ತೂಮಿನಾಡು ಕುಡಿಯುವ ನೀರಿನ ಸಮಸ್ಯೆಗೆ ಸಂಸದರ ತುರ್ತು ಪರಿಹಾರ

ಕಾಲನಿ ಸಂದರ್ಶಿಸಿದ ಸಂಸದರು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬೇಸಿಗೆ ಕಾಲ ಆರಂಭವಾಗುವ ಮೊದಲೇ ನೀರಿಲ್ಲದೆ ತತ್ತರಿಸುತ್ತಿರುವ  ಮಂಜೇಶ್ವರ ಗ್ರಾ ಪಂ ವ್ಯಾಪ್ತಿಯಲ್ಲಿರುವ ತೂಮಿನಾಡು ಕಾಲನಿಯ ಸ್ಥಿತಿಗತಿಗಳನ್ನು ವೀಕ್ಷಿಸಲು ಕಾಲನಿಗೆ ಆಗಮಿಸಿದ ಕಾಸರಗೋಡು ಸಂಸದ ಪಿ ಕರುಣಾಕರನ್ ಘಟನಾ ಸ್ಥಳದಲ್ಲೇ ಸಮಸ್ಯೆಗೊಂದು ತುರ್ತು ಪರಿಹಾರವನ್ನು ಘೋಷಿಸಿದ್ದಾರೆ.

ಕಳೆದ ಕೆಲ ಸಮಯ ಮಂಜೇಶ್ವರ ಗ್ರಾಹಕರ ವೇದಿಕೆ ತೂಮಿನಾಡು ಕಾಲನಿಯ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಹರಸಾಹಸ ಪಡುತ್ತಿರುವ ಮಧ್ಯೆ ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯೊಂದರ ಸಂಸದರ ನಿಧಿ ವತಿಯಿಂದ ನಿರ್ಮಿಸಲಾದ ಕಟ್ಟಡವನ್ನು ಉದ್ಘಾಟಿಸಲು ಆಗಮಿಸಿದ ಸಂಸದರಿಗೆ ಮಂಜೇಶ್ವರ ಗ್ರಾಹಕರ ವೇದಿಕೆ ಕಾರ್ಯದರ್ಶಿ ಹಾಗೂ ಊರವರು ವಿಷಯವನ್ನು ಗಮನಕ್ಕೆ ತಂದ ಬಳಿಕ ಸಂಸದರು ಸ್ಥಳಕ್ಕೆ ಭೇಟಿ ಕೊಟ್ಟರು.

ವಿದ್ಯುತ್ ಸಂಪರ್ಕವಿಲ್ಲವೆಂಬ ಕಾರಣಕ್ಕೆ ನೆನೆಗುದಿಗೆ ಬಿದ್ದ ಪಂಪ್ ಶೆಡ್ಡಿಗೆ ವಿದ್ಯುತ್ ಸಂಪರ್ಕಕ್ಕಾಗಿ ಸಂಸದರ ಫಂಡಿನಿಂದ ಹಣ ನೀಡುವುದಾಗಿ ಭರವಸೆ ನೀಡಿದ ಸಂಸದರು ಕೂಡಲೇ ಘಟನಾ ಸ್ಥಳದಲ್ಲೇ ಪೆÇೀನ್ ಮೂಲಕ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಸೂಚನೆ ನೀಡಿದ್ದಾರೆ. ಊರವರ ಮನವಿಗೆ ಕೂಡಲೇ ಸ್ಪಂದಿಸಿ ತಕ್ಷಣ ಪರಿಹಾರವನ್ನು ಘೋಷಿಸಿದ ಸಂಸದ ಪಿ ಕರುಣಾಕರನ್ ರವರನ್ನು ಮಂಜೇಶ್ವರ ಗ್ರಾಹಕರ ವೇದಿಕೆ ಶ್ಲಾಘಿಸಿದೆ.

ನೀರಿಗಾಗಿ ಗ್ರಾಮಸ್ಥರು ಇಷ್ಟೊಂದು ಪರದಾಡುತಿದ್ದರೂ ಈ ವಾರ್ಡಿನ ಅಭಿವೃದ್ದಿಗಾಗಿ ಚುನಾಯಿತ ಜನಪ್ರತಿನಿಧಿ ಏನೂ ಮಾಡದಿರುವುದು ಚರ್ಚಾ ವಿಷಯವಾಗಿದೆ. ಮನೆಯ ಹತ್ತಿರವೇ ಇರುವ ಸರಕಾರಿ ಶಾಲೆಯ ಕಟ್ಟಡ ಉದ್ಘಾಟನೆಗೂ ವಾರ್ಡ್ ಸದಸ್ಯೆ ಗೈರು ಹಾಜರಿಯಾಗಿರುವುದು ಸ್ವತಃ ಪಕ್ಷದ ನೇತಾರರಲ್ಲೇ ಇರಿಸುಮುರಿಸನ್ನು ಉಂಟು ಮಾಡಿದೆ.