ಕುಡುಕರ ದಾಖಲೆ ಇಟ್ಟುಕೊಳ್ಳಿ : ಮದ್ಯದಂಗಡಿಗಳಿಗೆ ಮ ಪ್ರ ಸರಕಾರದಿಂದ ಸೂಚನೆ

ಸಾಂದರ್ಭಿಕ ಚಿತ್ರ

ಭೋಪಾಲ್ : ಮದ್ಯದಂಗಡಿಗಳಿಗೆ ಬಂದು ಸುರಪಾನ ಮಾಡುವ ನಿಷ್ಠಾವಂತ ಕುಡುಕರ ದಾಖಲೆಗಳನ್ನು ಇಟ್ಟುಕೊಳ್ಳಿ ಎಂದು ವೈನ್ ಶಾಪ್ ಮಾಲಕರಿಗೆ ಮದ್ಯಪ್ರದೇಶ ಸರಕಾರ ಸೂಚನೆ ನೀಡಿದೆ. ಹಾಗಾಗಿ ಇನ್ಮುಂದೆ ಕೇವಲ ಕುಡುಕರಿಗೆ ಮದ್ಯ ವಿತರಣೆ ಮಾಡುವುದಷ್ಟೇ ಅಲ್ಲ, ಅವರು ಯಾರು.. ಎಷ್ಟು ಹೊತ್ತಿಗೆ ಬಂದ್ರು… ಎಷ್ಟು ಕುಡಿದ್ರು…ಅನ್ನೋ ಲೆಕ್ಕಾಚಾರವನ್ನೂ ಮದ್ಯದಂಗಡಿಗಳು ಇಟ್ಟುಕೊಳ್ಳಬೇಕಾಗಿದೆ…!

ರಾಜ್ಯದಾದ್ಯಂತ ಇರುವ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ (ಐಎಂಎಫ್‍ಎಲ್) ಅಂಗಡಿ ಮಾಲಕರು ಈ ಲೆಕ್ಕಾಚಾರವನ್ನು ಖಡ್ಡಾಯವಾಗಿ ಬರೆದಿಟ್ಟುಕೊಳ್ಳಬೇಕು ಹಾಗೂ ದಾಖಲೆಗಳನ್ನು ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಬೇಕು ಎಂದು ಸುತ್ತೋಲೆಯನ್ನೂ ಹೊರಡಿಸಲಾಗಿದೆ.

ಪವಿತ್ರ ನರ್ಮದ ನದಿ ಕಿನಾರೆಯ ಐದು ಕಿ.ಮೀ.ವ್ಯಾಪ್ತಿಯೊಳಗಿನ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲು ಮುಖ್ಯಮಂತ್ರಿ ಶಿವರಾಜ್ ಚೌಹಾಣ ಅವರು ನಿರ್ಧರಿಸಿದ ಬೆನ್ನಲ್ಲೇ ಇಂಥದ್ದೊಂದು ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡಬಾರದು ಎಂದೂ ಕೂಡಾ ನಿರ್ಧರಿಸಲಾಗಿದೆ.

ಕುಡುಕರನ್ನು ನಿಯಂತ್ರಿಸುವ ಸಲುವಾಥೀ ನಿರ್ಧಾರಕ್ಕೆ ಬರಲಾಗಿದೆ ಎಂದಿರುವ ಸರಕಾರ, ಅಂಗಡಿ ಮಾಲಕರು ಗ್ರಾಹಕರ ಹೆಸರನ್ನು ಹೇಗೆ ಕೇಳಬೇಕು, ದಾಖಲೆಗಳನ್ನು ಹೇಗೆ ಸಂಗ್ರಹಿಸಿಟ್ಟುಕೊಳ್ಳಬೇಕು ಎಂಬ ಬಗ್ಗೆ ಏನೂ ತಿಳಿಸಿಲ್ಲ. ಆದರೆ ಕುಡುಕರು ಮಾತ್ರ ಇದಕ್ಕೆ ಹೇಗೆ ಸ್ಪಂದಿಸುತ್ತಾರೆ ಅನ್ನೋದನ್ನು ಕಾದುನೋಡಬೇಕಾಗಿದೆ…!