ವೈದ್ಯರಿಗೆ ಹಲ್ಲೆ ಘಟನೆ ನಡೆದು 10 ದಿನ ಕಳೆದರೂ ಪೊಲೀಸರಿಗೆ ಸಿಗದ ಸಂಸದ

ಸಂಸದ ಅನಂತ

ಶಿರಸಿ ಕೋರ್ಟಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಕೆ

ನಮ್ಮ ಪ್ರತಿನಿಧಿ ವರದಿ
ಶಿರಸಿ : ಕಳೆದ 10 ದಿನದ ಹಿಂದೆ ಶಿರಸಿ ಟಿ ಎಸ್ ಎಸ್ ವೈದ್ಯರಿಗೆ ಸಂಸದ ಹಲ್ಲೆ ಮಾಡಿ ನಾಪತ್ತೆಯಾಗಿದ್ದು, ಇದೀಗ ಅವರ ಆಪ್ತರು ಶಿರಸಿ ಕೋರ್ಟಿನಲ್ಲಿ ಅವರ ಪರ ನ್ಯಾಯವಾದಿಗಳ ಮೂಲಕ ಜಾಮೀನು ಅರ್ಜಿ ಸಲ್ಲಿಸಿರುವದು ಬೆಳಕಿಗೆ ಬಂದಿದೆ.
ಜನವರಿ 2ರಂದು ಸಂಸದರ ತಾಯಿಯನ್ನು ಟಿ ಎಸ್ ಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಾಗ ಅಲ್ಲಿ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಸಂಸದ ಅನಂತ ಹೆಗಡೆ ಅಂದು ರಾತ್ರಿ ವೈದ್ಯರಾದ ಮಧುಕೇಶ್ವರ, ಬಾಲಚಂದ್ರ ಭಟ್ಟ ಹಾಗೂ ಸಿಬ್ಬಂದಿ ರಾಹುಲ ಮೇಲೆ ಹಲ್ಲೆ ನಡೆಸಿದ್ದರು. ನಂತರ ರಾಜೀಯಾದರೂ ಮರು ದಿನ ಟೀವಿ, ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾದ್ದರಿಂದ ರಾಜ್ಯ ಐಎಂಎ ಒತ್ತಡಕ್ಕೆ ಗೃಹಮಂತ್ರಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಸೂಚಿಸಿದಂತೆ 4 ದಿನದ ನಂತರ ಪ್ರಕರಣ ದಾಖಲಾಯಿತು.
ಕೇಸು ದಾಖಲಾಗುತ್ತಿದ್ದಂತೆ ಸಂಸದ ಅನಂತ ಹೆಗಡೆ, ಬಿಜೆಪಿ ಮುಖಂಡ ಕೃಷ್ಣ ಎಸಳೆ ಊರು ಬಿಟ್ಟಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಪ್ರಮುಖ ದಾಖಲೆಯಾದ ಸೀಸಿಟೀವಿ ಫೂಟೇಜನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ. ಈ ನಡುವೆ ಇದು ದೇಶ ಮಟ್ಟದಲ್ಲಿ ಸುದ್ದಿಯಾದ್ದರಿಂದ ಪ್ರಕರಣ ದಿನೇ ದಿನೇ ಗಂಭೀರವಾಗುತ್ತಿದೆ. ಈ ನಡುವೆ ಆರೋಗ್ಯ ಸಚಿವರು, ಇತರ ಪ್ರಮುಖರು ಘಟನೆಯನ್ನು ಖಂಡಿಸಿದ್ದಾರೆ.

ಕೋರ್ಟ್ ಮೊರೆ

ಇದೀಗ ಸಂಸದ ಅನಂತ ಹೆಗಡೆ ಹಾಗೂ ಮುಖಂಡ ಕೃಷ್ಣ ಎಸಳೆ ಅವರ ಪರ ವಕೀಲರು ಶಿರಸಿ ಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಶಿರಸಿಯಲ್ಲಿರುವ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರು ವಾರಕ್ಕೆ 2 ದಿನ ಮಾತ್ರ ಬರುವದರಿಂದ ಅವರು ಬಂದಾಗಲೇ ಅರ್ಜಿ ವಿಚಾರಣೆ ನಡೆಯುತ್ತದೆ. ಬಹುತೇಕ ಗುರುವಾರ ಜಾಮೀನು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಈ ವಾರ ಅರ್ಜಿ ವಿಚಾರಣೆ ಮುಗಿದರೆ ಮುಂದಿನ ವಾರ ಜಾಮೀನು ಸಿಗುತ್ತದೆಯೋ, ಇಲ್ಲವೋ ಎಂಬುದರ ಆದೇಶ ಹೊರಬೀಳಲಿದೆ.

ಅನಂತನ ಪತ್ತೆ ಹಚ್ಚಲು
ಪೊಲೀಸ್ ವೈಫಲ್ಯ

ಸಂಸದ ನಾಪತ್ತೆಯಾಗಿ ಇಷ್ಟೆಲ್ಲ ದಿನ ಕಳೆದರೂ ಅವರನ್ನು ಪತ್ತೆಹಚ್ಚದ ಉ ಕ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿನ ದ್ವಂದ್ವ ನಿಲುವಿನ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಚರ್ಚೆ ಶುರುವಾಗಿದೆ.
ಇಲ್ಲಿ ಶ್ರೀ ಸಾಮಾನ್ಯನಿಗೊಂದು ನ್ಯಾಯ, ಉಳ್ಳವರಿಗೊಂದು ನ್ಯಾಯವೇ ಎಂದು ಜನ ಪ್ರಶ್ನಿಸಲಾರಂಭಿಸಿದ್ದಾರೆ. ಸಾಮಾನ್ಯ ವ್ಯಕ್ತಿ ಹೀಗೆ ಮಾಡಿದ್ದರೆ ಪೊಲೀಸರು ಇಷ್ಟರಲ್ಲಾಗಲೇ ಆರೋಪಿಯ ಹೆಡೆಮುರಿ ಕಟ್ಟಿ ಮಾಧ್ಯಮದ ಮುಂದೆ ಪೋಸು ನೀಡುತ್ತಿದ್ದರು. ಆದರೆ ಈ ಘಟನೆಯಲ್ಲಿ ಸಂಸದನ ಪತ್ತೆಗೆ ತಾವೇನೂ ಕ್ರಮಕೈಗೊಂಡಿದ್ದೇವೆ ಎಂಬುದರ ಬಗ್ಗೆ ಪೊಲೀಸ್ ಅಧಿಕಾರಿಗಳು ಬಾಯೇ ಬಿಡುತ್ತಿಲ್ಲ. ಸಂಸದನನ್ನು ಬಂಧಿಸದೆ ಪೊಲೀಸರೇ ಅವರಿಗೆ ಜಾಮೀನು ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಮಾತೂ ಇದೀಗ ಕೇಳಿಬರುತ್ತಿದೆ.
ಹಿಂದಿನಿಂದಲೂ ಅನೇಕ ಗೊಂದಲದ ಹೇಳಿಕೆಗಳನ್ನು ನೀಡಿ ವಿವಾದಕ್ಕೀಡಾಗಿರುವ ಸಂಸದ ತನ್ನ ಅಂಗರಕ್ಷಕಗೆ ಯಾವುದೇ ಮಾಹಿತಿ ನೀಡದೆ ನಾಪತ್ತೆಯಾಗಲು ಸಾಧ್ಯವೇ, ಅಕಸ್ಮಾತ್ ಸಂಸದ ಯಾರಿಗೂ ಗೊತ್ತಾಗದ ಹಾಗೆ ತಲೆಮರೆಸಿಕೊಂಡಿದ್ದರೆ ಪೊಲೀಸ್ ಇಂಟಲಿಜೆನ್ಸ್ ವಿಭಾಗದ ಅಧಿಕಾರಿಗಳು ಜಿಲ್ಲೆಯಲ್ಲಿ ಏನು ಮಾಡುತ್ತಿದ್ದಾರೆ, ಜಿಲ್ಲೆಯಿಂದ ನಾಪತ್ತೆಯಾದ ಸಂಸದನನ್ನೇ ಪತ್ತೆಹಚ್ಚಲಾಗದ ಪೊಲೀಸರು ಅಣುಸ್ಥಾವರ, ಅನೇಕ ಡ್ಯಾಂ ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಭಯೋತ್ಪಾದಕರ ಚಲನವಲನಗಳನ್ನು ಪತ್ತೆ ಹಚ್ಚುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.