ಮುಲ್ಕಿ ಕೈಗಾರಿಕಾ ಮಂಡಳಿ ಅಧ್ಯಕ್ಷನಿಂದ ಸಂಸದ ನಳಿನ್ ಕುಮಾರ್ ತರಾಟೆಗೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕರ್ನಾಟಕ ಸರಕಾರದ ಕೈಗಾರಿಕಾ ಇಲಾಖೆಯಿಂದ ಕಾರ್ನಾಡ್ ಕೈಗಾರಿಕಾ ಪ್ರದೇಶ, ಕೊಲ್ನಾಡು, ಕೆ ಎಸ್ ರಾವ್ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹಾಗೂ ಒಳರಸ್ತೆಗಳ ಕಾಂಕ್ರೀಟೀಕರಣಕ್ಕೆ ಶಾಸಕ ಅಭಯಚಂದ್ರ ಶಿಫಾರಸ್ಸಿನ ಮೇರೆಗೆ ಸುಮಾರು ಎರಡು ಕೋಟಿ 90 ಲಕ್ಷ ರೂ ಬಿಡುಗಡೆಯಾಗಿದೆ ಎಂದು ಮುಲ್ಕಿ ನಗರ ಪಂಚಾಯತ್ ಸದಸ್ಯ ಬಿ ಎಂ ಆಸೀಫ್ ಹೇಳಿದರು.

ಕಳೆದ ಬಾರಿ ಸಂಸದ ನಳಿನ್ ಕಟೀಲು ಕಾಮಗಾರಿ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದರು, ಈ ಬಗ್ಗೆ ಏನಾಯಿತು ಎಂದು ಪರ್ತಕರ್ತರು ಕೇಳಿದ ಪ್ರಶ್ನೆಗೆ ಗರಂ ಆದ ಕೋಲ್ನಾಡು ಕೈಗಾರಿಕಾ ಸಂಘದ ಅಧ್ಯಕ್ಷ ಜಯ ಶೆಟ್ಟಿ, ಸಂಸದರನ್ನು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡು “ಕೊಲ್ನಾಡು ಕೈಗಾರಿಕಾ ಪ್ರದೇಶದ ಉದ್ಯಮಿಗಳು ಎದುರಿಸುತ್ತಿರುವ ಕಷ್ಟಗಳ ಕುರಿತು ಅನೇಕ ಬಾರಿ ಸಂಸದರ ಗಮನಕ್ಕೆ ತರಲಾಗಿತ್ತು. ಆದರೆ ಯಾವುದೂ ಪ್ರಯೋಜನವಾಗಿಲ್ಲ. ನಾವು ಸಂಸದರ ಮೇಲೆ ಅನೇಕ ಭರವಸೆಗಳನ್ನು ಇಟ್ಟುಕೊಂಡಿದ್ದೆವು ಎಲ್ಲವೂ ಸುಳ್ಳಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

“ಮುಲ್ಕಿ ನ ಪಂ ಆಡಳಿತದೊಂದಿಗೆ ಹೊಂದಾಣಿಕೆ ಮಾಡಿಕೊಂಡು ನಮ್ಮ ಅಸೋಸಿಯೇಶನ್ ಕಾರ್ಯಾಚರಿಸಲಿದೆ” ಎಂದು ಹೇಳಿದ ಜಯ ಶೆಟ್ಟಿ, ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, “ಕೈಗಾರಿಕಾ ಪ್ರದೇಶದಲ್ಲಿ ಅನೇಕರು ಸರಕಾರಿ ಜಾಗ ಪಡೆದು ಕೈಗಾರಿಕೆಗೆ ಉಪಯೋಗಿಸದೆ ಇತರ ಅವ್ಯವಹಾರಗಳಿಗೆ ಉಪಯೋಗಿಸುತ್ತಿದ್ದಾರೆ. ಈ ಬಗ್ಗೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಿಕೊಟ್ಟು ಬಾಡಿಗೆ ಪಡೆಯುತ್ತಿದ್ದಾರೆ. ಅನೇಕರು ಜಾಗ ಪಡೆದು ಹಲವು ವರ್ಷವಾದರೂ ಕೈಗಾರಿಕೆ ಸ್ಥಾಪಿಸಿಲ್ಲ. ಸರಕಾರ ಅದನ್ನು ಹಿಂಪಡೆಯಬೇಕು” ಎಂದರು.

“ಮೂಲಭೂತ ಸಮಸ್ಯೆಗಳ ಸಮಗ್ರ ನಿರ್ವಹಣೆಗಾಗಿ ಕೈಗಾರಿಕಾ ಪ್ರದೇಶವನ್ನು ಮುಲ್ಕಿ ನ ಪಂ ಆಡಳಿತಕ್ಕೊಳಪಡಿಸಬೇಕು. ಇಲ್ಲಿನ ಕೈಗಾರಿಕೆಗಳು ನ ಪಂ.ಗೆ ಸಲ್ಲಬೇಕಾದ ತೆರಿಗೆಗಳನ್ನು ಪಾವತಿಸಲು ಸಿದ್ಧವಿದೆ” ಎಂದವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಕೈಗಾರಿಕಾ ಪ್ರದೇಶದ ರಸ್ತೆ, ದಾರಿದೀಪ, ಕುಡಿಯುವ ನೀರಿನ ನಿರ್ವಹಣೆ ಕುರಿತು ನ ಪಂ ಹಾಗೂ ಕೆಐಎಡಿಬಿ ಮಧ್ಯೆ ಗೊಂದಲವಿತ್ತು. ಸಮಸ್ಯೆ ನಿವಾರಿಸಬೇಕಾದ ಕೆಐಎಡಿಬಿ ಯಾವುದೇ ಮೂಲಭೂತ ಸಮಸ್ಯೆಗಳ ಬಗ್ಗೆ ಉದಾಸೀನ ಪ್ರವರ್ತಿ ತೋರಿಸುತ್ತಿತ್ತು ಎಂದು ಅವರು ಹೇಳಿದರು.

 

LEAVE A REPLY