ಮಂಗಳೂರಿನಲ್ಲಿ `ಎಂಪಿಎಲ್’ ಕ್ರಿಕೆಟ್ ಕಲರವ

  • ಎಸ್ ಜಗದೀಶ್ಚಂದ್ರ ಅಂಚನ್

ಸೂಟರಪೇಟೆ

ಮಂಗಳೂರಿನಲ್ಲಿ ಕ್ರಿಕೆಟಿಗೆ ಇರುವ `ಕ್ರೇಜ್’ ಬಹುಶಃ ಯಾವ ಕ್ರೀಡೆಗೂ ಇಲ್ಲ ಎನ್ನಬಹುದು. ಬೆಳಿಗ್ಗೆ ಹಾಗೂ ಸಂಜೆ ಮಂಗಳೂರಿನ ಯಾವುದೇ ಮೈದಾನಗಳು ಖಾಲಿ ಇರುವುದಿಲ್ಲ. ಕಾರಣ ಎಲ್ಲಿ ನೋಡಿದರೂ ಕ್ರಿಕೆಟ್ ಆಡುವುದನ್ನು ಕಾಣಬಹುದು. ಮೈದಾನಗಳು ಖಾಲಿ ಇಲ್ಲದಿದ್ದರೆ ಗಲ್ಲಿಗಲ್ಲಿಗಳಲ್ಲಿ ಕ್ರಿಕೆಟ್ ಆಡುವವರು ಇದ್ದಾರೆ. ಇಂತಹ ಕ್ರಿಕೆಟ್ ವಾತಾವರಣದಲ್ಲಿ ಕ್ರಿಕೆಟ್ ಟೂರ್ನಿಗಳು ಎಗ್ಗಿಲ್ಲದೆ ನಡೆಯುತ್ತಾ ಬಂದಿದೆ.

ಈಗ ಮಂಗಳೂರಿನಲ್ಲಿ ಅದ್ಧೂರಿಯ ಕ್ರಿಕೆಟ್ ಟೂರ್ನಿಗೆ ವೇದಿಕೆ ಸಜ್ಜುಗೊಂಡಿದೆ. ಕರ್ನಾಟಕ ರಿಜನಲ್ ಕ್ರಿಕೆಟ್ ಅಕಾಡೆಮಿಯ ಆಶ್ರಯದಲ್ಲಿ ಮಂಗಳೂರಿನ ಪಣಂಬೂರು ನವ ಮಂಗಳೂರು ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಎಂಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆಯೋಜನೆಯಾಗಿದೆ. ಡಿಸೆಂಬರ್ 17ರಿಂದ 30ರವರೆಗೆ ನಡೆಯುವ ಈ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಮಂಗಳೂರಿಗರಿಗೆ ಕ್ರಿಕೆಟ್ ರಸದೌತಣ ನೀಡಲಿದೆ. 14 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಒಟ್ಟು 35 ಪಂದ್ಯಗಳು ಆಡಲ್ಪಡಲಿವೆ.

cricket-2

ಎಂಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿವೆ. ಹಸಿರು ಹುಲ್ಲಿನ ಆಸ್ಟ್ರೋ ಟರ್ಫ್ ಕ್ರಿಕೆಟ್ ಪಿಚ್ಚಿನಲ್ಲಿ ನಡೆಯುವ ಈ ಟೂರ್ನಿ ಹೊನಲು ಬೆಳಕಿನಲ್ಲಿ ನಡೆಯಲಿದೆ. ರಾಜ್ಯ ಕ್ರಿಕೆಟ್ ತಂಡದಲ್ಲಿ ಹಾಗೂ ಕೆಪಿಎಲ್ ಪಂದ್ಯಗಳಲ್ಲಿ ಆಡಿರುವ ಅನುಭವಿ ಆಟಗಾರರು ಈ ಟೂರ್ನಿಯಲ್ಲಿ ಆಡುತ್ತಿರುವುದರಿಂದ ಪಂದ್ಯ ರೋಚಕತೆಯನ್ನು ಪಡೆಯಲಿದೆ.

ಹದಿನಾಲ್ಕು ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಆಡಲಾಗುವ 35 ಪಂದ್ಯಗಳ ಪೈಕಿ 30 ಪಂದ್ಯಗಳು ಲೀಗ್ ಹಂತದಾಗಿರುತ್ತದೆ. ಉಳಿದ ಐದು ಪಂದ್ಯಗಳು ಎಲಿಮಿನೇಟರ್, ನಾಕೌಟ್ ಹಂತದಾಗಿರುತ್ತದೆ. ಇಲ್ಲಿ ನಡೆಯುವ ಪ್ರತಿ ಪಂದ್ಯಗಳು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೀತಿ ನಿಯಮಾವಳಿಯಂತೆಯೇ ನಡೆಯಲಿದೆ. ರಾಜ್ಯ ಸಂಸ್ಥೆಯ ಅಧಿಕೃತ ಅಂಪಾಯರುಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಪಂದ್ಯಾಟಕ್ಕೆ ಹೆಚ್ಚಿನ ಘನತೆ ಬರಲಿದೆ.

ಉದ್ಘಾಟನೆಗೆ ಅಜರುದ್ದೀನ್

ಎಂಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಉದ್ಘಾಟಿಸಲಿದ್ದಾರೆ. ಅಲ್ಲದೆ ಹಲವು ಸ್ಟಾರ್ ಆಟಗಾರರು, ಚಿತ್ರನಟರು ಭಾಗವಹಿಸುತ್ತಿರುವುದರಿಂದ ಉದ್ಘಾಟನಾ ಸಮಾರಂಭ `ಕಲರ್ ಫುಲ್’ ಆಗಲಿದೆ. ಟೂರ್ನಿ ಉದ್ಘಾಟನೆ ನಂತರ ವೈವಿಧ್ಯಮಯ ಡ್ಯಾನ್ಸ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈಗಾಗಲೇ ಭಾರತ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಹಾಗೂ ಚಿತ್ರ ನಟ ಸುನೀಲ್ ಶೆಟ್ಟಿಯವರು `ಎಂಪಿಎಲ್’ನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಟೂರ್ನಿಗೆ ಹಾಗೂ ಆಟಗಾರರಿಗೆ ಶುಭ ಹಾರೈಸಿದ್ದಾರೆ. ಟೂರ್ನಿಯ ಉದ್ಘಾಟನೆ ಡಿಸೆಂಬರ್ 17ರ ಶನಿವಾರ ಅಪರಾಹ್ನ 4.30 ಗಂಟೆಗೆ ನಡೆಯಲಿದೆ.

ಆಯೋಜಕರು ವರ್ಸಸ್ ತುಳು ಫಿಲ್ಮ್ ಸ್ಟಾರುಗಳು

ಎಂಪಿಎಲ್ ಟೂರ್ನಿ ಅಧಿಕೃತವಾಗಿ ಡಿಸೆಂಬರ್ 18ರಂದು ಆರಂಭಗೊಂಡರೂ ಉದ್ಘಾಟನಾ ಪಂದ್ಯ ಡಿಸೆಂಬರ್ 17ರಂದು ನಡೆಯುತ್ತದೆ. ಈ ಉದ್ಘಾಟನಾ ಪಂದ್ಯದಲ್ಲಿ ಎಂಪಿಎಲ್ ಟೂರ್ನಿಯ ಆಯೋಜಕರ ತಂಡವು ತುಳು ಫಿಲ್ಮ್ ಸ್ಟಾರುಗಳ ತಂಡವನ್ನು ಎದುರಿಸಲಿದೆ. ಆಯೋಜಕರ ತಂಡದಲ್ಲಿ ಜಿಲ್ಲೆಯ ಸಚಿವರುಗಳು ಆಡುವ ನಿರೀಕ್ಷೆಯಿದೆ. ಹಾಗೆಯೇ ತುಳು ಫಿಲ್ಮ್ ಸ್ಟಾರುಗಳ ತಂಡವನ್ನು ಅರ್ಜುನ್ ಕಾಫಿಕಾಡ್ ಮುನ್ನಡೆಸಲಿದ್ದು, ಹಲವು ಚಿತ್ರ ತಾರೆಗಳು ಮೊದಲ ಬಾರಿಗೆ ಪ್ಯಾಡ್ ಕಟ್ಟಿ ಮೈದಾನಕ್ಕಿಳಿಯಲಿರುವರು. ಒಟ್ಟಿನಲ್ಲಿ ಈ ಉದ್ಘಾಟನಾ ಪಂದ್ಯ ಮನೋರಂಜನಾತ್ಮಕವಾಗಿ ನಡೆಯಲಿದೆ.

ಭಾಗವಹಿಸುವ ತಂಡಗಳು

ಎಂಪಿಎಲ್ ಟೂರ್ನಿಯಲ್ಲಿ 12 ತಂಡಗಳು ಭಾಗವಹಿಸುತ್ತಿವೆ. 1) ರೆಡ್ ಹಾಕ್ಸ್ ಕುಡ್ಲ, 2) ಟೀಮ್ ಎಲಿಗೆಂಟ್ ಮೂಡಬಿದ್ರೆ, 3) ಕಂಕನಾಡಿ ನೈಟ್ ರೈಡರ್ಸ್, 4) ಕರಾವಳಿ ವಾರಿಯರ್ಸ್ ಪಣಂಬೂರು, 5) ಕಾರ್ಕಳ ಗ್ಲೇಡಿಯೇಟರ್ಸ್, 6) ಪ್ರೆಸಿಡೆಂಟ್ ಸಿಕ್ಸರ್ಸ್ ಕುಂದಾಪುರ, (7) ಉಡುಪಿ ಟೈಗರ್ಸ್, (8) ಯುನೈಟೆಡ್ ಉಳ್ಳಾಲ, (9) ಸುರತ್ಕಲ್ ಸ್ಟ್ರೈಕರ್ಸ್, (10) ಕೋಸ್ಟಲ್ ಡೈಜೆಸ್ಟ್, (11) ಸ್ಟಾರ್ಕ್ ಎವೆಂಜರ್ಸ್ ಬೋಳಾರ, 12) ಮೆಸ್ಟೋ ಟೈಟಾನ್ಸ್.