್ಯಾಮ್ ಚಂದ್ರ ಭಟ್ ಮೊದಲಾದ ಕ್ರಿಕೆಟಿಗರು ಇದೇ ಮಂಗಳೂರಿನಿಂದ ತಮ್ಮ ಕ್ರಿಕೆಟ್ ಪಯಾಣವನ್ನು ಬೆಳೆಸಿ, ರಾಜ್ಯ, ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟ ಗಳಲ್ಲಿ ಗುರುತಿಸಿಕೊಂಡವರು.
ಇಂತಹ ಹಿನ್ನೆಲೆಯ ಕ್ರಿಕೆಟ್ ಪರಂಪರೆಯಲ್ಲಿ ಮಂಗಳೂರು ಸದಾ ಸುದ್ದಿಯಲ್ಲಿದೆ. ಈಗ ಮಂಗಳೂರು ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾಟದ ಮೂಲಕ ಮತ್ತೆ ಇಲ್ಲಿ ಕ್ರಿಕೆಟ್ ವಾತಾವರಣ ಆರೋಗ್ಯಕರವಾಗಿ ಬೆಳೆದಿದೆ. ಡಿಸೆಂಬರ್ 17ರಂದು ಎಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಅದ್ಧೂರಿಯ ಚಾಲನೆ ದೊರೆಯಲಿದೆ. ಸಂಘಟಕರು ಈ ಪಂದ್ಯಾಟವನ್ನು ಸುಲಲಿತವಾಗಿ ನಡೆಸುವ ಬಗ್ಗೆ ಕಾರ್ಯಯೋಜನೆಯನ್ನು ರೂಪಿಸಿಕೊಂಡಿದ್ದಾರೆ.
ಎಂಪಿಎಲ್ ಕ್ರಿಕೆಟ್ ಟೂರ್ನಿಯನ್ನು ಅಯೋಜಿಸಿರುವ ಕರ್ನಾಟಕ ರೀಜನಲ್ ಕ್ರಿಕೆಟ್ ಅಕಾಡೆಮಿಯಂತೂ ಈ ಟೂರ್ನಿಯನ್ನು ಸ್ಮರಣೀಯವನ್ನಾಗಿಸಲು ಸಕಲ ಯತ್ನ ನಡೆಸುತ್ತಿದೆ. ಹಸಿರು ಹುಲ್ಲಿನ ಆಸ್ಟ್ರೋ ಟರ್ಫ್ ಕ್ರಿಕೆಟ್ ಪಿಚ್ಚನ್ನು ತಯಾರಿಸಿ ಸ್ಪಿನ್ ಹಾಗೂ ವೇಗದ ಬೌಲಿಂಗಿಗೆ ಸಹಕರಿಸುವಂತೆ ಪಿಚ್ ಸಿದ್ಧಪಡಿಸಲಾಗಿದೆ. ನವೀನ ಸೌಲಭ್ಯಗಳ ಈ ಕ್ರಿಕೆಟ್ ಪಂದ್ಯಾಟದ ನೇರಪ್ರಸಾರ ಸ್ಥಳೀಯ ಚಾನೆಲ್ `ಯು4ಯು’ ಮತ್ತು `ನಮ್ಮ ಕುಡ್ಲ’ದಲ್ಲಿ ಪ್ರಸಾರ ಆಗಲಿದೆ. ಟೂರ್ನಿಯ ಕೊನೆಯ ಮೂರು ದಿನಗಳ ಪಂದ್ಯಗಳು ಡಿಡಿ ಸ್ಫೋಟ್ರ್ಸ್ ಚ್ಯಾನೆಲಿನಲ್ಲೂ ಪ್ರಸಾರಕ್ಕೆ ತಯಾರಿ ನಡೆಯತ್ತಿದೆ.

ಮೋಡಿ ಮಾಡಲಿರುವ ಅಜರುದ್ದೀನ್
ಅಲ್ಮುಝೈನ್ ವೈಟ್ ಸ್ಟೋನ್ ಎಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯನ್ನು ಇಂದು ಉದ್ಘಾಟನೆ ಮಾಡಲಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ನಂತರ ನಡೆಯುವ ಪ್ರದರ್ಶನ ಪಂದ್ಯದಲ್ಲಿ ಆಯೋಜಕರ ತಂಡದ ನಾಯಕತ್ವವನ್ನು ಕೂಡಾ ವಹಿಸಲಿದ್ದಾರೆ. ತುಳು ಚಿತ್ರ ತಾರೆಯ ಅರ್ಜುನ್ ಕಾಫಿಕಾಡ್ ಸಾರಥ್ಯದ ತಂಡವನ್ನು ಅಜರುದ್ದೀನ್ ತಂಡ ಎದುರಿಸುತ್ತಿದೆ. ಅಜರುದ್ದೀನ್ ಹೆಚ್ಚು ಕಡಿಮೆ ಎರಡು ದಶಕಗಳ ಬಳಿಕ ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯವನ್ನು ಆಡುತ್ತಿರುವುದರಿಂದ ಇವರ ಆಟ ಕ್ರಿಕೆಟ್ ಪ್ರಿಯರನ್ನು ಮೋಡಿ ಮಾಡಲಿದೆ.
ಅಂತೂ ಇನ್ನೂ 14 ದಿನಗಳ ಕಾಲ ಮಂಗಳೂರಿನಲ್ಲಿ ಎಂಪಿಎಲ್ ಟ್ವೆಂಟಿ-20 ಕ್ರಿಕೆಟ್ ಹವಾ. ಬಣ್ಣ ಬಣ್ಣದ ಧಿರಿಸುಗಳೊಂದಿಗೆ ಆಟಗಾರರು ಮೈದಾನಕ್ಕೆ ಆಗಮಿಸುವಾಗ ಕ್ರಿಕೆಟ್ ಪ್ರೇಮಿಗಳಲ್ಲಿ ರೋಮಾಂಚನವಾಗಲಿದೆ. ಭಾಗವಹಿಸುವ 12 ತಂಡಗಳು ಪ್ರಶಸ್ತಿ ಗೆಲುವಿಗಾಗಿ ಪೈಪೋಟಿ ನಡೆಸಲಿರುವುದರಿಂದ ಈ ಟೂರ್ನಿ ಮತ್ತಷ್ಟು ಮೆರುಗನ್ನು ಪಡೆಯಲಿದೆ.
ಪ್ರತಿ ಪಂದ್ಯವನ್ನು ರೋಚಕವನ್ನಾಗಿಸುವ ಉದ್ದೇಶದಿಂದ ಆಯೋಜಕರು ಆಟಗಾರರಿಗೆ ವಿಶೇಷ ಬಹುಮಾನಗಳನ್ನು ಘೋಷಿಸಿದ್ದಾರೆ. ಸರಣಿಶ್ರೇಷ್ಠ ಆಟಗಾರನಿಗೆ ಕಾರು ಹಾಗೂ ಫೈನಲ್ ಪಂದ್ಯದ `ಮ್ಯಾನ್ ಆಫ್ ದ ಮ್ಯಾಚ್’ ಆಟಗಾರನಿಗೆ ಬೈಕನ್ನೇರುವ ಅವಕಾಶ ಈ ಟೂರ್ನಿಯಲ್ಲಿದೆ. ಹಾಗಾಗಿ ಆಟಗಾರರ ನಡುವೆ ಪ್ರತಿ ಪಂದ್ಯದಲ್ಲೂ ಪೈಪೋಟಿ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.